ದಾಂಡೇಲಿ : ಅಭಯಾರಣ್ಯದಲ್ಲಿರಬೇಕಾದ ಕರಡಿಗಳು ನಾಡಿನತ್ತ ಸಂಚರಿಸುತ್ತಿದೆ. ದಾಂಡೇಲಿ, ಜೋಯಡಾದ ಗ್ರಾಮಗಳಲ್ಲಿ ಕರಡಿಗಳೆಂದರೆ ಬೆಚ್ಚಿ ಬೀಳುತ್ತಾರೆ. ಅವು ಸದ್ದಿಲ್ಲದೆ ಎಲ್ಲಿಂದಲೋ ಬಂದು ದಾಳಿ ಮಾಡುತ್ತದೆ. ಪರಚುತ್ತದೆ. ಕಚ್ಚಿ ಗಾಯಗೊಳಿಸಿ ಆಸ್ಪತ್ರೆ ಸೇರುವಂತೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೊಮ್ಮನಳ್ಳಿ ಗ್ರಾಮದಲ್ಲಿ ತೋಟದ ಗೋಡಂಬಿ ಬೆಳೆ ಕಾಯುತ್ತಿದ್ದಾಗ ಕರಡಿ ದಾಳಿ ಮಾಡಿ ಕಚ್ಚಿ ತೀವ್ರ ಗಾಯವನ್ನುಂಟು ಮಾಡಿತು. ಈ ಘಟನೆ ಮಾಯುವಷ್ಟರಲ್ಲೆ ಹುಡಸಾ ಗ್ರಾಮದಲ್ಲಿ ಬೇಲಿ ಕಟ್ಟುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಕಚ್ಚಿ ತೀವ್ರ ಸ್ವರೂಪದ ಮಾರಣಾಂತಿಕ ಗಾಯಗೊಳಿಸಿತು. ಈ ಇಬ್ಬರನ್ನು ಧಾರವಾಡದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಕುಳಗಿ ಗ್ರಾಮದಲ್ಲಿ ವಾಕಿಂಗ್ ಮಾಡಲು ಹೋದ ವ್ಯಕ್ತಿಯನ್ನು ಎರಡು ಕರಡಿಗಳು ಬೆನ್ನಟ್ಟಿ ದ್ದವು. ಸ್ವಲ್ಪದರಲ್ಲೆ ಅವರು ಬಚಾವಾಗಿದ್ದರು. ಹೋದ ವಾರ ಕರಡಿಯೊಂದು ಅವೇಡಾ ಬಸ್ ನಿಲ್ದಾಣದಲ್ಲಿ ರಾತ್ರಿಯ ವೇಳೆ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿಯಾಗಿತ್ತು. ಇದೇ ರೀತಿ ವಿಟ್ನಾಳ, ಗೊಬ್ರಾಳ ಗ್ರಾಮಗಳಲ್ಲೂ ಕರಡಿ ಕಂಡುಬಂದಿದೆ. ಬುಧವಾರ ರಾತ್ರಿ ಜಗಲಬೇಟ ಸಮೀಪದ ತಿಂಬೋಲಿ ಗ್ರಾಮದ ಊರ ಮಧ್ಯದಲ್ಲಿರುವ ಬೀಗ ಹಾಕಿರುವ ನಂದು ದೇಸಾಯಿ ಅವರ ಮನೆಯ ಜಗುಲಿಯಲ್ಲಿ ಕರಡಿಯೊಂದು ಅರಚುತ್ತಿತ್ತು. ಕರಡಿ ಅರಚುವ ಶಬ್ದಕ್ಕೆ ಎಚ್ಚತ್ತ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಊರ ನಾಯಿಗಳು ಗುಂಪು ಸೇರಿ ಬೊಗಳುತ್ತಿದ್ದಂತೆ ಹಾಗೂ ಗ್ರಾಮಸ್ಥರ ಗಲಾಟೆಗೆ ಕರಡಿ ಓಡಿ ಹೋಗಿದೆ. ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಲಸು ಮತ್ತು ಗೋಡಂಬಿ ಹಣ್ಣಿನ ಋತುವಿನಲ್ಲಿ ಕರಡಿಗಳು ಹಣ್ಣು ತಿನ್ನಲು ಬರುತ್ತದೆ. ಈ ಸಂಧರ್ಭದಲ್ಲಿ ದಾಳಿಮಾಡುವ ಸಾಧ್ಯತೆ ಹೆಚ್ಚೆಂದು ಹಿರಿಯರಾದ ಬಾಬು ಭಾತಕಾಂಡೆ ನುಡಿದಿದ್ದಾರೆ. ಅರಣ್ಯ ಹಾಗೂ ವನ್ಯಜೀವಿ ಇಲಾಖೆ ಜಂಟಿಯಾಗಿ ಕರಡಿ ಹಾಗೂ ಮಾನವನ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.