ಒತ್ತಡವೇ ಆಧುನಿಕ ಮಾನವನ ಪರಮಶತ್ರು

ಪೂರ್ವಜನ್ಮ ಸ್ಮರಣೆ (ರಿಗ್ರೆಷನ್) ನಂತರದಲ್ಲಿ ದೀರ್ಘಕಾಲ ಬಾಧಿಸಿದ ಜೀವನ ಸಮಸ್ಯೆಗಳು ಹಾಗೂ ಖಾಯಿಲೆಗಳು ಇಷ್ಟು ಶೀಘ್ರದಲ್ಲಿ ಸುಧಾರಣೆಯಾಗುವ ಕಾರ್ಯವಿಧಾನ ಏನು? ಎಂಬ ಪ್ರಶ್ನೆಗೆ ಎರಡು ವಿವರಣೆಗಳಿವೆ. ಮೊದಲನೆಯದಾಗಿ; ದಮನಿತ ಅಥವಾ ಮರೆತುಹೋದ ಆಘಾತಕಾರಿ, ಆಗಾಗ್ಗೆ ನೋವಿನ ನೆನಪುಗಳ ಮರುಸ್ಥಾಪನೆಯು ಸಾಮಾನ್ಯವಾಗಿ ಚಿಕಿತ್ಸೆಯೊಂದಿಗೆ ಸಂಬಂಧಿಸಿವೆ. ಈ ಘಟನೆಗಳನ್ನು ಅವುಗಳ ಸಂಬಂಧಿತ ಭಾವನೆಗಳೊಂದಿಗೆ ನೆನಪಿಸಿಕೊಳ್ಳುವುದು ಮನೋವಿಶ್ಲೇಷಣೆ ಮತ್ತು ಇತರ ಸಾಂಪ್ರದಾಯಿಕ ಮಾನಸಿಕಚಿಕಿತ್ಸೆಗಳ ಮೂಲಾಧಾರವಾಗಿದೆ. ಅಂತಹ ಸಮಾಧಿಸ್ಥ ನೆನಪುಗಳನ್ನು ಪ್ರಜ್ಞೆಗೆ ತರುವ ಕ್ರಿಯೆಯು ರೋಗಿಯ ಚೇತರಿಕೆಯಲ್ಲಿ ಅತ್ಯಂತ ಸಹಾಯಕವಾಗಿದೆ. ವ್ಯಕ್ತಿಯ ಪ್ರಸ್ತುತ ಜೀವನದ ಸಮಸ್ಯೆಯನ್ನು ಸಂಪೂರ್ಣ ಗುಣಪಡಿಸಲು ಆತನ ಹಿಂದಿನ ಜೀವನದ ಮಾದರಿಗಳನ್ನು ಮತ್ತು ನೆನಪುಗಳನ್ನು ಪೂರ್ವಜನ್ಮಸ್ಮರಣೆ ಮೂಲಕ ಉತ್ಖನನ ಮಾಡಿದಾಗಲೇ ಸಾಧ್ಯವಾಗುತ್ತದೆ. ಇನ್ನು ಎರಡನೆಯದಾಗಿ; ಹಿಂದಿನ ಹಲವಾರು ಜನ್ಮಗಳಲ್ಲಿ ಬೇರೆ ಬೇರೆ ದೇಹಗಳಲ್ಲಿ ನಾವು ಅನುಭವಿಸಿದ್ದ ಅನೇಕ ಹುಟ್ಟು-ಸಾವು-ಹುಟ್ಟುಗಳ ಸರಣಿಯನ್ನು ನೋಡುವಾಗ ‘ನಾವು ಪ್ರತ್ಯೇಕ ಅಥವಾ ವೈಯಕ್ತಿಕವಲ್ಲ; ಶಾಶ್ವತ ಆತ್ಮಗಳು’ ಎಂಬ ಖಚಿತ ಮತ್ತು ವಾಸ್ತವ ಅರಿವು ಮೂಡುತ್ತದೆ. ‘ನಾವು ನಿಜವಾಗಿಯೂ ಸಾಯುವುದಿಲ್ಲ; ಬದಲಿಗೆ ಕೇವಲ ನಮ್ಮ ಪ್ರಜ್ಞೆಯ ಮಟ್ಟವನ್ನು ಮಾತ್ರವೇ ಬದಲಾಯಿಸುತ್ತೇವೆ. ಏಕೆಂದರೆ, ನಮ್ಮ ಪ್ರೀತಿಪಾತ್ರರೂ ಸಹ ಅಮರರು, ನಾವೆಂದಿಗೂ ಅವರಿಂದ ಬೇರ್ಪಟ್ಟಿರುವುದಿಲ್ಲ’ ಎಂಬ ಅರಿವುಂಟಾಗುತ್ತದೆ. ಇದು ನಮ್ಮ ನಿಜವಾದ ಅಧ್ಯಾತ್ಮಿಕಸ್ವಭಾವದ ಪೂರ್ವಜನ್ಮಸ್ಮರಣೆಯ ಮೂಲಕ ಮಾಡಿಕೊಳ್ಳುವ ಈ ಸಾಕ್ಷಾತ್ಕಾರವು ಪ್ರಸ್ತುತ ಜೀವನದಲ್ಲಿನ ದೀರ್ಘಾವಧಿ ಸಮಸ್ಯೆಗಳನ್ನು ಗುಣಪಡಿಸುವ ಪ್ರಬಲವಾದ ಶಕ್ತಿಯಾಗಿದೆ.
