ಕನ್ನಡಕ್ಕಾಗಿ ಧ್ವನಿ: ಸ್ವಾಭಿಮಾನದ ಸಂಘರ್ಷ

ನಾಡು ನುಡಿಯ ಸ್ವಾಭಿಮಾನ ಮತ್ತು ಬದ್ಧತೆಯ ಪ್ರಶ್ನೆ ಈಗ ಎದ್ದಿದೆ.
ನಾಲ್ಕೈದು ವಿವಾದಗಳಿವೆ. ಕನ್ನಡಿಗರನ್ನು ಪಹಲ್ಗಾಮ್ ಭಯೋತ್ಪಾದಕರ ಮನಸ್ಥಿತಿಗೆ ಹೋಲಿಸಿದ ಸೋನು ನಿಗಮ್ ಪ್ರಕರಣ. ಬೆಂಗಳೂರಿನ ಎಸ್‌ಬಿಐ ಶಾಖೆಯಲ್ಲಿ ಹಿರಿಯ ಸಿಬ್ಬಂದಿಯೋರ್ವರು ಕನ್ನಡದ ಬಗ್ಗೆ ಅಸಡ್ಡೆಯ ಮಾತನಾಡಿದ್ದು… ರಾಜಧಾನಿಯ ಹೋಟೆಲ್ ಒಂದರ ನೇಮ್ ಬೋರ್ಡ್ನಲ್ಲಿ ಕನ್ನಡಿಗರನ್ನು ಕುರಿತು ಬಯ್ಗುಳ… ಈಗ ಖ್ಯಾತ ನಟ ಕಮಲ್ ಹಾಸನ್ ಕನ್ನಡದ ಹುಟ್ಟಿನ ಕುರಿತು ನೀಡಿದ ಅಪ್ರಬುದ್ಧ, ಅವಾಸ್ತವದ ಹೇಳಿಕೆ, ಜೊತೆ ಜೊತೆಗೆ ವಿಶ್ವವಿಖ್ಯಾತ ಉತ್ಪಾದನೆಯಾದ ಮೈಸೂರು ಸ್ಯಾಂಡಲ್ ಸೋಪಿಗೆ ಚಿತ್ರತಾರೆ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಿಸುವ ಮೂಲಕ ಸರ್ಕಾರವೂ ಸ್ವಾಭಿಮಾನಿಗಳನ್ನು ಕೆಣಕಿ ಮೈಮೇಲೆ ಎಳೆದುಕೊಂಡಿದೆ.
ಸಾಮಾನ್ಯವಾಗಿ ನವೆಂಬರ್ ತಿಂಗಳು ಕನ್ನಡ ನಾಡು ನುಡಿಯ ವೀರಾವೇಶ, ಭಾಷಾಭಿಮಾನಕ್ಕೆ ಸಾಕ್ಷಿಯಾಗುತ್ತದೆ. ಆದರೆ ಈ ಸಾರಿ ಮೇ ತಿಂಗಳಲ್ಲಿ ಕನ್ನಡಿಗರ ಕೂಗು ಎದ್ದಿದೆ. ಅಷ್ಟೇ ತೀಕ್ಷ÷್ಣ ಪ್ರತಿಕ್ರಿಯೆಗಳೂ ಬಂದಿವೆ. ಹಾಗೆ ನೋಡಿದರೆ ಈ ನಾಲ್ಕೈದು ಸಂಗತಿಗಳು (ವಿವಾದಗಳು!) ಕನ್ನಡಿಗರ ಮನಸ್ಸು, ಸ್ವಾಭಿಮಾನವನ್ನು ಕೆರಳಿಸುವಂಥವೇ. ಕನ್ನಡ ನೆಲದಿಂದ ಸಾಕಷ್ಟು ವಿಶ್ವಾಸ, ಪ್ರೀತಿ, ಸಂಪತ್ತು, ಅಭಿಮಾನ ಪಡೆದವರೇ ಈ ನಾಡು-ಜನರ ಕುರಿತು ವ್ಯಂಗ್ಯವಾಡಿದ್ದು ಆಕ್ಷೇಪಾರ್ಹವೇ.
ಸೋನು ನಿಗಮ್‌ಗೆ ಕನ್ನಡಿಗರು ಏನು ನೀಡಿಲ್ಲ ಹೇಳಿ? ಈತ ಮರುಹುಟ್ಟು ಪಡೆದದ್ದೇ ಇಲ್ಲಿ. ಕನ್ನಡ ಹಾಡು ಹಾಡಿ ಎಂದರೆ, ಕನ್ನಡ, ಕನ್ನಡ, ಪಹಲ್ಗಾಮ್ ಕಂಡಿಲ್ಲವಾ, ಇದೇ ಕಾರಣ.. ಎಂದೆಲ್ಲ ಅಸಹ್ಯ, ಅಪ್ರಬುದ್ಧ ಮಾತು ಈ ಗಾಯಕನಿಗೆ ಬೇಕಿತ್ತಾ? ಇದು ಮದ, ಮತ್ಸರ, ಕೊಬ್ಬಿನ ಮನಸ್ಥಿತಿಯ ಪ್ರತೀಕ ಎಂದು ಜನ ಖಂಡಿಸಿದ್ದರಲ್ಲಿ ತಪ್ಪೇನಿಲ್ಲ ಬಿಡಿ. ಒಂದು ಕ್ಷಮೆ ಕೇಳಲು, ವಿಷಾದ ವ್ಯಕ್ತಪಡಿಸಲು ಇಲ್ಲದ ಮನಸ್ಥಿತಿ, ನ್ಯಾಯಾಲಯದ ಮೊಕದ್ದಮೆ ಬಿದ್ದಾಗ ವಾಸ್ತವ ಏನೆಂಬುದು ಈತನ ಅರಿವಿಗೆ ಬಂತು!
ಎಸ್‌ಬಿಐನ ಮಹಿಳಾ ಉದ್ಯೋಗಿಯೊಬ್ಬರು ಕನ್ನಡ ಮಾತನಾಡಲ್ಲ, ಹಿಂದಿಯನ್ನೇ ಮಾತಾಡೋದು, ಏನು ಮಾಡ್ತೀರಿ ಮಾಡಿ' ಎಂಬ ಧಿಕ್ಕಾರದ ಧೋರಣೆಗೆ ಪಾಠ ಕಲಿಸಲೇಬೇಕಾದ ಸ್ಥಿತಿ ಇದೆ. ಇಲ್ಲಿ ಉದ್ಯೋಗ ಮತ್ತು ಬದುಕು ಬೇಕು. ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪ್ರಯೋಜನ ಬೇಕು. ಆದರೆ ಇಲ್ಲಿಯ ಜನ, ಅವರ ಸಂಸ್ಕೃತಿ, ಭಾಷೆ ಬೇಕಿಲ್ಲ ಎನ್ನುವಷ್ಟು ಉಡಾಫೆ ಧೋರಣೆ ಏಕೋ? ಅನ್ಯ ಭಾಷಿಕರಿಗೆ ಇಲ್ಲಿಯವರನ್ನು ಕೆಣಕಿಸುವ ಹಂಗಿಸುವ ಮನೋಭಾವವೇ ಹೆಚ್ಚಾದಂತಿದೆ. ಪ್ರತಿಭಟನೆ ಜೋರಾದಾಗ ಸಿಬ್ಬಂದಿ ಒತ್ತಾಯಕ್ಕೆ ಕ್ಷಮೆ ಕೋರಿದ ರೀತಿ ಇನ್ನಷ್ಟು ಅಸಹ್ಯಕರವಾಗಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ, ಅದೂ ಭಾರತದಂತಹ ಬಹುಭಾಷೆ, ಬಹು ಸಂಸ್ಕೃತಿಯ ಭೂಮಿಯಲ್ಲಿ ಇಂತಹ ವರ್ತನೆ ಮತ್ತು ಸವಾಲು ಆಘಾತಕಾರಿ. ಇಂಥವಕ್ಕೆ ಕಟ್ಟು ನಿಯಂತ್ರಣ ಹೇರಬೇಕಾಗಿದೆ. ರಾಜಧಾನಿಯ ಕೇಂದ್ರ ಸ್ಥಳದಲ್ಲಿ ಹೋಟೆಲ್ ಇಟ್ಟುಕೊಂಡು ಬದುಕುವ, ಸಂಪತ್ತು ಗಳಿಸುವ ಮಾಲೀಕ ತನ್ನ ಪ್ಲೇ ಬೋರ್ಡ್ನಲ್ಲಿ ಕನ್ನಡಿಗರ ಬಗ್ಗೆ ಅಸಹ್ಯಕರ ರೀತಿ ಬರಹ ಪ್ರದರ್ಶಿಸುವಷ್ಟು ಧಾಷ್ಟö್ರ್ಯ ಬೆಳೆದದ್ದು ಹೇಗೆ? ವಾರಾಂತ್ಯದಲ್ಲಿ ಹಿರಿಯ ನಟ ಕಮಲ್ ಹಾಸನ್ ಕನ್ನಡ ಹುಟ್ಟಿನ ಬಗ್ಗೆ ಅಪ್ರಬುದ್ಧವಾಗಿ ಮಾತನಾಡಿ ಇಡೀ ಭಾಷಾ ವಿವಾದ ಮತ್ತು ಸ್ವಾಭಿಮಾನ ಕೆಣಕಿ ಹೋಗಿದ್ದಾರೆ. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ಅಪ್ಪಟ ಸಂಶೋಧಕ ಅಥವಾ ಭಾಷಾ ಅಧ್ಯಯನಕಾರನ ರೀತಿ ತನ್ನದೇ ಸಿನಿಮಾಥಗ್ ಲೈಫ್’ ಪ್ರಚಾರಕ್ಕೆ ಬಂದು, ಬೆಂಗಳೂರಿನಲ್ಲೇ ವಿವಾದ ಕೆಣಕಿದ್ದಾರೆ.
ಕಮಲ್ ಹಾಸನ್ ಕನ್ನಡ ಗೊತ್ತಿಲ್ಲದವರಲ್ಲ. ಕನ್ನಡಿಗರ ಅಭಿಮಾನ, ಪ್ರೀತಿ ಪಡೆದಷ್ಟು ಸ್ವತಃ ಅವರ ತಮಿಳಿನಲ್ಲಿ ಕೂಡ ಸಿಕ್ಕಿರಲಿಕ್ಕಿಲ್ಲ. ಇಲ್ಲಿ ಕರೆ ತಂದು ಸಿನಿಮಾ ಮಾಡಿದ್ದಲ್ಲದೇ, ಅವರ ಚಿತ್ರಗಳ ಡಬ್ಬಿಂಗ್ ಕೂಡ ಜನತೆ ಒಪ್ಪಿಕೊಂಡಿದ್ದಾರೆ. ಕನ್ನಡದ ಹಿರಿಯ ನಟರೆದುರೇ ಕನ್ನಡದ ಬಗ್ಗೆ ಟಂಗ್' ಬದಲಿಸಿದರೆ ಕನ್ನಡಿಗರಿಗಷ್ಟೇ ಅಲ್ಲ ಅಥವಾ ಭಾಷೆಗಷ್ಟೇ ಅಲ್ಲ, ಇತಿಹಾಸಕ್ಕೂ ಅಪಚಾರ-ಅಪಮಾನ ಮಾಡಿದಂತೆ. ತಮಿಳಿನ ಬಗ್ಗೆ ಅಭಿಮಾನ ಇಟ್ಟುಕೊಳ್ಳಲಿ. ಆದರೆ ಅನ್ಯ ಭಾಷೆಗಳ ಬಗ್ಗೆ ಮಾತ್ರ‍್ಯ ಇರಬಾರದು. ತಮಿಳು ಸಿನಿಮಾಕ್ಕೆ ಬೆಂಗಳೂರಿನ ತಮಿಳರನ್ನು ಆಕರ್ಷಿಸುವ ಉದ್ದೇಶವೂ ಇದ್ದೀತು. ಇದೇ ಕನ್ನಡದ ನಟರು, ವಿದ್ವಾಂಸರು, ಕನ್ನಡ ಸಂಘಟನೆಗಳು ತಮಿಳುನಾಡಿನಲ್ಲಿ ನಿಂತು ಈ ಮಾತನಾಡಿದ್ದರೆ ಸುಮ್ಮನಿರುತ್ತಿದ್ದರೇ? ಕಮಲ್ ಹಾಸನ್‌ಗೆ ಈಗ ಪ್ರತಿಭಟನೆಯ ಕಾವು