ಎಲ್ಲರನ್ನೂ ಒಳಗೊಳ್ಳುವುದೇ ಬ್ರಾಹ್ಮಣ ಸಮ್ಮೇಳನದ ಉದ್ದೇಶ

೧೯೭೪ ರಲ್ಲಿ ಆರಂಭವಾದ ಅಖಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗೆ ಈಗ ಸುವರ್ಣ ಮಹೋತ್ಸವದ ಸಂಭ್ರಮ. ಕಳೆದ ಐವತ್ತು ವರ್ಷಗಳಿಂದ ಮಹಾಸಭೆ ದಾಪುಗಾಲು ಇಡುತ್ತ ಬಂದು ಕಳೆದ ಮೂರು ವರ್ಷಗಳಿಂದ ಸಂಘಟನೆಯ ವೇಗ ಹೆಚ್ಚಿಸಿಕೊಂಡಿದೆ. ಕಳೆದ ಮೂರು ವರ್ಷಗಳ ಹಿಂದೆ ಖ್ಯಾತ ವಕೀಲರು, ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಅವರು ಸಭಾದ ಸಾರಥ್ಯ ವಹಿಸಿಕೊಂಡರು. ರಾಜ್ಯದ ಉದ್ದಗಲಕ್ಕೂ ಸುತ್ತಿ ಎಲ್ಲ ವಿಪ್ರರನ್ನು ಒಂದು ಗೂಡಿಸಿ ಯಶಸ್ವಿಯೂ ಆದರು. ಯಾವ ಧರ್ಮದವರು ಎಷ್ಟೇ ಹೀಯಾಳಿಸಲಿ ನಮಗೆ ಅದರ ಗೊಡವೆ ಬೇಡ. ಸನಾತನ ಧರ್ಮವನ್ನು ಉಳಿಸಬೇಕು. ಎಲ್ಲ ಧರ್ಮದವರನ್ನು ಪ್ರೀತಿಸಬೇಕು ಎಂಬ ಉದ್ದೇಶವನ್ನು ಮುಂದಿಟ್ಟುಕೊಂಡು ಸಾಗುತ್ತಿರುವ ಮಹಾಸಭೆ ೧೦ ಸಮ್ಮೇಳನಗಳನ್ನು ಪೂರೈಸಿದೆ. ಇದೀಗ ಮಹಾಸಭೆಗೆ ೫೦ ವರ್ಷಗಳು ಸಂದ ನೆನಪಿಗಾಗಿ ಇದೇ ದಿ. ೧೮ ಹಾಗೂ ೧೯ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬ್ರಾಹ್ಮಣ ಮಹಾಸಮ್ಮೇಳನ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಹಾಸಭೆಯ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಸಂಯುಕ್ತ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನ ಇದು.

ಸಂಯುಕ್ತ ಕರ್ನಾಟಕ: ಈ ಸಮ್ಮೇಳನ ನಡೆಸುವ ಉದ್ದೇಶವೇನು?
ಅಶೋಕ ಹಾರನಹಳ್ಳಿ: ಸನಾತನ ಧರ್ಮವನ್ನು ಗಟ್ಟಿಗಳಿಸಬೇಕಾದ ಅಗತ್ಯ ಈಗಿದೆ. ಬ್ರಾಹ್ಮಣ ತ್ರಿಮತಸ್ಥರಲ್ಲಿ ಭಿನ್ನಾಭಿ ಪ್ರಾಯ ಕಾಣುತ್ತಿದ್ದು ಅದನ್ನು ಹೋಗಲಾಡಿಸಬೇಕಾಗಿದೆ. ಸಮ್ಮೇ ಳನದಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಂಡು ಸಮಾಜಕ್ಕೆ ಒಳಿತು ಮಾಡುವ ಪ್ರಯತ್ನ ಮಾಡಲಾಗುವುದು.

