ಕಳ್ಳತನದ ಬಗ್ಗೆ, ಸ್ಮಗ್ಲಿಂಗ್ ಬಗ್ಗೆ, ಬಿರುಸಾಗಿ ಚರ್ಚೆ ನಡೆದಿತ್ತು. ವಿಶ್ವ ವಿಶಾಲು ಹುರುಪಿನಿಂದ ಮಾತಾಡುತ್ತಿದ್ದರು.
“ನಾನು ಚಿಕ್ಕಂದಿನಲ್ಲಿ ಕೇಳಿದ ಎರಡು ಪ್ರಸಂಗಗಳನ್ನು ಹೇಳ್ತೀನಿ, ಕಳ್ಳ ಯಾರು ಅಂತ ಊಹಿಸಿ” ಎಂದೆ. ವಿಶ್ವನ ಕಿವಿ ನೆಟ್ಟಗಾಯಿತು. “ನೀನಲ್ಲ ತಾನೇ” ಎಂದು ವಿಶ್ವ ನಕ್ಕ.
“೫೦ ವರ್ಷಗಳ ಹಿಂದಿನ ಘಟನೆ. ಮನೆ ಮುಂದೆ ಒಗೆದು ಒಣ ಹಾಕಿದ್ದ ಪ್ಯಾಂಟು ಷರಟು ಕಳ್ಳತನವಾಗಿತ್ತು, ಮನೆ ಮಾಲಿಕ ದೂರು ಕೊಡಲು ಪೊಲೀಸ್ ಸ್ಟೇಷನ್‌ಗೆ ಹೋದ”
“ಪೊಲೀಸ್ ಕೇಸ್ ಆಯ್ತಾ?” ವಿಶಾಲು ಕೇಳಿದಳು.
“ಕೇಳಿ ಮುಂದೆ, ಪೊಲೀಸ್ ಸಾಹೇಬರು ದೂರು ಕೇಳಿದ ಮೇಲೆ ಮನೆ ಮಾಲೀಕನಿಗೆ ಲಾಠಿಯಿಂದ ಹೊಡೆದು ಹೀಗೆ ಎಚ್ಚರಿಸಿದರು. ಕಳ್ಳರು ನೋಡಿದರೆ ಕದೀತಾರೆ ಅಂತ ಗೊತ್ತಿದ್ದೂ ಮನೆ ಮುಂದೆ ಬಟ್ಟೆ ಒಣ ಹಾಕಿದ್ದು ನಿಮ್ಮ ತಪ್ಪು, ಹೋಗಿ ಆಚೆ ಎಂದು ಬೆಂಡೆತ್ತಿದರು”.
“ಎಂಥ ಕಾಲ ಬಂತಪ್ಪ” ಎಂದಳು ವಿಶಾಲು.
“ಮತ್ತೊಂದು ಪ್ರಸಂಗ ಹಳ್ಳೀಲಿ ನಡೆದಿದ್ದು, ಕಳ್ಳ ತೆಂಗಿನಮರ ಹತ್ತುತ್ತಾ ಇದ್ದಾಗ ಓನರ್ ಆದ ಪಟೇಲರ ಕಣ್ಣಿಗೆ ಬಿದ್ದ, ಏಯ್ ಕಳ್ಳ ಯಾಕೋ ತೆಂಗಿನ ಮರ ಹತ್ತಾ ಇದ್ದೀಯಾ?” ಎಂದು ಪಟೇಲರು ರೇಗಿದರು.
“ನಮ್ಮ ಕರುಗೆ ಹುಲ್ಲು ಬೇಕಿತ್ತು ಸ್ವಾಮಿ” ಎಂದ ಕಳ್ಳ.
“ತೆಂಗಿನ ಮರದ ಮೇಲೆ ಹುಲ್ಲು ಸಿಗುತ್ತೇನೋ ಕಳ್ಳಬಡ್ಡಿ ಮಗನೆ” ಎಂದು ರೇಗಿದರು ಪಟೇಲರು.
“ಸಿಗಲಿಲ್ಲ ಸ್ವಾಮಿ, ಅದಕ್ಕೆ ಇಳೀತಾ ಇದ್ದೀನಿ” ಎಂದು ಹೇಳಿ ಇಳಿದು ಓಡಿದ ಕಳ್ಳ.
