ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌

ಮಂಗಳೂರು: ಕರಾವಳಿಯಲ್ಲಿ ಬುಧವಾರ ಮಳೆ ಇಳಿಮುಖಗೊಂಡಿದೆ. ಹಗಲು ಹೊತ್ತು ಮಳೆ ದೂರವಾಗಿದ್ದು, ಹಲವಡೆ ಬಿಸಿಲು ಆವರಿಸಿತ್ತು. ಮುಂದಿನ ಮೂರು ದಿನಗಳ ಕಾಲ ಭಾರತೀಯ ಹವಾಮಾನ ಇಲಾಖೆ ಕರಾವಳಿಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ.
ದ.ಕ. ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಪುತ್ತೂರು, ಸುಳ್ಯ, ಬಂಟ್ವಾಳಗಳಲ್ಲಿ ಮಳೆಯಾದರೆ ಮಂಗಳೂರು, ಬೆಳ್ತಂಗಡಿ, ಕಡಬ ಸೇರಿದಂತೆ ಹಲವು ಕಡೆಗಳಲ್ಲಿ ಹನಿ ಮಳೆಯಾಗಿದೆ. ಬಳಿಕ ಬಿಸಿಲು ಕಾಣಿಸಿದ್ದು, ಸಂಜೆ ವೇಳೆಗೆ ಮತ್ತೆ ಮಳೆ ಕಾಣಿಸಿದೆ. ಜಿಲ್ಲೆಯ ತಗ್ಗುಪ್ರದೇಶದಲ್ಲಿ ಮಳೆ ಇಳಿಮುಖವಾದರೂ ಘಾಟ್‌ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ನದಿಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿದ್ದು, ಅಪಾಯದ ಮಟ್ಟಮೀರಿಲ್ಲ. ಮಳೆಯಿಂದಾಗಿ ತುಂಬೆ ಡ್ಯಾಂ ಸೇರಿದಂತೆ ಉಪ್ಪಿನಂಗಡಿ ಭಾಗದಲ್ಲಿ ನೀರಿನ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ.