ಇಲ್ಲಿ ಎಲ್ಲವೂ ಇದೆ. ಆದರೆ ನೆಮ್ಮದಿ, ಶಾಂತಿ, ಭಯಮುಕ್ತ ವಾತಾವರಣ ಮಾತ್ರ ಇಲ್ಲ!
ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳ ಜನರ ಬೇಸರವಿದು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರಿಂದ ಪ್ರವಾಸಿಗರ ಹತ್ಯೆ ಜಾಗತಿಕ ಮಟ್ಟದಲ್ಲಿ ಪ್ರಮುಖ ವಿದ್ಯಮಾನ, ಆಘಾತ, ಸುದ್ದಿಯಾಗಿದ್ದರೆ, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಕೋಮು ದ್ವೇಷ, ಹತ್ಯೆ, ಪ್ರತೀಕಾರಗಳದ್ದೇ ಸುದ್ದಿ.
ಕರಾವಳಿಯ ಮಂದಿ ಅಂದರೆ, ಅತೀ ಹೆಚ್ಚು ಅಕ್ಷರಸ್ಥರು, ಬುದ್ಧಿವಂತರು. ಜ್ಞಾನಿಗಳು, ಸೌಮ್ಯವಾದಿಗಳು.. ಇಡೀ ದೇಶಕ್ಕೆ ಬ್ಯಾಂಕಿಂಗ್ ವ್ಯವಸ್ಥೆಯ ಪಾಠ ಹೇಳಿಕೊಟ್ಟ, ದೇಶದಲ್ಲೇ ಪ್ರಪ್ರಥಮವಾಗಿ ಸಹಕಾರಿ ಸಂಘವನ್ನು ಕಟ್ಟಿ ಬೆಳೆಸಿದ, ದೇಶ ಮಾತ್ರವಲ್ಲ, ಜಗತ್ತಿನಾದ್ಯಂತ ಎಲ್ಲಿಯೂ ಹೋಗಿ ದುಡಿಯುತ್ತೇವೆ, ಉದ್ಯಮ-ಉದ್ಯೋಗ ಆರಂಭಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟ, ಇಡೀ ರಾಜ್ಯಕ್ಕೆ ಶೈಕ್ಷಣಿಕ ಆದ್ಯತೆ, ಪರಿಸರದ ಪ್ರಾಮುಖ್ಯತೆ, ನೆಲ ಜಲ ಸಂಪತ್ತಿನ ಸಂರಕ್ಷಣೆಯ ಬೀಜ ಬಿತ್ತಿದ ಕರಾವಳಿಯಲ್ಲಿ ನೆಮ್ಮದಿ ಮಾತ್ರ ಇಲ್ಲ!
ಹಾಗಂತ, ಮೊದಲಿನಿಂದಲೂ ಶಾಂತಿ ನೆಮ್ಮದಿಯ ಕೊರತೆ ಇಲ್ಲಿದೆ ಎಂದಲ್ಲ. ಕಳೆದ ಮೂರು ದಶಕಗಳಿಂದೀಚೆಗೆ ಮೂರೂ ಜಿಲ್ಲೆಗಳಲ್ಲಿ ಚಿಕ್ಕಪುಟ್ಟ ಘಟನೆಗಳು ಕೋಮು ದ್ವೇಷ, ವೈಷಮ್ಯ, ಸಂಘರ್ಷ, ಅಮಾಯಕ ಜನರ ಪ್ರಾಣ ಹಾನಿ, ನೋವು ಸಾವುಗಳ ಪ್ರದೇಶವಾಗಿ ಪರಿವರ್ತನೆಯಾಗಿರುವುದು ದುರದೃಷ್ಟಕರ. ಎಲ್ಲಿಯವರೆಗೆ ಈ ಕೋಮು ದ್ವೇಷ ಬೆಳೆದಿದೆ ಎಂದರೆ ಜನಜೀವನ, ಉದ್ಯಮಗಳು ಮತ್ತು ಅಭಿವೃದ್ಧಿಯ ವೇಗ ಹಿಮ್ಮುಖವಾಗಿ ಸಾಗಿವೆ.
