ಐಎಸ್‌ಎಸ್ ಪ್ರವೇಶಿಸಲಿರುವ ಮೊದಲ ಭಾರತೀಯ

ನಾಸಾ ಸಹಕಾರದೊಂದಿಗೆ ನಡೆಯಲಿರುವ ಅಮೆರಿಕದ ಆಗ್ಸಿಯೋಂ ಖಾಸಗಿ ಮಿಷನ್‌ನಲ್ಲಿ ಇಸ್ರೋ ಮೇ ೨೯ರಂದು ಗಗನಕ್ಕೆ ಹಾರಲಿದ್ದಾರೆ ಭಾರತ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ. ಇವರು ಭಾರತದ ಎರಡನೇ ಗಗನಯಾತ್ರಿ. ಭಾರತದ ಮೂಲದ ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಾಸಾ ಗಗನಯಾತ್ರಿಗಳಾಗಿ ಹೋಗಿ ಬಂದಿದ್ದಾರೆ. ಆದರೆ ಭಾರತದಿಂದಲೇ ಇದುವರೆಗೆ ಗಗನಯಾತ್ರೆ ಮಾಡಿರುವುದು ರಾಕೇಶ್ ಶರ್ಮಾ ಮಾತ್ರ. ಆಗಿನ ಯುಎಸ್‌ಎಸ್‌ಆರ್ ಮತ್ತು ಭಾರತದ ಸೋಯುಜ್ ಟಿ-೧೧ ಮಿಷನ್‌ನಲ್ಲಿ ರಾಕೇಶ್ ಶರ್ಮಾ ೧೯೮೪ರಲ್ಲಿ ಏಳು ದಿನಗಳ ಗಗನಯಾತ್ರೆ ಮಾಡಿದ್ದರು. ಅದಾದ ನಂತರ ಅಂಥ ಅವಕಾಶ ಶುಭಾಂಶುಗೆ ಒದಗಿ ಬಂದಿದೆ.
ರಾಕೇಶ್ ಶರ್ಮಾ ನೌಕೆಯಲ್ಲೇ ಇದ್ದುಕೊಂಡು ಏಳು ದಿನ ಭೂಮಿಯನ್ನು ಸುತ್ತುಹಾಕಿ ಬಂದಿದ್ದರು. ಆದರೆ ಶುಭಾಂಶು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್‌ಎಸ್)ಗೆ ಹೋಗಲಿದ್ದಾರೆ. ಐಎಸ್‌ಎಸ್‌ಗೆ ಹೋದ ಮೊದಲ ಭಾರತೀಯ ವ್ಯಕ್ತಿಯಾಗಲಿದ್ದಾರೆ. ಭಾರತದ ಗಗನಯಾನ ಮಿಷನ್‌ಗೆ ಕೂಡ ಶುಭಾಂಶು ನಿಯೋಜನೆಗೊಂಡಿದ್ದಾರೆ.
ಬಾಹ್ಯಾಕಾಶದಲ್ಲಿ, ಸೂಕ್ಷ್ಮ ಗುರುತ್ವದಲ್ಲಿ ಆಹಾರ ಉತ್ಪಾದನೆ ಕುರಿತ ಸಂಶೋಧನೆಯೇ ಈ ಯೋಜನೆಯ ಮುಖ್ಯ ಉದ್ದೇಶ. ಅದನ್ನು ಗಮನದಲ್ಲಿಟ್ಟುಕೊಂಡೇ ಕೆಲವೊಂದು ಪರೀಕ್ಷೆಗಳನ್ನು ಈ ಮಿಷನ್‌ನ ನಾಲ್ಕೂ ಗಗನಯಾತ್ರಿಗಳು ನಡೆಸಲಿದ್ದಾರೆ. ಹೆಸರುಕಾಳು, ಮೆಂತ್ಯ ಕಾಳು ಮೊಳಕೆ ಬರಿಸುವುದು ಕೂಡ ಇದರಲ್ಲಿ ಒಂದು. ಇತ್ತೀಚೆಗೆ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನಲ್ಲಿ ಜಪಾನಿನ ಮೀಸೋ ಪೇಸ್ಟ್ ತಯಾರಿಸಲಾಗಿದೆ. ಬಾಹ್ಯಾಕಾಶದಲ್ಲಿ ಹುದುಗು ಬರಿಸಿದ ಮೊದಲ ಆಹಾರ ಎನ್ನಲಾಗಿದೆ. ಮೀಸೋ ಪೇಸ್ಟ್ ಭೂಮಿಯಲ್ಲಿ ತಯಾರಾಗುವುದಕ್ಕಿಂತಲೂ ಬೇರೆಯದೇ ಆದ, ಉತ್ತಮ ರುಚಿ ಹೊಂದಿರುತ್ತದೆ ಎಂದು ಹೇಳಲಾಗಿದೆ. ಅದೇ ನಿಟ್ಟಿನಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ದೀರ್ಘಕಾಲದ ಬಾಹ್ಯಾಕಾಶ ಪ್ರಯಾಣಕ್ಕೆ ಈ ಪ್ರಯೋಗಗಳ ಫಲಿತಾಂಶವು ಅನುಕೂಲವಾಗಲಿದೆ. ಈ ತಂಡ ಒಟ್ಟು ೬೦ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿವೆ. ಅದರಲ್ಲಿ ಭಾರತೀಯರು ರೂಪಿಸಿರುವ ಆಹಾರಕ್ಕೆ ಸಂಬಂಧಿಸಿದ ೭ ಪ್ರಯೋಗಗಳಿವೆ.
ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಹೋಗಿ ಬಂದ ಮರುವರ್ಷ ಜನಿಸಿರುವ ಶುಭಾಂಶುಗೆ ಈಗ ಸರಿಯಾಗ ೪೦ ವರ್ಷ ವಯಸ್ಸು. ಲಖನೌನಲ್ಲಿ ಹುಟ್ಟಿ ಬೆಳೆದ ಶುಭಾಂಶುಗೆ, ಹಕ್ಕಿಯಂತೆ ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುವುದು ಸಣ್ಣ ವಯಸ್ಸಿನಿಂದಲೂ ಅವರಿಗೆ ಇದ್ದ ಕನಸು. ಕಾರ್ಗಿಲ್ ಯುದ್ಧ ಅವರಲ್ಲಿ ಸೇಗೆ ಸೇರುವಂತೆ ಪ್ರೇರಣೆ ನೀಡಿತು. ತಮ್ಮ ೧೬ನೇ ವಯಸ್ಸಿನಲ್ಲಿ ಮನೆಯಲ್ಲಿ ಪೋಷಕರಿಗೂ ಸಹ ತಿಳಿಸದೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಅರ್ಜಿ ಹಾಕಿಕೊಂಡರು. ವಾಯುಪಡೆಗೆ ಆಯ್ಕೆಯಾದರು. ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಕೂಡ ಮುಗಿಸಿಕೊಂಡಿದ್ದಾರೆ. ನಂತರ ೨೦೦೫ರಲ್ಲಿ ವಾಯುಪಡೆಯ ಕಮೀಷನ್ಡ್ ಅಧಿಕಾರಿ ಆದರು. ಈಗ ಇರುವುದು ಬೆಂಗಳೂರಿನಲ್ಲಿ. ಅವರಿಗೆ ೨೦೦೦ ಗಂಟೆ ವಿಮಾನ ಹಾರಾಟದ ಅನುಭವ ಇದೆ. ಸುಖೋಯ್-೩೦, ಮಿಗ್-೩೧, ಜಾಗ್ವಾರ್ ಮತ್ತು ಎನ್-೩೨ ವಿಮಾನಗಳನ್ನು ಹಾರಿಸಿದ್ದಾರೆ. ಪತ್ನಿ ಕಾಮನಾ ಒಬ್ಬ ಡೆಂಟಿಸ್ಟ್, ಮಗನಿಗೆ ಇನ್ನೂ ೪ ವರ್ಷ ವಯಸ್ಸು. ೨೦೨೦ರಲ್ಲಿ ರಷ್ಯಾದ ಯೂರಿ ಗಗಾರಿನ್ ಕಾಸ್ಮೊನಾಟ್ ಟ್ರೈನಿಂಗ್ ಸೆಂಟರ್‌ನಲ್ಲಿ ಸ್ಪೇಸ್‌ಫ್ಲೈಟ್ ಟ್ರೈನಿಂಗ್ ಪಡೆದು ಬಂದಿರುವ ಶುಭಾಂಶು, ನಂತರ ಬೆಂಗಳೂರಿನ ಇಸ್ರೋ ಆಸ್ಟ್ರೋನಾಟ್ ಟ್ರೈನಿಂಗ್ ಫೆಸಿಲಿಟಿಯಲ್ಲಿ ತಮ್ಮ ತರಬೇತಿ ಮುಂದುವರಿಸಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ಸ್ ಡಿಗ್ರಿಯನ್ನೂ ಗಳಿಸಿಕೊಂಡಿದ್ದಾರೆ.