ಎರಡು ಬಾರಿ ಕೈ ಕೊಟ್ಟ ಮತಯಂತ್ರ: ಒಂದೂವರೆ ಗಂಟೆಗೂ ಹೆಚ್ಚು ಕಾಲ ಮತದಾನ ಸ್ಥಗಿತ

Advertisement

ಶ್ರೀರಂಗಪಟ್ಟಣ: ತಾಲ್ಲೂಕಿನ‌ ಅಲ್ಲಾಪಟ್ಟಣ ಗ್ರಾಮದಲ್ಲಿ ಮತಯಂತ್ರ ಎರಡು ಬಾರಿ ಕೈ ಕೊಟ್ಟಿದ್ದು, ಸುಮಾರು‌ 1 ಗಂಟೆ 45 ನಿಮಿಷಗಳ ಕಾಲ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಿದ್ದಾಗಿ‌ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ 132ರಲ್ಲಿ‌‌ ಮತಯಂತ್ರ ಕೈಕೊಟ್ಟಿದ್ದು, ಮತದಾನ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನವೇ ಮತಯಂತ್ರದಲ್ಲಿ ದೋಷ ಕಂಡು ಬಂದಿದೆ.
ಬಳಿಕ ತಜ್ಞರು 7-45ರ ವೇಳೆಗೆ ಮತ ಯಂತ್ರವನ್ನು ರಿಪೇರಿ ಮಾಡಿದ್ದು, 29 ಮತಗಳು ಚಲಾವಣೆಗೊಂಡ ಬಳಿಕ‌ ಮತ್ತೆ ಮತಯಂತ್ರ ಕೈ ಕೊಟ್ಟಿದೆ.
ಈ ವೇಳೆ ಮತ್ತೆ ಒಂದು ಗಂಟೆಗಳ ಕಾಲ ಚುನಾವಣೆ ಸ್ಥಗಿತಗೊಂಡು, ಮತಯಂತ್ರ ರಿಪೇರಿಯಾಗದ ಕಾರಣ ಹೊಸ ಮತಯಂತ್ರದೊಂದಿಗೆ ಚುನಾವಣಾ ಪ್ರಕ್ರಿಯೆಯನ್ನು ಮುಂದುವರೆದಿರುವುದಾಗಿ‌ ಗ್ರಾಮಸ್ಥರಿಂದ ಮಾಹಿತಿ ಲಭ್ಯವಾಗಿದೆ.