ಐಪಿಲ್ ವಿರುದ್ಧ ಟೀಕೆಗೆ ಗವಾಸ್ಕರ್ ಸಿಡಿಮಿಡಿ

sunil gavaskar

ಮುಂಬಯಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಐಪಿಎಲ್ ಪಾರಮ್ಯ ಅತಿಯಾಗುತ್ತಿದ್ದು, ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆಸ್ಟ್ರೇಲಿಯಾದ ಖ್ಯಾತ ಮಾಜಿ ಕ್ರಿಕೆಟಿಗ ಆ್ಯಡಮ್ ಗಿಲ್‌ಕ್ರಿಸ್ಟ್ ಅವರು ಮಾಡಿದ ಟೀಕೆಗೆ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಐಪಿಎಲ್ ವಿಷಯದಲ್ಲಿ ಯಾರೂ ಅನಗತ್ಯವಾಗಿ ಮಧ್ಯಪ್ರವೇಶ ಮಾಡಬಾರದೆಂದು ತಿರುಗೇಟು ನೀಡಿದ್ದಾರೆ.
ಪ್ರಸಿದ್ಧ ಕ್ರೀಡಾ ಮ್ಯಾಗಜಿನ್ ಒಂದಕ್ಕೆ ಬರೆದ ಅಂಕಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಗ್ರ್ಯಾಂಡ್ ಲಿಟ್ಲ್ಮಾಸ್ಟರ್, ಐಪಿಎಲ್ ಹೇಗಿರಬೇಕು, ಏನು ಮಾಡಬೇಕು ಎಂಬುದನ್ನು ನಮಗೆ ಗಿಲ್‌ಕ್ರಿಸ್ಟ್ ಅವರು ತಿಳಿಸಿಕೊಡುವ ಅಗತ್ಯವಿಲ್ಲ. ಈ ವಿಷಯದಲ್ಲಿ ನಮ್ಮ ಕ್ರೀಡಾ ಹಿತಾಸಕ್ತಿಯನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡದ ಖ್ಯಾತ ಆಟಗಾರ ಡೇವಿಡ್ ವಾರ್ನರ್ ಅವರು ಮುಂಬರುವ ಬಿಗ್ ಬ್ಯಾಶ್ ಲೀಗ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಟಿ-20 ಲೀಗ್‌ನಲ್ಲಿ ಅವರು ಆಡುತ್ತಿರುವುದೇ ಇದಕ್ಕೆ ಕಾರಣ ಎಂದು ಇತ್ತೀಚೆಗಿನ ವರದಿಗೆ ಪ್ರತಿಕ್ರಿಯಿಸಿದ ಗಿಲ್‌ಕ್ರಿಸ್ಟ್, ಜಾಗತಿಕ ಕ್ರಿಕೆಟ್ ಮೇಲೆ ಐಪಿಲ್ ಬಿಗಿಹಿಡಿತ ಅಪಾಯಕಾರಿಯಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಾಮೆಂಟ್‌ಗಳ ಶೆಡ್ಯೂಲ್‌ಗಳನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಐಪಿಲ್ ಫ್ರಾಂಚೈಸಿಗಳು ಆಟಗಾರರು ಯಾವ ರೀತಿ ಆಡಬೇಕು ಎಂಬುದನ್ನು ಕೂಡ ನಿರ್ಧರಿಸಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಆಟಗಾರರ ಮನೋಸ್ಥೈರ್ಯವನ್ನು ಹದಗೆಡಿಸಿದಂತಾಗುತ್ತದೆ ಎಂದು ಹೇಳಿದ್ದರು.

sunil gavaskar