ಮಾನವಧರ್ಮವನ್ನು ಭಾರತೀಯಶಾಸ್ತçಗಳು ವಿವರಿಸಿರುವಷ್ಟು ಚೆನ್ನಾಗಿ ಮತ್ತು ಕರಾರುವಾಕ್ಕಾಗಿ ಬೇರಾವ ಮತಗ್ರಂಥಗಳೂ ವಿವರಿಸಿಲ್ಲ. ನಮಗೆ ಯೋಚಿಸುವ ಸಾಮರ್ಥ್ಯವಿದ್ದಲ್ಲಿ ನಮ್ಮ ಪುರಾತನ ಋಷಿಮುನಿಗಳ ವಿದ್ವತ್ತಿನ ಬಗ್ಗೆ ಹೆಮ್ಮೆಪಡಲು ನೂರಾರು ಕಾರಣಗಳು ಸಿಗುತ್ತವೆ. ‘ಹಿಂದಿನವರಿಗೆ ಏನೂ ತಿಳಿದಿರಲಿಲ್ಲ’ ಎಂಬ ಪೂರ್ವಾಗ್ರಹಪೀಡಿತ ಮನೋಭಾವನೆೆಗೆ ಒಳಗಾದರೆ ನಮ್ಮನ್ನು ನಾವೇ ಮೂರ್ಖರಾಗಿಸಿಕೊಂಡಂತೆ. ನಾವಿಲ್ಲಿ ಭೂಮಿಯ ಮೇಲಿರುವುದು ಪ್ರಕೃತಿಯ ಕಾಕತಾಳೀಯತೆಯಿಂದಲ್ಲ! ಈ ಮೇಲಿನ ವಿವರಣೆಯನ್ನು ಅರಿತಾಗ ಅರ್ಥವಾಗಬಹುದು; ನಾವೆಲ್ಲರೂ ದೈವಿಕಜೀವಿಗಳೆಂಬುದು. ಸ್ವಲ್ಪಸಮಯಕ್ಕಷ್ಟೇ ಕಲಿಯುವ ಉದ್ದೇಶದಿಂದ ಈ ಭೂಗ್ರಹದಲ್ಲಿ ವಿದ್ಯಾರ್ಥಿಗಳಾಗಿ ದಾಖಲಾಗಿದ್ದೇವೆ ಮತ್ತು ಕಲಿಕಾಪ್ರಕ್ರಿಯೆಯನ್ನು ಹೆಚ್ಚಿಸುವ ಸಲುವಾಗಿ ನಾವೇ ನಮ್ಮ ಪಠ್ಯಕ್ರಮವನ್ನು ರೂಪಿಸಿಕೊಂಡಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯೂ ಮೂಲ ದೈವಿಕಬೆಳಕಿನಿಂದ ಬಂದವರಾದ್ದರಿಂದ ನಾವು ಸಾಮಾನ್ಯವಾಗಿ ಊಹಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ಬುದ್ಧಿವಂತರಾಗಿದ್ದೇವೆ ಮತ್ತು ಪ್ರಜ್ಞಾವಂತರಾಗಿರುತ್ತೇವೆ. ಈ ಜನ್ಮದಲ್ಲಿ ನಾವು ಮಾಡಬೇಕಿರುವುದು ನಮ್ಮ ಜನ್ಮದ ಮೂಲ ಹಿನ್ನೆಲೆಯನ್ನು ಸ್ಮರಿಸುವುದಷ್ಟೇ! ಸಂತೋಷವು ಆಂತರಿಕಮೂಲದಿಂದ ಬರುತ್ತದೆ. ಇದು ಬಾಹ್ಯವಸ್ತುಗಳ ಮೇಲೆ ಅಥವಾ ಇತರ ಜನರ ಮೇಲೆ ಅವಲಂಬಿತವಾಗಿಲ್ಲ. ನಮ್ಮ ಸುರಕ್ಷತೆ ಮತ್ತು ಸಂತೋಷದ ಭಾವನೆಗಳು ಇತರ ಜನರ ನಡವಳಿಕೆ ಮತ್ತು ಕ್ರಿಯೆಗಳ ಮೇಲೆ ಅವಲಂಬಿತವಾದಾಗ ನಾವು ದುರ್ಬಲರಾಗುತ್ತೇವೆ ಮತ್ತು ಸುಲಭವಾಗಿ ವೇದನೆಗೆ ಒಳಗಾಗುತ್ತೇವೆ. ಹೀಗಾಗಿ ನಮ್ಮ ಶಕ್ತಿಯನ್ನು ಬೇರೆಯವರಿಗೆ ಅಡವಿಡದೆ ವಿಷಯ ಪ್ರಚೋದನೆಗಳಿಗೆ ಅಂಟಿಕೊಳ್ಳದಿರಲು ಪ್ರಯತ್ನಿಸಬೇಕು.
