ಇತ್ತೀಚೆಗೆ ಮತ್ತೊಮ್ಮೆ ಶ್ರೀ ಶಂಕರಾಚಾರ್ಯ' ಚಲನಚಿತ್ರವನ್ನು ನೋಡಿದೆವು. ಅದರಲ್ಲಿ ಶ್ರೀ ಶಂಕರರ ಬಾಲ್ಯಸ್ನೇಹಿತರಾಗಿ
ಪ್ರಜ್ಞಾನ’ ಮತ್ತು ಮೃತ್ಯು' ಎಂಬ ಇಬ್ಬರನ್ನು ತಂದಿದ್ದಾರೆ.
ಪ್ರಜ್ಞಾನ’ ಎಂದರೆ ಅಮೃತತ್ವಕ್ಕೆ ಸಾಧನವಾಗಿರುವ ಬ್ರಹ್ಮಜ್ಞಾನ'.
ಮೃತ್ಯು’ವೆಂದರೆ ಅದಕ್ಕೆ ವಿರುದ್ಧವಾಗಿರುವ ಮರಣ'. ಇವೆರಡನ್ನೂ ಹತ್ತಿರದಲ್ಲೇ ಇರುವುದಾಗಿ ನೋಡಬೇಕು ಎಂಬುದು ತಾತ್ಪರ್ಯ. ಶ್ರೀ ಶಂಕರರಂಥ ಮಹಾಜ್ಞಾನಿಗಳು ಹಾಗೆ ನೋಡುತ್ತಿದ್ದರು. ಇವೆರಡೂ ನಮಗೆ ತೀರ ಹತ್ತಿರದಲ್ಲೇ ಇರುವುದು ನಿಜ. ಜೀವನ ಎಂದರೆ ಈ ಶರೀರದಲ್ಲಿ ಉಸಿರು ನೆಲೆಸಿರುವಿಕೆ. ಅದು ತುಂಬ ಕ್ಷಣಿಕ. ಅಂದರೆ ಯಾವ ಕ್ಷಣದಲ್ಲೂ ಉಸಿರು ಶರೀರವನ್ನು ಬಿಟ್ಟು ಹೊರಡಬಹುದು. ಶ್ರೀ ಶಂಕರರು
ವಿದ್ಯುಚ್ಚಲಂ ಜೀವಿತಂ’ ಎಂದು ಹೇಳಿದ್ದಾರೆ. ಅನೇಕ ವ್ಯಕ್ತಿಗಳು ಈ ರೀತಿ ಕೆಲವೇ ಕ್ಷಣಗಳಲ್ಲಿ ಮರಣ ಹೊಂದಿದ್ದನ್ನು ನಾವು ಕಾಣಬಹುದಾಗಿದೆ. ಜೀವಾತ್ಮನ ಮತ್ತು ಶರೀರದ ಸಂಬಂಧ ಸೂಕ್ಷ್ಮವಾದದ್ದು. ಅದಕ್ಕೆ ಕಾರಣ ಪ್ರಾರಬ್ಧ ಕರ್ಮಗಳು. ಹಾಗಾಗಿ ಯಾವ ದಿನವೂ ಯಾವ ಕ್ಷಣವೂ ಮರಣ ಬರಬಹುದು. ಒಂದು ರೀತಿಯಲ್ಲಿ ಆಲೋಚಿಸಿದರೆ ಮರಣವೇ ಸಹಜ (ಪ್ರಕೃತಿ), ಜೀವನವೇ ಅಸಹಜ (ವಿಕೃತಿ). ರಘುವಂಶ' ಮಹಾಕಾವ್ಯದಲ್ಲಿನ,
ಮರಣಂ ಪ್ರಕೃತಿಃ ಶರೀರಿಣಾಂ ವಿಕೃತಿಃ ಜೀವಿತಮುಚ್ಯತೇ ಬುಧೈಃ |’ ಎಂಬ ಕಾಲಿದಾಸನ ಮಾತು ಇಲ್ಲಿ ಸ್ಮರಣೀಯ. ಆದ್ದರಿಂದ ಮೃತ್ಯು ನಿತ್ಯವೂ ನಮ್ಮ ಹತ್ತಿರದಲ್ಲೇ ಇದ್ದಾನೆ.
ಹಾಗೆಯೇ ಅಮೃತ'ವೂ ನಮಗೆ ಹತ್ತಿರದಲ್ಲೇ ಇದೆ.