ತಟ್ಟಿದೆ. ಇದಕ್ಕೆಲ್ಲ ಕಾರಣ, ಆಡಳಿತದಲ್ಲಿ ಕನ್ನಡಕ್ಕೆ, ಕನ್ನಡದ ಸ್ಥಾನಕ್ಕೆ, ಸ್ವಾಭಿಮಾನಕ್ಕೆ ಇರುವ ಬದ್ಧತೆಯ ಕೊರತೆ. ಇದೇ ವಾರದಲ್ಲಿ ಕನ್ನಡಿಗರ ಅತ್ಯಂತ ಸ್ವಾಭಿಮಾನದ ಉದ್ಯಮ, ಶತಮಾನ ಕಂಡಿರುವ ಕರ್ನಾಟಕ ಸೋಪು ಮತ್ತು ಮಾರ್ಜಕ ಉತ್ಪಾದನೆಯ ರಾಯಭಾರಿಯಾಗಿ ಸರ್ಕಾರವೇ ಚಿತ್ರನಟಿ ತಮನ್ನಾ ಭಾಟಿಯಾರನ್ನು ನೇಮಿಸಿತು. ಕನ್ನಡಿರ‍್ಯಾರೂ ಸಿಗಲಿಲ್ಲವೇ? ಎಂದು ಕನ್ನಡ ಸಂಘಟನೆಗಳು ಮತ್ತು ಚಿತ್ರ ನಟ ನಟಿಯರೇ ಪ್ರಶ್ನಿಸಿದ್ದಾರೆ. ತಾವೇ ಪುಕ್ಕಟೆಯಾಗಿ ಬ್ರಾö್ಯಂಡ್ ಅಂಬಾಸಿಡರ್ ಆಗುತ್ತಿದ್ದೆವಲ್ಲ ಎಂದು ಪ್ರಶ್ನಿಸಿದ್ದಾರೆ. ೬.೨೦ ಕೋಟಿ ರೂ ಕೊಟ್ಟು ತಮನ್ನಾ ಸೋಪು ಬಳಸುವುದನ್ನು ಚಿತ್ರೀಕರಿಸಿ ಜಾಹೀರಾತುಸೇವೆ’ ಪಡೆಯುವ ಸರ್ಕಾರದ ಮನೋಭಾವ ಯಾರ ಓಲೈಕೆಗೋ..!?
ತಮನ್ನಾ ನೇಮಕದಿಂದ ಅಂತರರಾಜ್ಯ, ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಅನುಕೂಲ ಎಂಬ ಕಾರಣವನ್ನು ಸಚಿವರು ಕೊಟ್ಟರೆ, ಇದೇ ಸಂಪುಟದ ಕೆಲ ಸಚಿವರೇ ವಿರೋಧಿಸಿಯೂ ಆಗಿದೆ. ಹಾನಿ ಅಂಚಿನಲ್ಲಿದ್ದ ಮೈಸೂರು ಸ್ಯಾಂಡಲ್ ಘಟಕವನ್ನು ಲಾಭಕ್ಕೆ ತಂದು, ವಹಿವಾಟನ್ನು ೧೭೦೦ ಕೋಟಿಗೆ ವಿಸ್ತರಿಸಿ, ಇದನ್ನು ದಾಖಲೆಯ ೫ ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಸರ್ಕಾರದ್ದು. ಆದ್ದರಿಂದ ಇದು ವಾಣಿಜ್ಯ ತಂತ್ರ, ತಮನ್ನಾರಿಂದ ಮಾರುಕಟ್ಟೆ ವಿಸ್ತರಿಸೀತು ಎಂಬ ಇಂಗಿತ ಸಹಜವಾಗಿ ಇದೆ. ಆದರೆ ಕನ್ನಡಿಗರ ಅಭಿಮಾನದ ಮೈಸೂರು ಸ್ಯಾಂಡಲ್‌ಗೆ ಇದರ ಅವಶ್ಯಕತೆ ಇರಲಿಲ್ಲ ಎಂಬುದು ನಾಡಿನಲ್ಲಿ ಕೇಳಿಬರುತ್ತಿರುವ ಅನಿಸಿಕೆ.