ಬಾಲ್ಯದಲ್ಲಿ ಅಥವಾ ಶೈಶಾವಸ್ಥೆಯಲ್ಲಿ ಶಿಶುವಿನಲ್ಲಿ ಅತೀಂದ್ರಿಯ ಮತ್ತು ಪೂರ್ವಜನ್ಮದ ಸ್ಮರಣೆ ಜಾಗೃತವಾಗಿರುತ್ತದೆ. ಆದರೆ ನಮಗೆ ಅದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಭ್ರೂಣ, ಶಿಶುಗಳು ಅಥವಾ ಪುಟ್ಟಮಕ್ಕಳು ನಾವು ಅನುಮಾನಿಸುವುದಕ್ಕಿಂತ ಹೆಚ್ಚಿನದನ್ನು ತಿಳಿದಿರುತ್ತಾರೆ; ಹೆಚ್ಚಿನ ಮಾಹಿತಿಯನ್ನು ಗ್ರಹಿಸುತ್ತಾರೆ ಮತ್ತು ಸಂಯೋಜಿಸುತ್ತಾರೆ; ನಮ್ಮ ಭಾವನೆಗಳು ಮತ್ತು ಕ್ರಿಯೆಗಳ ಬಗ್ಗೆ ತಿಳಿದಿರುತ್ತಾರೆ. ಹುಟ್ಟುವ ಮೊದಲು ಮತ್ತು ನಂತರದ ಅವರಿಗೆ ನಮ್ಮ ಪ್ರೀತಿಯ ಭಾವನೆಗಳು ಮತ್ತು ಆಲೋಚನೆಗಳ ಹರಿವು ಅವರ ಆತ್ಮಗಳನ್ನು ಪೋಷಿಸುತ್ತದೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಮುಖ್ಯವಾಗಿರುತ್ತದೆ. ಗರ್ಭಾಶಯದಲ್ಲಿನ ಅವಧಿಯ ನೆನಪುಗಳು ಅನೇಕ ಕಾರಣಗಳಿಗಾಗಿ ಮುಖ್ಯವಾಗಿವೆ. ಬಾಲ್ಯದ ಆಘಾತಗಳು ಮತ್ತು ಸಂಬಂಧಗಳ ಕಾರಣವಾಗಿ ರೋಗಲಕ್ಷಣಗಳನ್ನು ಪಡೆದ ರೋಗಿಗಳಲ್ಲಿ ಈ ನೆನಪುಗಳ ಮರುಸ್ಮರಣೆ ಸುಧಾರಣೆಯನ್ನು ಉತ್ತೇಜಿಸುತ್ತದೆ. ಈ ನೆನಪುಗಳು ಜನನದ ಮೊದಲು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರಜ್ಞೆಯು ಅದಾಗಲೇ ಅಸ್ತಿತ್ವದಲ್ಲಿದೆ ಎಂಬುದನ್ನು ತೋರಿಸುತ್ತದೆ. ಈ ಜ್ಞಾನದ ಬೆಳಕಿನಲ್ಲಿ ನಾವು ಅಂದರೆ ಪಾಲಕರು ಈ ಪುಟ್ಟಜೀವಿಗಳೊಂದಿಗೆ ಹೇಗೆ ಸಂವಹನ ನಡೆಸುತ್ತೇವೆ ಎಂಬುದನ್ನು ಮರುಚಿಂತನೆ ಮಾಡಬೇಕಿದೆ. ಪದಗಳು, ಆಲೋಚನೆಗಳು, ಭಾವನೆಗಳ ಮೂಲಕ ನಾವು ಅವರೊಂದಿಗೆ ಸಂವಹನಮಾಡುವ ಪ್ರೀತಿಯ ಅಭಿವ್ಯಕ್ತಿಗಳಿಗೆ ಪುಟಾಣಿಜೀವಗಳು ತೀವ್ರವಾಗಿ ಮೇಳೈಸುತ್ತವೆ.