ಅಮೃತ’ ಎಂದರೆ ಮರಣವಿಲ್ಲದ್ದು. ಪರಮಾತ್ಮನಿಗೆ ಮರಣವಿಲ್ಲ. ಅಮೃತ ಎಂದರೆ ಆನಂದಸ್ವರೂಪ, ಅದು ಕೂಡ ಪರಮಾತ್ಮನದ್ದೇ. ಮರಣವಿರುವುದು ಶರೀರಕ್ಕೆ. ಆದ್ದರಿಂದ ಶರೀರಕ್ಕೆ ಅಂಟಿಕೊಳ್ಳುವುದನ್ನು ಕಡಿಮೆ ಮಾಡಿ ಪರಮಾತ್ಮನಿಗೆ ಅಂಟಿಕೊಳ್ಳುವುದನ್ನು ಅಭ್ಯಾಸ ಮಾಡಿದರೆ ಅಮೃತ ನಮ್ಮ ಕೈಗೆ ಹತ್ತಿರದಲ್ಲೇ ಸಿಗುತ್ತದೆ.
ಇಂದ್ರಿಯಗಳೆಂದರೆ ಶರೀರವೆಂಬ ರಥಕ್ಕೆ ಕಟ್ಟಲ್ಪಟ್ಟ ಕುದುರೆಗಳು. ಆ ಕುದುರೆಗಳನ್ನು ವಿಷಯಗಳೆಂಬ ರಸ್ತೆಗಳಲ್ಲಿ ಹೆಚ್ಚುಹೆಚ್ಚು ಓಡಿಸಿದಂತೆ ಇಂದ್ರಿಯಗಳನ್ನು ಶರೀರಕ್ಕೆ ಕಟ್ಟಿದ ಹಗ್ಗ ಇನ್ನಷ್ಟು ಬಿಗಿಯಾಗುತ್ತ ಹೋಗುತ್ತದೆ. ಮನಸ್ಸೇ ಹಗ್ಗ. ಆ ಹಗ್ಗವು ಶರೀರವನ್ನೇ ಬಿಗಿಯಾಗಿ ಹಿಡಿಯುತ್ತ ನಮ್ಮನ್ನು ಮರಣಭಯದ ಕಡೆ ಕರೆದುಕೊಂಡು ಹೋಗುತ್ತದೆ.
ಮನಸ್ಸೆಂಬ ಹಗ್ಗವನ್ನು ಶರೀರದ ಜೊತೆ ಸಡಿಲವಾಗಿ ಕಟ್ಟಿಕೊಂಡು, ಪರಮಾತ್ಮನ ಜೊತೆ ಬಿಗಿಯಾಗಿ ಕಟ್ಟಿಕೊಳ್ಳಬೇಕು. ಆಗ ಅದೇ ಮನಸ್ಸು ಅಮೃತತ್ವದೆಡೆಗೆ ಕರೆದುಕೊಂಡು ಹೋಗುತ್ತದೆ. ಇಂದ್ರಿಯಭೋಗದೆಡೆಗೆ ಹೋದರೆ ಕ್ರಮೇಣ ಮರಣದೆಡೆಗೆ ನಮ್ಮ ಪಯಣವಾಗುತ್ತದೆ. ಇಂದ್ರಿಯಭೋಗವನ್ನು ಕರ್ತವ್ಯಕ್ಕಷ್ಟೇ ಸೀಮಿತಗೊಳಿಸಿಕೊಂಡು ಪರಮಾತ್ಮನ ಕಡೆ ಮನಸ್ಸನ್ನು ಕಟ್ಟಿಹಾಕಲು ಆ ಇಂದ್ರಿಯಗಳನ್ನು ಬಳಸಿಕೊಂಡರೆ ಅಮೃತತ್ವದೆಡೆಗೆ ನಮ್ಮ ಪಯಣವಾಗುತ್ತದೆ. ಇಂದ್ರಿಯಗಳು ದೇವರ ನಾಮಸಂಕೀರ್ತನೆ, ದೇವರ ಪೂಜೆ ಮುಂತಾದವುಗಳಲ್ಲಿ ತೊಡಗಿದರೆ ಮನಸ್ಸು ದೇವರ ಕಡೆ ಹೋಗುವ ಮೂಲಕ ಈ ಪಯಣ ಪ್ರಾರಂಭವಾಗುತ್ತದೆ.
ಏನಾಶ್ಚರ್ಯ! ಅಮೃತವೂ ನಮಗೆ ಹತ್ತಿರದಲ್ಲೇ ಇದೆ, ಮರಣವೂ ಹತ್ತಿರದಲ್ಲೇ ಇದೆ.