ಹಾಲು ತುಟ್ಟಿ, ಮೊಸರು ತುಟ್ಟಿ, ಕರೆಂಟು ತುಟ್ಟಿ, ಡಿಸೇಲು ತುಟ್ಟಿ, ಟೋಲು ತುಟ್ಟಿ, ಇನ್ನು ಮೇಲೆ ನೀರು ತುಟ್ಟಿ ಇಷ್ಟೆಲ್ಲ ತುಟ್ಟಿ ಆಗಿವೆ ಹೀಗೆ ಮಾಡಿದರೆ ಹೇಗೆ? ಹೀಗೆ ಎಲ್ಲವೂ ತುಟ್ಟಿ ಆದರೆ ನಮಗೆ ಜಾಲಿಕಟ್ಟಿಯೇ ಸರಿ… ಅದೇ ಜಾಲಿಕಟ್ಟೆಯ ಮೇಲೆ ಸಭೆ ನಡೆಸಿ ಮದ್ರಾಮಣ್ಣನವರ ಹತ್ತಿರ ಹೋಗಿ ಕೇಳೋಣ ಎಂಬ ನಿರ್ಧಾರ ತೆಗೆದುಕೊಂಡು ಎಲ್ಲರೂ ಮದ್ರಾಮಣ್ಣನವರ ಮನೆಗೆ ಹೋದರು. ಅದೇ ಸ್ನಾನ ಮಾಡಿ ಇನ್ನೇನು ತಿಂಡಿ ತಿನ್ನಬೇಕು ಅನ್ನುವಷ್ಟರಲ್ಲಿ ಏನ್ಮಾಡ್ತಿದೀರಾ ಸಾ…. ಎಂದು ಕೆಟ್ಟ ದನಿಯಿಂದ ಒದರುತ್ತ ಎಲ್ಲರೂ ಒಳಗೆ ಹೋದರು. ರ‍್ರಿ…ರ‍್ರಿ ಎಂದು ಅವರನ್ನೆಲ್ಲ ಸೋಫಾದ ಮೇಲೆ ಕೂಡಿಸಿ, ಎಲ್ರೂ ಟಿಫಿನ್ ಮಾಡ್ತೀರಲ್ಲವೇ ಎಂದು ಕೇಳಿದರು. ಅದಕ್ಕೆ ತಿಗಡೇಸಿ ಅಯ್ಯೋ ನಾವು ಒಲ್ಲೆ ಅಂದರೆ ನೀವು ಬಿಡಬೇಕಲ್ಲ? ಎಂದು ಹೇಳಿದವನಿಗೆ ಒಳಗಿನವರೆಗೆ ಕೇಳುವ ಹಾಗೆ… ಏಯ್.. ಇಲ್ಲಿ ಒಂದಿಪ್ಪತ್ತು ಮಂದಿ ಇದೇವೆ ಇಡ್ಲಿ ತನ್ನಿ ಸಾ ಎಂದು ಕೂಗಿದ. ಸ್ವಲ್ಪ ಹೊತ್ತು ಆದ ಮೇಲೆ ತಿಂಡಿ ತಂದಿಟ್ಟರು. ಮದ್ರಾಮಣ್ಣನವರು ಅದನ್ನು ತಿನ್ನುತ್ತ.. ಏನು ಎಲ್ರೂ ಇಷ್ಟು ದೂರ ಬಂದಿದ್ದೀರಿ ಎಂದು ಕೇಳಿದಾಗ.. ಏನಿಲ್ಲ ಮದ್ರಾಮಣ್ಣೋರೆ….. ಹಾಲು ದರ ಏರಿಸಿಬಿಟ್ಟಿದ್ದೀರಿ ಅಂದಾಗ… ಬೇಸಿಗೆ ಅಲ್ಲವೇ ಹಸುಗಳಿಗೆ ಕುಡಿಯಲು ನೀರು ಸಾಲಲ್ಲ ಕಡಿಮೆ ನೀರು ಕುಡಿಯುತ್ತವೆ ಕಡಿಮೆ ಹಾಲು ಕೊಡುತ್ತವೆ.. ವರ್ಕೌಟ್ ಆಗಬೇಕಲ್ಲ… ಇನ್ನು ಮೊಸರು ಅಯ್ಯೋ ಹಾಲೇ ಕಮ್ಮಿ ಅಂದಮೇಲೆ ಮೊಸರು ಹೆಂಗೆ ಮಾಡನ? ಅಂದರು. ಇನ್ನ ಕರೆಂಟು… ಸ್ವಾಮೀ… ಪುಗಸೆಟ್ಟೆ ಅಂತ ಜನರು ಹೆಂಗ ಬೇಕಾದಂಗೆ, ಹಗಲೊತ್ತೂ ಲೈಟ್ ಉರಿಸುತ್ತಿದ್ದರು. ಕಟ್ ಮಾಡನ ಅಂತ ಈ ಪ್ಲಾನ್ ಮಾಡಿದೆವು…. ಇನ್ನ ಡಿಸೇಲು-ಟೋಲು…. ನೋಡಿ ಸ್ವಾಮಿ ಕಾರಿದೆ ಎಂದು ಎಲ್ಲ ಕಡೆಗೆ ಅಡ್ಡಾಡುವುದಲ್ಲ. ಅದಕ್ಕೂ ಲಿಮಿಟ್ ಬೇಡವೇ ಆದ್ದರಿಂದ ಡಿಸೇಲು ಟೋಲು ಏರಿಸಿದ್ದೇವೆ. ತಡೀರಿ.. ನೀರಿಂದೂ ಇದೇ ಸಮಸ್ಯೆ ಆದ್ದರಿಂದ ಎಂದು ಹೇಳುತ್ತಿದ್ದಂತೆ… ಆಯ್ತು ಸಾ… ನಾವಿನ್ನು ಬರುತ್ತೇವೆ ಎಂದು ತಿಗಡೇಸಿ ಗ್ಯಾಂಗ್ ಅಲ್ಲಿಂದ ಹೊರಬಂತು. ಮದ್ರಾಮಣ್ಣನವರು ಮಾತ್ರ ಮುಗಳ್ನಗುತ್ತ ಇಡ್ಲಿ ಮುರಿದರು.