ನಾವು ಜೀವಿಸುವ ಮೂರು ಆಯಾಮದ ಜಗತ್ತಿನಲ್ಲಿ ನಾವು ಸಂಬಂಧಗಳ ಮೂಲಕವೇ ಕಲಿಯುತ್ತೇವೆ ಮತ್ತು ಕಲಿಯಬೇಕಾದ ಅನಿವಾರ್ಯತೆಯೂ ಕೂಡಾ. ನಾವು ನಮ್ಮ ಪಾತ್ರವನ್ನು ಪೂರೈಸಿ ಹೊರಡುವಾಗ ನಮ್ಮೊಂದಿಗೆ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವುದಿಲ್ಲ; ಆದರೆ ನಮ್ಮ ಕಾರ್ಯಗಳು ಮತ್ತು ನಡವಳಿಕೆಗಳಿಂದ ಹೊರಹೊಮ್ಮಿದ ಪರಿಣಾಮಗಳು; ಕಲಿತ ಜ್ಞಾನ ಮತ್ತು ಅನುಭವಿಸಿದ ಭಾವನೆಗಳು ನಮ್ಮೊಂದಿಗೇ ಬರುತ್ತವೆ ಮಾತ್ರವಲ್ಲ ಮುಂದಿನ ಜನ್ಮದಲ್ಲೂ ನಮ್ಮೊಂದಿಗೇ ಇರುತ್ತವೆ! ಸಂಬಂಧಗಳಲ್ಲಿ ನಾವು ಇತರರನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದು ನಾವು ಭೌತಿಕವಾಗಿ ಸಂಗ್ರಹಿಸಿದ್ದಕ್ಕಿಂತ ಅಪರಿಮಿತವಾಗಿ ಮುಖ್ಯವಾಗುತ್ತವೆ. ನಮ್ಮ ಜೀವಿತಾವಧಿಯಲ್ಲಿ ನಾವು ಅನೇಕ ಭೌತಿಕವಸ್ತುಗಳನ್ನು ಸಂಪಾದಿಸಬಹುದು; ಆದರೆ ಮರಣಾನಂತರದಲ್ಲಿ ನಮ್ಮನ್ನು ಭೇಟಿಯಾಗುವವರು ನಾವು ಮಾಡಿಟ್ಟ ಆಸ್ತಿಯಲ್ಲ; ಬದಲಿಗೆ ನಮ್ಮ ಪ್ರೀತಿಪಾತ್ರರು ಮಾತ್ರವೇ. ಸಾವಿನ ಸಮೀಪದ ಅಥವಾ ಸಾವಿನ ಅಂತಿಮ ಕ್ಷಣಗಳನ್ನು ಅನುಭವಿಸಿದ ರೋಗಿಗಳ ಈ ಅನುಭವ ನಮ್ಮ ಜೀವನಮೌಲ್ಯಗಳನ್ನು ಮತ್ತು ನಮ್ಮ ಭವಿಷ್ಯದ ಆದ್ಯತೆಗಳನ್ನು ಪುನರ್ವಿಮಶಿಸಲು ಒಂದು ಅವಕಾಶ ನೀಡುತ್ತದೆ.