“ಎಲ್ಲರೂ ಕಳ್ಳರೇ ಆದ್ರೆ ಸಿಕ್ಕಿ ಬೀಳೊಲ್ಲ ಅಷ್ಟೇ” ಎಂದು ವಿಶಾಲು ವಿಶ್ವನ ಮುಖ ನೋಡಿದಳು.
“ಏಯ್, ನಾನ್ಯವತ್ತು ಕದ್ದಿದ್ದೀನಿ” ಎಂದು ರೇಗಿದ ವಿಶ್ವ.
“ವಿಶಾಲು ಹೇಳ್ತಾ ಇರೋದು ಕರೆಕ್ಟ್ ಇದೆ ವಿಶ್ವ, ಸಿಕ್ಕಿ ಬಿದ್ದೋನ್ ಮಾತ್ರ ಕಳ್ಳ, ಸಿಗದೇ ತಪ್ಪಿಸಿಕೊಂಡವನು ಮಳ್ಳ”
ವಿಶಾಲು ದಿನಪತ್ರಿಕೆಯನ್ನು ಮಡಚುತ್ತ ಚಿನ್ನದ ಸ್ಮಗ್ಲಿಂಗ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದಳು. “ಈ ಮಹಾತಾಯಿ ಎಷ್ಟೋ ಸಲ ದುಬಾಯಿ ಇಂದ ಕೋಟಿಗಟ್ಟಲೆ ಬೆಲೆ ಬಾಳೋ ಚಿನ್ನ ತಂದಿದ್ದಾಳೆ, ಆದರೂ ಸಿಕ್ಕಿ ಬಿದ್ದಿರಲಿಲ್ಲ ಈ ಸಲ ರಾಹು ಕಾಲದಲ್ಲಿ ಫ್ಲೈಟ್ ಲ್ಯಾಂಡ್ ಆಯ್ತು, ಸಿಕ್ಕಿ ಬಿದ್ಲು, ಜೈಲು ಸೇರಿದಳು” ಎಂದಳು.
“ತಪ್ಪಿಸಿಕೊಳ್ಳೋಕೆ ಕೆಲವು ಫಾರ್ಮುಲಗಳಿವೆ” ಎಂದ ವಿಶ್ವ.
“ಚಿನ್ನಾನ ಬೂಟುಗಳಲ್ಲಿ ಬಚ್ಚಿಡ್ತಾರೆ. ಚಿನ್ನದ ಗುಂಡುಗಳನ್ನು ನುಂಗಿ ಹೊಟ್ಟೇಲಿಟ್ಟುಕೊಂಡು ರ‍್ತಾರೆ, ಪಾಪ ಕದಿಯೋವರ ಕಷ್ಟ ಹಿಡಿಯೋವರಿಗೆ ತಿಳಿಯೊಲ್ಲ” ಎಂದಳು ವಿಶಾಲು.
ನಾನು ಕವಿ ವಾಣಿಯನ್ನು ನೆನಪು ಮಾಡಿದೆ. ಖ್ಯಾತ ಲೇಖಕ ಎಸ್.ವಿ.ರಂಗಣ್ಣ ಅವರು ಒಂದು ಕಡೆ ಹೀಗೆ ಹೇಳುತ್ತಾರೆ.
“ನೂರನ್ನ, ಸಾವಿರವನ್ನ ಕದಿಯುವನು ಅಪರಾಧಿ, ಅವನಿಗೆ ಜೈಲು ಖಂಡಿತ, ಲಕ್ಷಾಂತರ ರೂಪಾಯಿ ದೋಚೋನು ಸಾಹಸಿ, ವಾಣಿಜ್ಯ ವೀರ! ಹೀಗಂತ ಅವರು ಹೇಳಿ ೭೦ ವರ್ಷ ಆಗಿದೆ” ಎಂದೆ.
“ಕದ್ದು ಮೇಲೂ ತಪ್ಪಿಸಿಕೊಳ್ಳೋಕೆ ಇಬ್ಬರ ಸಹಾಯ ಬೇಕೇ ಬೇಕಾಗುತ್ತೆ, ಒಂದು ದೇವರ ಸಹಾಯ, ಮತ್ತೊಂದು ಪೊಲೀಸರ ಸಹಾಯ” ಎಂದಳು ವಿಶಾಲು, ನನಗೆ ಅದು ನಿಜ ಎನ್ನಿಸಿತು.
