ಎಸ್‌ಎಸ್‌ಎಲ್‌ಸಿಯಲ್ಲಿ ೪ ವಿಷಯದಲ್ಲಿ ಫೇಲ್ : ವಿದ್ಯಾರ್ಥಿ ಆತ್ಮಹತ್ಯೆ

ನರೇಗಲ್ಲ(ಗದಗ ಜಿಲ್ಲೆ) : ಇತ್ತೀಚಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರಲ್ಲಿ ೪ ವಿಷಯ ಫೇಲ್ ಆದ ಕಾರಣಕ್ಕೆ ಪಟ್ಟಣದ ಎಸ್.ಎ.ವಿ ಪ್ರೌಢ ಶಾಲೆಯ ವಿದ್ಯಾರ್ಥಿ ರಾಕೇಶ್ ನಾಗೇಶಪ್ಪ ಮಣ್ಣೂಡ್ಡರ(೧೭) ಬುಧವಾರ ಬೆಳಿಗ್ಗೆ ಸುಮಾರು ೫ ರಿಂದ ೬ ಘಂಟೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ(60), ಇಂಗ್ಲಿಷ್ (48) ವಿಷಯಗಳಲ್ಲಿ ಪಾಸಾಗಿದ್ದು, ಉಳಿದ ಹಿಂದಿ (34), ಗಣಿತ (34), ವಿಜ್ಞಾನ (35), ಸಮಾಜ ವಿಜ್ಞಾನ (27) ವಿಷಯಗಳಲ್ಲಿ ಫೇಲಾಗಿದ್ದಾನೆ. ಫಲಿತಾಂಶ ಪ್ರಕಟವಾದ ದಿನದಿಂದ ಮನಸ್ಸಿಗೆ ತೆಗೆದುಕೊಂಡಿದ್ದ ವಿದ್ಯಾರ್ಥಿಯು ಅದನ್ನೇ ಹೆಚ್ಚಾಗಿ ವಿಚಾರ ಮಾಡುತ್ತಿದ್ದ. ಇದೇ ವಿಷಯಕ್ಕೆ ಜೀವನದಲ್ಲಿ ಜಿಗುಪ್ಸೆ ಹೊಂದಿ, ಮನನೊಂದು ನರೇಗಲ್ಲನ ಬಸ್‌ ನಿಲ್ದಾಣದ ಎದುರಿಗೆ ಇರುವ ಎಂ.ಸಿ.ಎಸ್ ಸರ್ಕಾರಿ ಶಾಲೆಯ ಆವರಣದಲ್ಲಿನ ಗಿಡಕ್ಕೆ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ರಾಕೇಶ ಕಬಡ್ಡಿಯಲ್ಲಿ ತನ್ನ ನಾಯಕತ್ವದಲ್ಲಿ ಜಿಲ್ಲಾ‌ ಮಟ್ಟದ ವರೆಗೂ ತೆಗೆದುಕೊಂಡು ಹೋಗಿ ಉತ್ತಮ ಆಟವಾಡಿದ್ದನು. ಶ್ರೀ ಅನ್ನದಾನೇಶ್ವರ ಶಾಲೆಯಲ್ಲಿ ಈ ಬಾರಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಿದ್ದರು.

ಕೆಲ ದಿನಗಳ ಹಿಂದೆ ಶಾಲೆಗೆ ಬಂದು ಸೋಮವಾರದಿಂದ ಆರಂಭವಾಗುವ ಪರೀಕ್ಷೆ-2ರ ಪ್ರವೇಶಪತ್ರ ತೆಗೆದುಕೊಂಡು ಹೋಗಿದ್ದಾನೆ. ಆದರೆ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಿಷಯ ತಿಳಿದು ನಮಗೆ ಹಾಗೂ ಶಾಲೆಯ ಎಲ್ಲ ಶಿಕ್ಷಕರ ಮನಸ್ಸಿಗೆ ತುಂಬಾ ನೊವುಂಟು ಮಾಡಿದೆ ಎಂದು ಪ್ರೌಢ ಶಾಲೆಯ ಮುಖ್ಯಶಿಕ್ಷಕ ಎಂ.ಬಿ ಸಜ್ಜನರ ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಯ ತಂದೆ ಗೌಂಡಿ ಕೆಲಸ ಮಾಡುತ್ತಾರೆ. ಅವರಿಗೆ ಇಬ್ಬರು ಗಂಡುಮಕ್ಕಳಿದ್ದು ರಾಕೇಶ್ ಕಿರಿಯ ಮಗನಾಗಿದ್ದಾನೆ. ಈ ಕುರಿತು ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.