ಅನಪೇಕ್ಷಿತ ಬದ್ಧತೆಗಳನ್ನು ನಿರಾಕರಿಸಲು ಸಾಧ್ಯವಾಗದಿದ್ದಾಗ ದೈಹಿಕ ಅನಾರೋಗ್ಯವು ಹೆಚ್ಚಾಗಿ ಕಾಡುತ್ತದೆ. ಏಕೆಂದರೆ; ಇದು ‘ಇಲ್ಲ’ ಎಂದು ಹೇಳುವ ಹೆಚ್ಚು ಸ್ವೀಕಾರಾರ್ಹ ಮಾರ್ಗವಾಗಿದೆ. ನಿಮ್ಮ ದೇಹವು ನಿಮಗೆ ಬೇಡವೆಂದು ದೈಹಿಕ ಅನಾರೋಗ್ಯದ ಮೂಲಕ ಹೇಳುವುದರಿಂದ ನಿರಾಕರಿಸುವುದನ್ನು ಬಿಟ್ಟು ನಿಮಗೆ ಬೇರೆ ದಾರಿ ಉಳಿದಿರುವುದಿಲ್ಲ. ಯಾವುದೇ ಒಂದು ಅಪೇಕ್ಷೆ ಅಥವಾ ಆಕರ್ಷಣೆಯನ್ನು ಬಾಯಿತೆರೆದು ಬೇಕು ಎಂದಾಗ ಮನಸ್ಸು ಬೇಡವೆಂದರೆ ಆಗ ಸೃಷ್ಟಿಯಾಗುವುದೇ “ಒತ್ತಡ.” ಈ ಒತ್ತಡವೇ ಆಧುನಿಕ ಮಾನವನ ಪರಮಶತ್ರು.
ಭವಿಷ್ಯದ ಕಲ್ಪನೆ ಭಯ ಮತ್ತು ಸುಪ್ತಾವಸ್ಥೆಯ ಪ್ರೇರಣೆಗಳನ್ನು ನಿರಾಕರಿಸುವ ಮಾನಸಿಕ ಪ್ರಕ್ರಿಯೆಯಾಗಿದೆ ಮತ್ತು ಈ ಭಯಗಳನ್ನು ಮತ್ತು ಉದ್ದೇಶಗಳನ್ನು ಇತರರಿಗೆ ದಾಟಿಸುವ ಪ್ರಯತ್ನವಾಗಿರುತ್ತದೆ. ನಿಮ್ಮ ಸುಪ್ತ ಯಾ ಗುಪ್ತಭಾವನೆಗಳನ್ನು ಮತ್ತೊಬ್ಬರ ಮೇಲೆ ಪ್ರಕ್ಷೇಪಿಸದಂತೆ ಜಾಗರೂಕರಾಗಿರುವುದು ಅಥವಾ ಯಾವುದೂ ಇಲ್ಲದಿರುವಾಗ ಉದ್ದೇಶಗಳನ್ನು ಹೇಳಿಕೊಳ್ಳದಿರುವುದು ಯಾರಿಗೂ ಹಾನಿಯುಂಟುಮಾಡುವ ಸಂಭವವಿರುವುದಿಲ್ಲ. ಬಾಲ್ಯದ ಅನುಭವಗಳಿಂದ ಅಥವಾ ಪೂರ್ವಜನ್ಮಗಳ ಪುನರಾವರ್ತಿತ ಮಾದರಿಗಳ ಸ್ವರೂಪ ಮತ್ತು ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು ರಿಗ್ರೆಷನ್‌ನಿಂದ ಸಾಧ್ಯ. ತಿಳುವಳಿಕೆಯಿಲ್ಲದಿರುವುದೇ ಪ್ರಸ್ತುತ ಜನ್ಮದಲ್ಲಿ ಈ ಮಾದರಿಗಳ ಪುನರಾವರ್ತನೆಗೆ ಕಾರಣ ಮತ್ತು ಅನಗತ್ಯವಾಗಿ ಸಂಬಂಧಗಳನ್ನು ಹಾನಿಗೊಳಿಸುತ್ತಿರುತ್ತವೆ. ಸಂಬಂಧಗಳ ಹದಗೆಡಹುವಿಕೆಗೆ ಕಾರಣವಾಗುತ್ತಿರುವ ಮದ್ಯಪಾನ ಮತ್ತು ಮಾದಕದ್ರವ್ಯಗಳ ವ್ಯಸನ ಈ ಮಾದರಿಗಳ ಪುನರಾವರ್ತನೆಗೆ ಒಂದು ಅತ್ಯುತ್ತಮ ಉದಾಹರಣೆ.