ಸಮ್ಮೇಳನದಲ್ಲಿ ಯಾವ ನಿರ್ಣಯ ತೆಗೆದುಕೊಳ್ಳುವಿರಿ?
ಅಶೋಕ ಹಾರನಹಳ್ಳಿ: ಹೌದು ನಿರ್ಣಯ ಗಳನ್ನು ತೆಗೆದುಕೊಳ್ಳಲೇಬೇಕಾದ ಅನಿ ವಾರ್ಯತೆ ಇದೆ. ನಾನು ಅಧ್ಯಕ್ಷನಾದ ಮೇಲೆ ರಾಜ್ಯದ ಉದ್ದಗಲಕ್ಕೂ ಸುತ್ತಿ ಬ್ರಾಹ್ಮ ಣರ ಸಭೆಗಳನ್ನು ನಡೆಸಿದ್ದೇನೆ. ಎಲ್ಲ ಕಡೆ ಆರ್ಥಿಕ ದುರ್ಬಲರು ಇದ್ದಾರೆ. ಅಂಥವರಿಗೆ ಕೇಂದ್ರ ಸರ್ಕಾರ ಶೇ ೧೦ ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದೆ, ರಾಜ್ಯ ಸರ್ಕಾರ ಸಮರ್ಪಕವಾಗಿ ಜಾರಿಗೊಳಿಸಬೇಕು. ಇದು ಸಮ್ಮೇಳನದಲ್ಲಿ ನಾವು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲೊಂದು.

ಸಂಯುಕ್ತ ಕರ್ನಾಟಕ: ಎಲ್ಲ ಸಮಾಜದವರೂ ಸಮ್ಮೇಳನ ಮಾಡುತ್ತಾರೆ, ಆದರೆ ಬ್ರಾಹ್ಮಣ ಸಮುದಾಯದ ಸಮಾವೇಶ ಅಂದರೆ ಎಲ್ಲರೂ ವಿರೋಧ ಮಾಡುತ್ತಾರೆ?
ಅಶೋಕ ಹಾರನಹಳ್ಳಿ: ಹೌದು ಬೇಕಾದಷ್ಟು ವಿರೋಧ ಮಾಡಿದರೂ ನಾವು ಕಿವಿಕೊಡುವುದಿಲ್ಲ. ನಮ್ಮ ಸನಾತನ ಸಿದ್ಧಾಂತದ ಪ್ರಕಾರ ಹೋಗುತ್ತೇವೆ. ನಮ್ಮ ಸಮಾಜ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಸರ್ವೇ ಜನಾಃ ಸುಖಿನೋ ಭವಂತು ಎಂಬ ಹಾದಿಯಲ್ಲಿ ಹೋಗುತ್ತಿದ್ದರೂ ವಿರೋಧ ಮಾಡುತ್ತಾರೆ. ಹೇಗಿದೆ ಅಂದರೆ ಕೆಲವು ಧರ್ಮಗಳು ಏನಾದರೂ ಹೇಳಿದರೆ ಅದು ಜಾತ್ಯತೀತ ಅನ್ನುತ್ತಾರೆ. ಸನಾತನ ಧರ್ಮದಲ್ಲಿ ಹೇಳಿದ್ದನ್ನು ಹೇಳಿದರೆ ಅಂಥವರನ್ನು ಕೋಮುವಾದಿಗಳು ಎಂದು ಹೇಳುತ್ತಾರೆ ಅಂಥವರಿಗೆ ಏನು ಮಾಡುವುದು ಹೇಳಿ.

ಸಂಯುಕ್ತ ಕರ್ನಾಟಕ: ಸನಾತನ ಧರ್ಮ ಅಂದರೆ ಅದು ಶೋಷಣೆಯ ಧರ್ಮ ಅನ್ನುತ್ತಾರಲ್ಲ?
ಅಶೋಕ ಹಾರನಹಳ್ಳಿ: ಜಾತ್ಯತೀತತೆಯ ಸೋಗು ಹಾಕಿಕೊಂಡವರು ಬಹಳಷ್ಟು ಜನರು ಇದ್ದಾರೆ. ಡಿಎಂಕೆ ಪಕ್ಷದ ಸಂಸದ ಜಾತ್ಯತೀತತೆಯ ಬಗ್ಗೆ ಮಾತನಾಡುತ್ತಾರೆ. ಸನಾತನ ಧರ್ಮವನ್ನು ಬಯ್ಯುವುದೇ ಜಾತ್ಯತೀತವೇ? ಹೀಗೆ ಮಾತನಾಡುವವರು ವೇದಗಳನ್ನು ಉಪನಿಷತ್‌ಗಳನ್ನು ಓದಿಕೊಂಡಿದ್ದಾರೆಯೇ?