ಈ ಹಿಂದೆ ರಾಜ್ಯದ ಹಲವು ಸಾರ್ವಜನಿಕ, ಸಾಮಾಜಿಕ ಕಾಳಜಿಯ ಕಾರ್ಯಗಳಿಗೆ ಕನ್ನಡದ ಕಲಾವಿದರು, ಹಿರಿಯ ನಟರು ಉಚಿತವಾಗಿ ರಾಯಭಾರಿಗಳಾಗಿದ್ದು ಇದೆ. ಈ ನಾಡಿನ, ಭಾಷೆ, ನೆಲ-ಜಲದ ಬಗ್ಗೆ ಅಭಿಮಾನ ತೋರಿದ್ದಿದೆ. ಈಗಲೂ ಅಂಥವರಿದ್ದರು. ಮೂಲ ಕನ್ನಡಿಗರಾದ ರಶ್ಮಿಕಾ ಮಂದಣ್ಣ, ದೀಪಿಕಾ ಪಡುಕೋಣೆ, ಪೂಜಾ ಹೆಗಡೆ ಅಂಥವರು ಲಭ್ಯರಾಗಿಲ್ಲ ಎನ್ನುವ ಕಾರಣಕ್ಕೆ ತಮನ್ನಾ ಭಾಟಿಯಾರನ್ನು ನೇಮಿಸಲಾಯಿತು ಎನ್ನುವ ಸಚಿವರ ಹೇಳಿಕೆ, ೬.೨೦ ಕೋಟಿ ರಾಯಧನದ ಎದುರು ಸಮರ್ಥನೆ ಎನಿಸುವುದಿಲ್ಲ. ಹಾಗೆ ನೋಡಿದರೆ ಮೈಸೂರು ಸ್ಯಾಂಡಲ್ ಸೋಪ್ ಇತ್ತೀಚಿನ ನಾಲ್ಕಾರು ವರ್ಷಗಳಲ್ಲೇ, ಬೇಡದ ವಿಷಯಗಳಿಗೆ, ಅಲ್ಲಿಯ ಭ್ರಷ್ಟಾಚಾರ, ದುರಾಡಳಿತ, ಕನ್ನಡ ಕಾರ್ಮಿಕರ ಮೇಲಿನ ದಬ್ಬಾಳಿಕೆಗಳಿಂದಾಗಿ ನಕಾರಾತ್ಮಕ ಪ್ರಚಾರ ಪಡೆದುಕೊಳ್ಳುತ್ತಿದೆ.
ಬೇರೆ ರಾಜ್ಯ ಮೂಲದ ಹಿರಿಯ ಅಧಿಕಾರಿಗಳು ಇಲ್ಲಿ ಬಂದು ಮಿಂದು' ಹೋದದ್ದೇ ಜಾಸ್ತಿ. ಹಲವು ಅಧಿಕಾರಿಗಳ ಮೇಲೆ ಲೋಕಾಯುಕ್ತ ರೇಡ್ ಆಗಿತ್ತು. ಕಳೆದ ಸರ್ಕಾರದಲ್ಲಿ ಅಧ್ಯಕ್ಷರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಪ್ರಕರಣ ಇಡೀ ನಾಡನ್ನೇ ದಂಗಾಗಿಸಿತ್ತು. ಅವರ ಮಗನ ಕಚೇರಿ ಮತ್ತು ನಂತರ ಅವರ ಮನೆಯ ಮೇಲೂ ದಾಳಿ ನಡೆದು ಕೋಟ್ಯಂತರ ರೂಪಾಯಿ ಹಣ ಜಪ್ತಿಯಾಗಿತ್ತು. ಆಗಲೇ ಗೊತ್ತಾದದ್ದು ಮೈಸೂರು ಸ್ಯಾಂಡಲ್ ಸೋಪಿನಬಣ್ಣ’; ಸೋಪಿನ `ನೊರೆ’ ಹೊರಬಂದದ್ದು !
ಅಲ್ಲಿಯ ಕಾರ್ಮಿಕರು, ಕಾರ್ಮಿಕ ಸಂಘಟನೆಗಳು ತಮ್ಮ ದುಡಿಮೆಯ ಹಕ್ಕು ಕೇಳುತ್ತಿದ್ದರೆ, ಕಾರ್ಮಿಕ ಸಂಘಟನೆಗಳು ಕೆಎಸ್‌ಡಿಎಲ್‌ನ ಹಲವು ಭ್ರಷ್ಟಾಚಾರಗಳ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.ಅದೇ ಅರಣ್ಯ ಇಲಾಖೆ ನೋಡಿ. ಖ್ಯಾತ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ರಾಯಭಾರಿಯನ್ನಾಗಿ ನೇಮಿಸಿ, ಪರಿಸರ ಪ್ರೇಮಿಗಳ ಅಭಿಮಾನವನ್ನು ಹೆಚ್ಚಿಸಿಕೊಂಡಿತು.