ಹುಬ್ಬಳ್ಳಿ: ಶಶಿಧರ್ ಸ್ಟುಡಿಯೋಸ್ ಪ್ರೋಡಕ್ಷನ್ ನಿರ್ಮಾಣದ ಅಡಿಯಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ವೀರಂ' ಚಲನಚಿತ್ರ ಏ. 7ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಖದರ್ ಕುಮಾರ್ ಹೇಳಿದರು. ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಂ ಚಿತ್ರ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದ್ದು, ಚಿತ್ರದಲ್ಲಿ 4 ಹಾಡು ಹಾಗೂ 5 ಪೈಟ್‌ಗಳು ಇವೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿದೆ ಎಂದು ಮಾಹಿತಿ ನೀಡಿದರು. ಇದು ನನ್ನ ಮೊದಲನೇ ಸಿನಿಮಾ.
ವೀರಂ’ ಎಂದರೆ ಯಾರಿಗೂ ಹೆದರದ ವ್ಯಕ್ತಿ ಚಿತ್ರದಲ್ಲಿ ಮಾಸ್ ಜೊತೆಗೆ ಎಮೋಷನಲ್ ಕಥೆಯನ್ನು ಸಿನಿಮಾ ಒಳಗೊಂಡಿದೆ. ಅಕ್ಕ ತಮ್ಮಂದಿರ ಪ್ರೀತಿ, ಕಾಳಜಿ ಹಾಗೂ ಆಕಾಂಕ್ಷೆಯನ್ನು ತೋರುವ ಭಾವನಾತ್ಮಕ ಚಿತ್ರವಾಗಿದ್ದು, ಡಾ. ವಿಷ್ಣುವರ್ದನ್ ಅಭಿಮಾನಿಯಾಗಿ ಏನೆಲ್ಲಾ ಮಾಡುತ್ತಾರೆ ಎಂಬುದು ಈ ಚಿತ್ರದಲ್ಲಿದೆ. ಇಡೀ ಕುಟುಂಬವೇ ನೋಡುವಂತಹ ಚಿತ್ರವಾಗಿದೆ ಎಂದರು.
ಚಿತ್ರದಲ್ಲಿ ನಟಿ ರಚಿತಾ ರಾಮ್, ನಟರಾದ ಶ್ರೀನಗರ ಕಿಟ್ಟಿ, ಶೃತಿ, ಅಚ್ಯುತ್ ಕುಮಾರ್, ಶಿಷ್ಯ ದೀಪಕ್, ಚಿರಾಗ್ ಜಾನಿ, ಬಲರಾಜ ವಾಡಿ, ಮೈಕೋ ನಾಗರಾಜ್ ಸೇರಿದಂತೆ ಪ್ರಮುಖರು ಅಭಿನಯಿಸಿದ್ದಾರೆ ಎಂದರು.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಾತನಾಡಿ, ಮೊದಲಿನಿಂದಲೂ ಉತ್ತರ ಕರ್ನಾಟಕ ಜನರು ನಂಗೆ ತುಂಬಾ ಇಷ್ಟ. ಬಹುತೇಕ ನನ್ನೆಲ್ಲಾ ಚಿತ್ರಗಳಿಗೆ ಇಲ್ಲಿನ ಜನರ ಆಶೀರ್ವಾದ ಇದೆ. ಕೋಟೆ ಸಿನಿಮಾವನ್ನು ಉತ್ತರ ಕರ್ನಾಟಕದಲ್ಲಿಯೇ ಮಾಡಿದ್ದೇನೆ. ಈಗ ವೀರಂ ಸಿನಿಮಾ ಮಾಡಿದ್ದು, ಇದೊಂದು ಹೊಸ ಪ್ರಯತ್ನ ಎನ್ನುವುದಕ್ಕಿಂತ ಮಾಸ್ ಸಿನಿಮಾ ಮಾಡದೇ ಬಹಳ ದಿನ ಆಗಿತ್ತು. ಆ ನಿಟ್ಟಿನಲ್ಲಿ ಈ ವೀರಂ ಚಿತ್ರ ಮಾಡಲಾಗಿದೆ. ಉತ್ತರ ಕರ್ನಾಟಕ ಜನತೆಯು ಚಿತ್ರ ನೋಡಿ ಆಶೀರ್ವಾದ ನೀಡಬೇಕು ಎಂದರು.
ನಟ ಶ್ರೀನಗರ ಕಿಟ್ಟಿ ಮಾತನಾಡಿ, ವೀರಂ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ಅಣ್ಣನಾಗಿ ಪಾತ್ರ ಮಾಡುತ್ತಿದ್ದೇನೆ. ವೀರಂ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ಒಳ್ಳೆಯ ಕಥೆಯಾಗಿದೆ ಎಂದರು.
ಛಾಯಾಗ್ರಹಣ ಲವಿತ್, ಸಾಹಿತ್ಯ ಡಾ. ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಸಂಗೀತ ಅನೂಪ್ ಸೀಳಿನ್, ಹಿನ್ನೆಲೆ ಸಂಗೀತ ದಿವ್ಯ ಶಶಿಧರ್, ನೃತ್ಯ ಮುರಳಿ ಮಾಸ್ಟರ್, ಸಾಹಸ ಡ್ಯಾನಿ ಮಾಸ್ಟರ್, ಸಂಕಲನ ರವಿಚಂದ್ರನ್ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಶಶಿಧರ್ ಕೆ.ಎಂ, ಶಿಷ್ಯ ದೀಪಕ್ ಸೇರಿದಂತೆ ಮತ್ತಿತರರು ಇದ್ದರು.