ಅಭಿವೃದ್ಧಿಪರ ಈ ಜಿಲ್ಲೆಗಳಿಗೆ ಶಾಂತಿಪ್ರಿಯ ಪಟ್ಟ ಸದಾ ಇತ್ತು. ಅದೇ ಈ ಭಾಗದ ಹೆಗ್ಗಳಿಕೆ ಕೂಡ ಆಗಿತ್ತು. ಆದರೆ ನೋಡಿ. ಈಗ ಹಾಗಿಲ್ಲ. ಏನಿದ್ದರೂ ಪದೇ ಪದೇ ಕೋಮು ಘರ್ಷಣೆಗಳು, ಪ್ರತೀಕಾರದ ಕೊಲೆಗಳು, ಮತಾಂಧ ಶಕ್ತಿಗಳ ಅಟ್ಟಹಾಸ, ರಾಜಕೀಯ ಪಕ್ಷಗಳ ಮತ್ತು ಪರಿಸ್ಥಿತಿಯ ಲಾಭ ಪಡೆಯುವ ಹುನ್ನಾರಕ್ಕೆ ಭಯದ ನೆರಳಿನಲ್ಲಿಯೇ ಬದುಕು.
ಇಡೀ ದೇಶದಲ್ಲೇ ಅತ್ಯಧಿಕ ಕೋಮು ಗಲಭೆ ನಡೆದದ್ದು ಭಟ್ಕಳದಲ್ಲಿ. ಹತ್ತೊಂಬತ್ತು ತಿಂಗಳುಗಳ ಕಾಲ (೧೯೯೩) ಗಲಭೆಗಳು ನಡೆದು ಎರಡು ಡಜನ್‌ಗೂ ಅಧಿಕ ಅಮಾಯಕರು ಪ್ರಾಣ ಬಿಟ್ಟರು. ಈ ಕಪ್ಪು ದಾಖಲೆ ಈವರೆಗೂ ನಮ್ಮೆದುರು ಇದೆ. ಗಲಭೆ ಬಳಕೆಯಾದದ್ದು ರಾಜಕೀಯಕ್ಕೆ. ರಾಜಕೀಯ ಸಂಚು, ಹುನ್ನಾರ ಅರಿಯದ ಜನ ನಂತರ ತಾವೇ ತಮ್ಮೂರ ಪರಿಸ್ಥಿತಿಯನ್ನು ಅರಿತು ತೆಪ್ಪಗಾದರು. ಇಡೀ ಭಟ್ಕಳದ ಹಾಗೂ ನೆರೆಹೊರೆಯ ಕರಾವಳಿಯ ಅಭಿವೃದ್ಧಿ ಹತ್ತಾರು ವರ್ಷ ಹಿಂದೆ ಹೋಯಿತು. ಜನರ ಬದುಕು ಮೂರಾಬಟ್ಟೆಯಾಯಿತು.
ಅತ್ಯಂತ ಶಾಂತ ಜಿಲ್ಲೆ ಎನಿಸಿಕೊಳ್ಳುವ ಉತ್ತರ ಕನ್ನಡದಲ್ಲಿ ಇಬ್ಬರು ಶಾಸಕರಾಗಿದ್ದಾಗಲೇ ಹತ್ಯೆಗೆ ಒಳಗಾದರು!. ಇದು ಇಡೀ ರಾಜ್ಯದಲ್ಲೇ ಪ್ರಥಮ. ಡಾ.ಯು.ಚಿತ್ತರಂಜನ್ ಹಾಗೂ ವಸಂತ ಅಸ್ನೋಟಿಕರ್!
ಇಡೀ ರಾಜ್ಯದಲ್ಲೇ ಗುಂಡೇಟಿಗೆ ಶಾಸಕರು ಬಲಿಯಾಗಿದ್ದು ಉತ್ತರ ಕನ್ನಡದಲ್ಲಿ ಮಾತ್ರ. ಘಟನೆ, ಪ್ರಸಂಗ ಬೇರೆ ಇರಬಹುದು.
ಭಟ್ಕಳದ ಒಂದು ಗಲಭೆಗೆ ಎರಡು ನ್ಯಾಯಾಂಗ ತನಿಖೆಗಳು ನಡೆದವು. ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗ ಹಾಗೂ ನ್ಯಾಯಮೂರ್ತಿ ಡಾ.ರಾಮಚಂದ್ರ ರಾವ್ ಆಯೋಗಗಳಿಂದ ನಡೆದ ಇವೆರಡೂ ತನಿಖಾ ವರದಿಗಳು ಇಂದಿಗೂ ಶೈತ್ಯಾಗಾರದಲ್ಲೇ ಉಳಿದಿವೆ.