ಸಂಯುಕ್ತ ಕರ್ನಾಟಕ: ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರನ್ನು ಟೀಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆಯೇ?
ಅಶೋಕ ಹಾರನಹಳ್ಳಿ: ಹೌದು ಅವರಿಗೆ ಸನಾತನ ಧರ್ಮದ ಒಳಸತ್ವದ ಅರಿವು ಇರುವುದಿಲ್ಲ. ಒಂದು ಬಾರಿ ಆ ಧರ್ಮದ ಅನ್ವೇಷಣೆ ಮಾಡಲಿ. ಸನಾತನ ಧರ್ಮ ಅಂದರೆ ಅದನ್ನು ಧರ್ಮವಿಭಜನೆ ಎಂದು ಅನ್ನುತ್ತಾರೆ. ನಮ್ಮಲ್ಲಿ ಆಸ್ತಿಕರು, ನಾಸ್ತಿಕರು ಇಬ್ಬರೂ ಇದ್ದಾರೆ. ಆದರೆ ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಬಾರದು.

ಸಂಯುಕ್ತ ಕರ್ನಾಟಕ: ಈ ಸಮಾವೇಶದ ಮೂಲಕ ಬ್ರಾಹ್ಮಣರೆಲ್ಲ ಒಂದಾಗುತ್ತಾರೆಯೇ?
ಅಶೋಕ ಹಾರನಹಳ್ಳಿ: ಬ್ರಾಹ್ಮಣರಲ್ಲೂ ಒಂದು ಸಮಸ್ಯೆ ಇದೆ. ಎಲ್ಲರೂ ಸ್ವಂತ ಅಭಿಪ್ರಾಯ ಹೊಂದುತ್ತಾರೆ. ಬೇರೆ ಸಮುದಾಯದಲ್ಲಿದ್ದಂತೆ ನಾಯಕ ಹೇಳಿದ ಮಾತು ಕೇಳುವಂತೆ ಇಲ್ಲಿ ಕೇಳುವುದಿಲ್ಲ. ಇದರಿಂದಾಗಿ ಕೆಲವೊಂದು ಬಾರಿ ವಿಕೋಪಕ್ಕೆ ತಿರುಗಿ ಬ್ರಾಹ್ಮಣರಲ್ಲಿ ವಿರೋಧಾಭಾಸಕ್ಕೂ ಕಾರಣವಾಗುತ್ತದೆ.

ಸಂಯುಕ್ತ ಕರ್ನಾಟಕ: ಬ್ರಾಹ್ಮಣರಲ್ಲಿ ಸಮನ್ವಯದ ಕೊರತೆ ಇದ್ದರೆ ಸಂಘಟನೆ ಹೇಗೆ ಸಾಧ್ಯ?
ಅಶೋಕ ಹಾರನಹಳ್ಳಿ: ಈ ಕೊರತೆಯಿಂದ ಆಗಿರುವ ನಷ್ಟದ ಅರಿವು ಸಮುದಾಯದ ಎಲ್ಲರಿಗೂ ಆಗಿದೆ. ಯಾದವೀ ಕಲಹ ಮಾಡುತ್ತ ಸಾಗಿದರೆ ಯಾರಿಗೂ ಉಪಯೋಗವಿಲ್ಲ ಎನ್ನುವ ಅರಿವು ಆಗಿದೆ. ಆದರೂ ಇದನ್ನು ಇನ್ನಷ್ಟು ಮನದಟ್ಟು ಮಾಡಲಾಗುವುದು, ನಮ್ಮಲ್ಲೇ ಇರುವ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಚರ್ಚೆ ಮಾಡುವ ಮೂಲಕ ಕೊರತೆ ನೀಗಿಸಲು ಯತ್ನಿಸಲಾಗುವುದು.