“ಪೊಲೀಸರು ಮನಸ್ಸು ಮಾಡಿದರೆ ಎಂಥ ಕಳ್ಳನನ್ನೂ ಹಿಡಿಯುತ್ತಾರೆ. ಎಷ್ಟೋ ಸಲ ಕಳ್ಳನ್ನ ಆಚೆ ಕಳಿಸಿ ಅವರೇ ಕದಿಯೋದಕ್ಕೆ ಸಹಾಯ ಮಾಡೋದು ಉಂಟು, ಇವೆಲ್ಲ ದಿನಪತ್ರಿಕೆಯಲ್ಲಿ ಬಂದಿರೋ ಸುದ್ದಿಗಳು”. ಎಂದೆ.
“ಪೊಲೀಸ್ ಆಫೀಸರ್ ಮಕ್ಕಳೇ ಕಳ್ಳತನ ಮಾಡಿದರೆ ಗತಿ ಏನು? ಬೇಲಿ ಎದ್ದು ಹೊಲ ಮೇಯ್ದ ಹಾಗೆ” ಎಂದಳು ವಿಶಾಲು.
“ಎವರಿ ಡೇ ಈಸ್ ನಾಟ್ ಸಂಡೇ, ಒಂದಲ್ಲ ಒಂದು ದಿನ ಕೈಗೆ ಕೋಳ ಗ್ಯಾರೆಂಟಿ ತಾನೇ!”
“ಆಕೆಗೆ ಮುಂದೇನ್ ಆಗುತ್ತೆ?” ವಿಶಾಲು ಆತಂಕ ವ್ಯಕ್ತ ಪಡಿಸಿದಳು.
“ಕಳ್ಳಿಗೆ ಏನೂ ಆಗಲ್ಲ, ಆರಾಮಾಗಿ ಜಾಮೀನು ತಗೊಂಡು ಮನೇಲರ‍್ತಾಳೆ, ನೀನು ಧೈರ್ಯವಾಗಿರು” ಎಂದು ವಿಶ್ವ ಹೆಂಡ್ತಿಗೆ ಅಭಯ ನೀಡಿದ. “ಹೆಂಗ್ರೀ ಹೇಳ್ತೀರಾ? ೧೫ ಕೆ.ಜಿ. ಗೋಲ್ಡು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದೆ, ಏನೂ ಆಗೊಲ್ಲ ಅಂತ ಹೇಳ್ತಾ ಇದ್ದೀರಲ್ಲ?”
“ಹೌದು, ರಾಜಕಾರಣಿಗಳ ಸಪೋರ್ಟ್ ಇದ್ರೆ ಏನೂ ಆಗಲ್ಲ, ಎರಡು ವರ್ಷದ ಹಿಂದೆ ಡ್ರಗ್ಸ್ ಕೇಸಲ್ಲಿ ಚಿತ್ರ ನಟಿಯರು ಸಿಕ್ಕಿ ಬಿದ್ದಿದ್ರು ಏನಾಯ್ತು? ಏನೂ ಆಗಲಿಲ್ಲ, ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಆಗಾಗ ಆಗ್ತಾನೇ ಇರುತ್ತೆ, ಈವರೆಗೆ ಎಷ್ಟು ಭ್ರಷ್ಟರಿಗೆ ಶಿಕ್ಷೆಯಾಗಿದೆ?” ಎಂದ ವಿಶ್ವ.
“ಪತ್ರಿಕೆಗಳಲ್ಲಿ ಕೆಲವು ಸಲ ಕಳ್ಳರಿಗೆ ಶಿಕ್ಷೆ ಕೊಟ್ಟು ಸುದ್ದಿ ಬರುತ್ತೆ, ಯಾರೋ ಗ್ರ‍್ರಾಮ ಲೆಕ್ಕಿಗ ೫೦೦ ರೂಪಾಯಿ ಲಂಚ ಹೊಡೆದು ಜೈಲು ಸರ‍್ತಾನೆ, ಇನ್ಯಾರೋ ೨೫ ರೂಪಾಯಿ ಲಂಚ ಕೇಳಿ ಒಂದು ತಿಂಗಳು ಶಿಕ್ಷೆ ಅನುಭವಿಸ್ತಾನೆ, ಆದರೆ ಓಂಬೈನೂರು ಕೋಟಿ ರೂಪಾಯಿ ದನದ ಮೇವನ್ನು ತಿಂದ ಉತ್ತರ ಭಾರತದ ಮೇವು ಪ್ರಸಾದ್ ಅವರು ಅರೆಸ್ಟ್ ಆದ್ರು, ಜಾಮೀನು ಸಿಕ್ತು, ಜೈಲಿಂದ ಆಚೆ ಬಂದರು” ಎಂದೆ. ಅಷ್ಟರಲ್ಲಿ ವಿಶಾಲು ತನ್ನ ಗೆಳತಿ ಪಾರ್ವತಿ ಮಗನ್ನ ನೆನಪು ಮಾಡಿಕೊಂಡಳು.