ಭಟ್ಕಳ ಹೊರತುಪಡಿಸಿದರೆ ಉತ್ತರ ಕನ್ನಡದ ಬೇರೆಲ್ಲಿಯೂ ಕೋಮು ಗಲಭೆಗಳು ಸಂಭವಿಸಿಲ್ಲ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಗಲಭೆಗಳಲ್ಲಿ ಸಂಘರ್ಷ ನಿಂತಿದ್ದೇ ಇಲ್ಲ ಎನ್ನಬಹುದೇನೋ. ಕಳೆದ ಕೆಲವೇ ದಿನಗಳ ಅಂತರದಲ್ಲಿ ಒಂದು ಕೋಮಿನ ಒಂದು ಹೆಣ ಬಿದ್ದರೆ, ಪ್ರತೀಕಾರವಾಗಿ ಇನ್ನೊಂದು ಕೋಮಿನ ಮತ್ತೊಂದು ಹೆಣ ಬೀಳುತ್ತಿದೆ.
ಇದು ಹೀಗೇ ನಡೆದುಕೊಂಡು ಬರುತ್ತಿದೆ
ವಿಶೇಷವಾಗಿ ಚುನಾವಣೆ ಸಂದರ್ಭದಲ್ಲಿ, ರಾಜಕೀಯ ಆಡಂಬೋಲವಾಗಿ ಪರಿವರ್ತ ನೆಯಾಗಿದೆ. ಕೌಟುಂಬಿಕ ಸಂಘರ್ಷವನ್ನೂ ಕೋಮು ಗಲಭೆಯಾಗಿ ಪರಿವರ್ತಿಸಿ ಗದ್ದಲ ನಡೆಯುತ್ತಿದೆ. ಈ ಜಿಲ್ಲೆಗಳಲ್ಲಿ ನಡೆಯುತ್ತಿರುವುದು ಹೆಣದ ಮೇಲಿನ ರಾಜಕಾರಣ. ಜಾತಿ-ಕೋಮುಗಳಿಗೆ ಉನ್ಮಾದ ಹುಟ್ಟಿಸುವ ರಾಜಕೀಯ, ಜನರ ಬದುಕಿನ ನಡುವೆ ಸಂಘರ್ಷ ಬಿತ್ತುವ ರಾಜಕೀಯ. ಹಿಂದುಳಿದವರೇ ಅಧಿಕವಾಗಿರುವ, ಹಿಂದೂಗಳು, ಮುಸ್ಲೀಮರು, ಕ್ರಿಶ್ಚಿಯನ್ನರು, ಜೈನರು ಸಾಮರಸ್ಯದಿಂದ ಬದುಕಿದ ಪ್ರದೇಶವಿದು.
ಅದೇ ಕಾರಣಕ್ಕೆ ಅಲ್ಲಿ ಬಂಗೇರಾ, ಡಿಸೋಜಾ, ಶೆಟ್ಟಿ, ಖಾದರ್, ಪೂಜಾರಿ, ಮಧ್ವರಾಜ ಹೀಗೆ ಎಲ್ಲ ಸಮುದಾಯಗಳ ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದಾರೆ. ಇಪ್ಪತ್ತನೇ ಶತಮಾನದ ೮೦-೯೦ರ ದಶಕದವರೆಗೂ ದಿನಕರ ದೇಸಾಯಿ, ಅಮ್ಮೆಂಬಳ ಬಾಳಪ್ಪ, ಟಿ.ಎ.ಪೈ ಮೊದಲಾದವರು ಇಡೀ ಕರಾವಳಿಯನ್ನು ಬೆಳೆಸಿದರು. ಬೆಳೆದರು. ಒಂದು ದಿಕ್ಕು ದೆಸೆ ನೀಡಿದರು. ಆರ್ಥಿಕ ರಂಗದಲ್ಲಿ ದಕ್ಷಿಣ ಕನ್ನಡ ಮುಂದಾದರೆ, ಶೈಕ್ಷಣಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ಉತ್ತರ ಕನ್ನಡ ಧಾಪುಗಾಲಿಟ್ಟಿತು. ರಾಮಕೃಷ್ಣ ಹೆಗಡೆ, ಕಡವೆ ಶ್ರೀಪಾದ ಹೆಗಡೆ, ವಿ.ಎಸ್ ಸೋಂದೆ, ಯಾಹ್ಯಾ, ಭಾಗ್ವತ್ ಮೊದಲಾದವರ ಚಿಂತನೆ, ಕೊಡುಗೆ ಅಸಮಾನ್ಯವಾದುದು.