ಸಂಯುಕ್ತ ಕರ್ನಾಟಕ: ಸರ್ಕಾರ ಬೇರೆ ಸಮುದಾಯದ ನಿಗಮ ಮಂಡಳಿಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದೆ ಆದರೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ನಿರೀಕ್ಷಿಸಿದಷ್ಟು ಅನುದಾನ ಬಂದಿಲ್ಲ..?
ಅಶೋಕ ಹಾರನಹಳ್ಳಿ: ಹೌದು..ಬೇರೆ ಸಮುದಾಯದ ನಿಗಮ ಮಂಡಳಿಗಳಿಗೆ ೫೦೦ ಕೋಟಿ ರೂ ಅನುದಾನ ನೀಡಿದೆ ಆದರೆ ನಮ್ಮ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಮಾತ್ರ ೨೦-೩೦ ಕೋಟಿ ರೂ ನೀಡಿದ್ದೇವೆ ಎಂದು ಹೇಳುತ್ತಾರೆ ಆದರೆ ಅದೂ ಸಹ ಬಿಡುಗಡೆಯಾಗಿಲ್ಲ. ಈಗಲಾದರೂ ಸರ್ಕಾರ ನಮ್ಮ ಮಂಡಳಿಯತ್ತ ಗಮನ ಹರಿಸಿದರೆ ಒಳ್ಳೆಯದು.

ಸಂಯುಕ್ತ ಕರ್ನಾಟಕ: ಸಮ್ಮೇಳನದಲ್ಲಿ ಮತ್ತೇನು ಕಾರ್ಯಕ್ರಮ ಮಾಡುತ್ತೀರಿ?
ಅಶೋಕ ಹಾರನಹಳ್ಳಿ: ಇತ್ತೀಚೆಗೆ ಸಮುದಾಯದಲ್ಲಿ ಮದುವೆ ಸಮಸ್ಯೆ ಹೆಚ್ಚಾಗಿದೆ. ಯುವತಿಯರು ಸಿಗುತ್ತಿಲ್ಲ. ಅದಕ್ಕೆ ಅನೇಕ ಕಾರಣಗಳು ಇದ್ದರೂ ನಮ್ಮ ಸಮ್ಮೇಳನದಲ್ಲಿ `ಪಾಣಿಗ್ರಹಿ’ ಎಂಬ ವೇದಿಕೆ ಕಲ್ಪಿಸಿದ್ದೇವೆ ತನ್ಮೂಲಕ ಈ ಸಮಸ್ಯೆ ಸ್ವಲ್ಪವಾದರೂ ಬಗೆಹರಿಯಬಹುದು. ಮುಂದಿನ ದಿನಗಳಲ್ಲಿ ಇದಕ್ಕೆಂದೇ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆ. ಅಲ್ಲದೇ ಬ್ರಾಹ್ಮಣ ಸಮುದಾಯದ ವ್ಯಾಪಾರಿಗಳಿಗೆ ೧೫೦ ಮಳಿಗೆಗಳನ್ನು ತೆರೆಯಲಾಗುವುದು. ಸನಾತನ ಧರ್ಮವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲ ಯತಿವರ್ಯರನ್ನು ಕರೆಯಿಸಲಾಗುವುದು.

ಸಂಯುಕ್ತ ಕರ್ನಾಟಕ: ಎಷ್ಟು ಜನರ ನಿರೀಕ್ಷೆ ಇದೆ
ಅಶೋಕ ಹಾರನಹಳ್ಳಿ: ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುತ್ತಾರೆ. ಪ್ರತಿ ಜಿಲ್ಲೆ ತಾಲೂಕುಗಳಿಂದ ವಿಪ್ರರು ಆಗಮಿಸುತ್ತಾರೆ. ಅವರ ವಸತಿಗಾಗಿ ಈಗಾಗಲೇ ಅನೇಕ ಕಲ್ಯಾಣಮಂಟಪಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ರಾಜಸ್ಥಾನ, ಮಹಾರಾಷ್ಟç, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೇಂದ್ರ ಸಚಿವರು, ಎಲ್ಲ ಸಮುದಾಯದ ಶಾಸಕರು, ಸಂಸದರು ಎಲ್ಲರಿಗೂ ಆಹ್ವಾನ ನೀಡಿದ್ದೇವೆ.

ಬ್ರಾಹ್ಮಣ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು
ರಾಜ್ಯದ ಎಲ್ಲ ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಬೇಕು
ಶೇ ೧೦ ಮೀಸಲಾತಿ ರಾಜ್ಯದಲ್ಲಿಯೂ ಜಾರಿಯಾಗಬೇಕು
ವಕ್ಫ್ ಹೆಸರಿನಲ್ಲಿ ವಶಪಡಿಸಿಕೊಂಡ ದೇವಾಲಯಗಳ ಜಾಗ ಮರಳಿಸಬೇಕು.