“ರೀ, ಆ ಪಾರು ಮಗ ಇದ್ದಾನಲ್ಲ ಶೇಖು, ಅವನು ದುಬಾಯಿ ಇಂದ ೫೦ ಕೇ.ಜಿ. ಚಿನ್ನ ತಂದ್ನಂತೆ. ಸಿಕ್ಕಿ ಬೀಳಲಿಲ್ಲ, ಸೇಫ್ ಲ್ಯಾಂಡಿಂಗ್, ಹಾಗಂತ ಎಲ್ಲರೂ ಮಾತಾಡ್ಕೊಳ್ತಾ ಇದ್ರು” ಎಂದು ಮೆಲ್ಲಗೆ ಹೇಳಿದಳು. ಎಲ್ಲರ ಕುತೂಹಲ ಹೆಚ್ಚಾಯ್ತು.
“ಸಾಧ್ಯವೇ ಇಲ್ಲ ೫೦ ಕೇ.ಜಿ. ಚಿನ್ನಾನ ಸ್ಮಗಲ್ ಮಾಡೋವಾಗ ಒಂದಲ್ಲ ಒಂದು ಹಂತದಲ್ಲಿ ಸಿಕ್ಕಿ ಬೀಳಲೇಬೇಕು”. ಎಂದ ವಿಶ್ವ.
“ಸಿಕ್ಕಿ ಬಿದ್ದಿಲ್ಲ, ಏರ್ಪೋಟ್ ಸೆಕ್ಯೂರಿಟಿ ಆಫೀಸರೇ ಕೈ ಕುಲುಕಿ ಕಳಿಸಿದ್ದಾರಂತೆ” ಎಂದು ಅವಳು ಹೇಳಿದಾಗ ವಿಶ್ವನಿಗೂ ಶಾಖ್ ಆಯ್ತು. “ಅಲ್ಲಿಗೆ ಎಲ್ಲರೂ ಇನ್ವಾಲ್ವ್ ಆಗಿದ್ದಾರೆ ಅಂತಾಯ್ತು. ಇಲ್ಲಾಂದ್ರೆ ಇಷ್ಟು ದೊಡ್ಡ ಹಗರಣ ಬೆಳಕಿಗೆ ಬಾರದೇ ಹೋಗ್ತಿತ್ತಾ?” ಎಂದ ವಿಶ್ವ. ಆ ನಂತರ ವಿಶಾಲು ನಿಧಾನವಾಗಿ ವಿವರಿಸಿದಳು.
“ನಾನು ಹೇಳಿದ್ದು ಎಂಥ ಚಿನ್ನ ಗೊತ್ತಾ? ಆ ಪಾರು ಮಗ ಶೇಖ್ ಇದ್ದಾನಲ್ಲ?”
“ಅಂದ್ರೆ ಶೇಖು ಅಂದ್ರೆ ಶೇಖ್ ಅಬ್ದುಲ್ಲಾನಾ?” ಎಂದೆ.
“ಅಲ್ಲಾ ರೀ, ಶೇಖರ ಅವ್ನು, ದುಬಾಯಿನಲ್ಲೇ ಕೆಲಸ ಮಾಡ್ತಾ ಇದ್ದ! ಐದು ವರ್ಷದ ನಂತರ ವಾಪಸ್ ಬರುವಾಗ ಅಲ್ಲಿಂದನೇ ಐವತ್ತು ಚಿನ್ನ ಹೊಡ್ಕೊಂಡ್ ಬಂದಿದ್ದಾನೆ” ಎಂದಳು.
“ಅರ್ಥ ಆಗ್ತಿಲ್ಲ, ಬಿಡಿಸಿ ಹೇಳಿ” ಎಂದೆ.
“ಒಂದು ಹುಡುಗೀನ ಲವ್ ಮಾಡ್ತಿದ್ದ ಆ ಹುಡುಗಿ ತೂಕ ೫೦ ಕೇ.ಜಿ. ಅವಳ ಹೆಸರು ಚಿನ್ನ”
ಎಂದಾಗ ಮೂವರೂ ನಕ್ಕೆವು.