ಈಗ ಹಾಗಿಲ್ಲ. ಈಗೇನಿದ್ದರೂ ಗದ್ದಲದ ಕಾರಣದಿಂದಾಗಿ ಮೂರೂ ಜಿಲ್ಲೆಗಳಿಗೆ ಅಪಖ್ಯಾತಿ ಬಂದೆರಗಿದೆ. ಜನರಿಗೆ ಈ ಅಶಾಂತಿ ಬೇಕಿಲ್ಲ. ಭಯಗ್ರಸ್ಥ ಬದುಕು ಬೇಡವಾಗಿದೆ. ಎಷ್ಟು ದಿನ ಈ ಭಯದ ಬದುಕು. ಸಂಘರ್ಷ, ಕೋಮು ದ್ವೇಷದ ದಳ್ಳುರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಗೊತ್ತಿಲ್ಲ ಎಂದಲ್ಲ. ಇದರ ಹಿಂದೆ ಇರುವ ಕಿಡಿಗೇಡಿಗಳು, ಮತಾಂಧರು ಯಾರು, ಅವರ ಉದ್ದೇಶವೇನು ಎನ್ನುವುದೆಲ್ಲ ಗೊತ್ತು. ರಾಜಕೀಯ ಪ್ರಮುಖರಿಗೆ, ಕೆಲ ಸಂಘಟನೆಗಳಿಗೆ ಅಶಾಂತಿಗೆ ಅಂತ್ಯ ಹಾಡಿ, ಕರಾವಳಿಯ ಶಾಂತಿ ನೆಮ್ಮದಿಯನ್ನು ಮರಳಿ ತರುವ ಶಕ್ತಿಯೂ ಇದೆ. ಆದರೆ ಅವರಿಗೆ ಬೇಕಿಲ್ಲವಲ್ಲ. ಕ್ಷುಲ್ಲಕ ರಾಜಕೀಯಕ್ಕಾಗಿ ಸಾಮರಸ್ಯವನ್ನು ಕೆಡಿಸುವುದೇ ಇವರಿಗೆ ಇಷ್ಟ. ೨೦೨೦ರಿಂದ ೨೦೨೩ರವರೆಗೂ ಅತೀ ಹೆಚ್ಚು ಕೋಮು ಘರ್ಷಣೆಗಳು ನಡೆದಿರುವುದು ಈ ಜಿಲ್ಲೆಗಳಲ್ಲೇ. ಕಾರಣ, ಕೋಮು ಸಾಮರಸ್ಯ ಕದಡುವ ಶಕ್ತಿಗಳ ಕೃತ್ಯಗಳನ್ನು ನಿಯಂತ್ರಿಸಲು ಇಲಾಖೆಗೆ ಮುಕ್ತ ಸ್ವಾತಂತ್ರ್ಯವೇ ಇಲ್ಲ. ಇದನ್ನು ಪೋಷಿಸಿಕೊಂಡೇ ಕೋಮು ಧ್ರುವೀಕರಣದ ಪ್ರಯೋಗಶಾಲೆಯನ್ನಾಗಿ ಕರಾವಳಿಯನ್ನು ಪರಿವರ್ತಿಸಲಾಗುತ್ತಿರುವುದು.ನಿಯಂತ್ರಿಸಲು ಆಗದ ಮತ್ತೊಂದು ಕಾರಣ, ಕರ್ನಾಟಕದ ಕರಾವಳಿ ತನ್ನ ಶಕ್ತಿ ಕೇಂದ್ರಗಳ ನಿಯಂತ್ರಣವನ್ನು ಮುಂಬೈ, ದೆಹಲಿ, ದುಬೈ, ಕೇರಳ, ಪಾಕಿಸ್ತಾನದವರೆಗೂ ವ್ಯಾಪಿಸಿಕೊಂಡಿರುವುದು. ಕರಾವಳಿಯಲ್ಲಿನ ಹಿಂದೂಗಳಿಗೆ, ಹಿಂದೂ ಸಂಘಟನೆಗಳು, ರಾಜಕೀಯ ಪಕ್ಷಗಳು ಆಶ್ರಯವಾದರೆ, ಮುಸ್ಲಿಂ ಸಂಘಟನೆಗಳಿಗೆ ಇಂಡಿಯನ್ ಮುಜಾಹಿದ್, ದಾವುದ್ ಇಬ್ರಾಹಿಂ, ರಿಯಾಜ್ ಭಟ್ಕಳ್, ಯಾಸಿನ್ ಭಟ್ಕಳ್, ಐಎಸ್‌ಐಎಸ್, ಕೇರಳದ ಕೋಮುವಾದಿ ಸಂಘಟನೆಗಳು, ಎಸ್‌ಡಿಪಿಐ ಮೊದಲಾದವರು ನೆರವು ನೀಡುತ್ತಾರೆ. ಹಾಗಾಗಿ ಬಾಹ್ಯ ಶಕ್ತಿಗಳ ಪ್ರಚೋದನೆಯಿಂದಾಗಿ ಕರಾವಳಿ ಜಿಲ್ಲೆಗಳು ನಲುಗಿ ಹೋಗಿವೆ.
ಇದು ಅರ್ಥ ಮಾಡಿಕೊಳ್ಳದ ಜನರೇನಲ್ಲ ಇಲ್ಲಿಯವರು. ಸಾಕ್ಷರರು. ಬುದ್ಧಿವಂತರು ಇವರೆಲ್ಲ. ಸೌಹಾರ್ದ ಮತ್ತು ಅಶಾಂತಿಯನ್ನು ಹೊಸಕಿ ಹಾಕುವ ತಾಕತ್ತಿಗೆ ಈ ದ್ವೇಷ ಸಂಘಟನೆಗಳೇ ಕಾರಣ ಎಂಬುದು ಇವರಿಗೆಲ್ಲ ಗೊತ್ತಿರುವ ಅಂಶ.
ಒಂದು ಕಾಲದಲ್ಲಿ ದಕ್ಷಿಣ ಕನ್ನಡದ ಶಾಸಕರೆಲ್ಲ ಅಭಿವೃದ್ಧಿಗಾಗಿ ಪಕ್ಷಬೇಧ ಮರೆತು ದೆಹಲಿಯವರೆಗೂ ಹೋಗಿ ಲಾಬಿ ಮಾಡುವ ವಾತಾವರಣ ಇತ್ತು. ಮಂಗಳೂರು ಬಂದರು, ಬ್ಯಾಂಕುಗಳು, ಉದ್ಯೋಗಗಳು, ರಸ್ತೆ, ಮೂಲಭೂತ ಸೌಕರ್ಯ ಎಲ್ಲವುಗಳಿಗೆ ಪ್ರಾಮುಖ್ಯ ದೊರೆಯುತ್ತಿತ್ತು. ಆದರೆ ಈಗ ರಾಜಕಾರಣ, ವಿಷ ಮನಸ್ಸುಗಳ, ದ್ವೇಷಾಸೂಯೆಗಳಿಗೆ ಪರಶುರಾಮ ಸೃಷ್ಟಿಯ ನಾಡು ನಲುಗಿ ಹೋಗಿದೆ. ಕಾನೂನಿನ ಅಸ್ತç ಕೂಡ ನಿಯಂತ್ರಿಸಲು ಆಗದ ಸ್ಥಿತಿಗೆ ತಲುಪಿದೆ.ಕಳೆದ ಅಧಿವೇಶನದಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಆ ಭಾಗದ ಶಾಸಕರು ಪುಂಖಾನುಪುಂಖವಾಗಿ ಮಾತನಾಡಿದಾಗ, ಸ್ಪೀಕರ್ ಯು.ಟಿ.ಖಾದರ್, `ಮೊದಲು ನಮ್ಮಲ್ಲಿ ಶಾಂತಿ ನೆಮ್ಮದಿ ಪ್ರೀತಿಯ ಉಪಾಯ ಹೇಳಿ; ಇಲ್ಲದಿದ್ದರೆ ಯಾವ ಅಭಿವೃದ್ಧಿಯೂ ಜನರಿಗೆ ಫಲ ನೀಡದು’ ಎಂದು ಮಾರ್ಮಿಕವಾಗಿ ಹೇಳಿದ್ದರು.
ಮೀನುಗಾರಿಕೆಯಲ್ಲಿ ಬ್ಯಾರಿಗಳು, ಕ್ರಿಶ್ಚಿಯನ್ನರು, ಮೊಗವೀರರು, ಬೋವಿಗಳು ಎಲ್ಲರೂ ತೊಡಗಿರುತ್ತಾರೆ. ಹಾಗೆಯೇ ವಿದ್ಯಾಸಂಸ್ಥೆಗಳಲ್ಲಿ ಎಲ್ಲ ಸಮುದಾಯಗಳ ಪರಿಣಿತರು ಬೋಧಿಸುತ್ತಾರೆ. ಬ್ಯಾಂಕುಗಳಲ್ಲಿ ದೇಶಾದ್ಯಂತ ದಕ್ಷಿಣ ಕನ್ನಡದ ಎಲ್ಲ ಸಮುದಾಯದವರೂ ಹೆಸರು ವಾಸಿಗಳೇ. ಹೋಟೆಲ್ ಉದ್ಯಮ ಎಲ್ಲೆಡೆಯೂ ಬೆಳೆದಿದೆ.
ಅವರೆಲ್ಲ ಕರಾವಳಿಯ ಈಗಿನ ಸ್ಥಿತಿಗೆ ಮರುಕ ಪಡುತ್ತಿರುವವರೇ !
ಕರಾವಳಿಯ ಜನ ಸೌಹಾರ್ದತೆ ಪರವಾಗಿ ದಿಟ್ಟತನದಿಂದ ನಿಂತರಷ್ಟೇ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಮತೀಯ ದ್ವೇಷ ಪ್ರಚೋದಿಸುವವರನ್ನು, ಸಂಘಟನೆಗಳ ಮುಖಂಡರನ್ನು ನಮ್ಮೂರಿಗೆ ಬರಬೇಡಿ ಎಂದು ಜನರೇ ಹಿಂದಿರುಗಿಸಬೇಕು. ಅವರ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಮತ್ತು ಇತರ ಲಾಭ ಪಡೆಯುವವರಿಗೆ ನಿಮಗೆ ನಮ್ಮಲ್ಲಿ ಪ್ರವೇಶವಿಲ್ಲ ಎಂದು ಹೇಳುವಂತಾಗಬೇಕು.ಯಾವ ಮತೀಯ ದ್ವೇಷಕ್ಕೂ ಕಿವಿಗೊಡದೇ ಜನಪರ ಕಾರ್ಯ, ಅಭಿವೃದ್ಧಿ, ಸೌಹಾರ್ದತೆಗಳನ್ನು ಬದುಕಿನ ಭಾಗವಾಗಿ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿಯ ಧಾರ್ಮಿಕ ಮುಖಂಡರುಗಳಿಗೆ ತಮ್ಮನ್ನು ಧಾರ್ಮಿಕ ಕೆಲಸಗಳಿಗಳಿಗಷ್ಟೇ ಸೀಮಿತಗೊಳಿಸಿಕೊಳ್ಳಿ ಎನ್ನಬೇಕು.ಮೂರೂ ಜಿಲ್ಲೆಗಳ ಬೇಡಿಕೆಗಳ ಪಟ್ಟಿ ದೊಡ್ಡದು… ವಿಶೇಷವಾಗಿ ನಿರುದ್ಯೋಗ, ಆಸ್ಪತ್ರೆ, ಬದುಕಿಗಾಗಿ ಕಂದಾಯ, ಅರಣ್ಯ ಅತಿಕ್ರಮಣಗಾರರ ಗೋಳು, ಬೃಹತ್ ಯೋಜನೆಗಳಿಂದ ಸಂತ್ರಸ್ಥರಾದ ಜನರಿಗೆ ಪರಿಹಾರ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಕೆಲಸ ಮೊದಲಾದವು ಜ್ವಲಂತ. ಈ ನೆಲದಲ್ಲಿ ಸಾಂಸ್ಕೃತಿಕ ವಾತಾವರಣ, ಸೌಹಾರ್ದ ನೆಲೆಸುವಂತೆ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಇತ್ತೀಚೆಗೆ ರಾಜ್ಯದ ಉಪ ಮುಖ್ಯಮಂತ್ರಿ ಹೇಳಿದಂತೆ, ಕರಾವಳಿ ಬಂಜರು ಭೂಮಿಯಾಗುತ್ತದೆ; ಕಲಿಯಲು ಹೊರಗಿನಿಂದ ವಿದ್ಯಾರ್ಥಿಗಳು ಬರುವುದಿಲ್ಲ ಎಚ್ಚರದಿಂದ ಇರಿ ಎನ್ನುವ ಮಾತು ಅಕ್ಷರಶಃ ಸತ್ಯ… ಅಲ್ಲವೇ?