ಉತ್ತರ ಕುಮಾರನ ಪೌರುಷ ಪ್ರದರ್ಶನ

ಗುರುವಾರ ಮುಸ್ಸಂಜೆ ನಂತರ ನೀಲಾಕಾಶದಲ್ಲಿ ಪರಾಕ್ರಮ ಪ್ರದರ್ಶನದ ವಿರಾಟ್ ರೂಪ; ಶರವೇಗದಲ್ಲಿ ರಿವ್ವನೆ ತೂರಿಬರುವ ಬೆಂಕಿ ಉಗುಳುವ ಬಾಣಗಳನ್ನು ಅಡ್ಡಗಟ್ಟಿ ತುಂಡರಿಸುವ ರೋಮಾಂಚನದ ದೃಶ್ಯಾವಳಿ; ದಾಯಾದಿ ರಾಷ್ಟ್ರಗಳಾದ ಭಾರತ ಹಾಗೂ ಪಾಕಿಸ್ತಾನದ ನಡುವೆ ಭುಗಿಲೆದ್ದಿರುವ ಯುದ್ಧದ ಕಾರ್ಮೋಡದ ಒಂದು ರೀತಿಯ ಮೇಲಾಟ. ನುಗ್ಗಿ ಬರುವ ಬಾಣಗಳ ಮೂಲಸ್ಥಾನ ನಿಗೂಢ. ಹಾಗೆಯೇ ಅಡ್ಡಗಟ್ಟಿ ತುಂಡರಿಸುವ ಗಮ್ಯ ಸ್ಥಾನವೂ ಕೂಡಾ ಅಷ್ಟೇ ನಿಗೂಢ. ಇದಕ್ಕೆ ಸಿಕ್ಕುವ ವಿವರಣೆ ಟಿವಿ ನಿರೂಪಕರ ಮೂಲಕ. ಪ್ರತ್ಯಕ್ಷ ಕಂಡರೂ ಪ್ರಮಾಣೀಕರಿಸಿ ನೋಡು ಎಂಬ ಮಾತಿಗೆ ಇಲ್ಲಿ ಮಾನ್ಯತೆ ಸಿಕ್ಕದು. ಏಕೆಂದರೆ, ಟಿವಿ ನಿರೂಪಕರು ತಮಗೆ ಒದಗಿಸುವ ವಿವರಣೆಯನ್ನಷ್ಟೆ ತೆರೆಯ ಮೇಲೆ ಬಿಂಬಿಸಬಲ್ಲರು. ಅದಕ್ಕಿಂತಲೂ ಮಿಗಿಲಾಗಿ ನಮ್ಮಷ್ಟೇ ತಿಳುವಳಿಕಸ್ಥರು ಅಷ್ಟೇ.
ಭಾರತೀಯರ ಮನಸ್ಸುಗಳಿಗೆ ಯುದ್ಧವೆಂದರೆ ಒಂದು ರೀತಿಯ ಮನೋರಂಜಕ ಕ್ರೀಡೆ. ರಾಮಾಯಣ, ಮಹಾಭಾರತ ಕೃತಿಗಳನ್ನು ಓದಿನ ಮೂಲಕ ಕಲ್ಪಿಸಿಕೊಂಡಿದ್ದ ಚಿತ್ರಾವಳಿಯನ್ನು ವಿಸ್ತರಿಸುವ ರೀತಿಯಲ್ಲಿ ನಾಟಕ ಹಾಗೂ ಸಿನಿಮಾಗಳಲ್ಲಿ ಕಂಡು ಆನಂದಿಸಿದ್ದ ಜನತೆ. ಅದರಲ್ಲೂ ದಕ್ಷಿಣ ಭಾರತೀಯರಂತೂ ಎನ್.ಟಿ. ರಾಮರಾವ್, ಕಾಂತಾರಾವ್, ಡಾ. ರಾಜಕುಮಾರ್, ಶಿವಾಜಿಗಣೇಶನ್ ಮೊದಲಾದ ನಟಸಾರ್ವಭೌಮರ ಚಲನಚಿತ್ರಗಳಲ್ಲಿ ಇಂತಹ ಬೆಂಕಿ ಉಗುಳುವ ಕೂರಂಬುಗಳನ್ನು ಕಂಡು ರೋಮಾಂಚನಗೊಂಡಿದ್ದವರು. ಇಂತಹ ರಂಗು ರಂಗಿನ ಚಲನಚಿತ್ರಗಳ ಜನಕ ಉಡುಪಿಯ ಬಿ. ವಿಠಲಾಚಾರ್ಯ ಹಾಗೂ ಆಂಧ್ರದ ಕೆ. ಕಾಮೇಶ್ವರ ರಾವ್. ೧೯೬೨ ಹಾಗೂ ೧೯೭೧ರ ಯುದ್ಧಗಳ ಸ್ವರೂಪವನ್ನು ಭಾರತೀಯರು ಅರಿತಿದ್ದು ವೃತ್ತಪತ್ರಿಕೆಗಳು ಹಾಗೂ ಆಕಾಶವಾಣಿಯ ಮೂಲಕ ಮಾತ್ರ. ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹಮೀದ್ ಎಂಬ ವಾಯು ಪಡೆಯ ವಿಂಗ್ ಕಮಾಂಡರ್ ನ್ಯಾಟ್ ವಿಮಾನದ ಮೂಲಕ ವೈರಿ ಪಡೆಯ ಮೂರು ಯುದ್ಧ ವಿಮಾನಗಳನ್ನು ಧ್ವಂಸಗೊಳಿಸಿದ ರೀತಿಯನ್ನು ತಿಳಿದದ್ದು ಪತ್ರಿಕೆಗಳ ಮೂಲಕವೇ. ನಂತರ ಈ ಮಹಾಸಾಧನೆ ರಾಷ್ಟ್ರದಲ್ಲಿ ನಾನಾ ರೀತಿಯ ಚರ್ಚೆಗೆ ಒಳಗಾಗಿ ದಿನಕರ ದೇಸಾಯಿ ಸೇರಿದಂತೆ ಹಲವಾರು ಮಂದಿ ಕವನಗಳನ್ನು ರಚಿಸಲು ವಸ್ತುವಾಗಿದ್ದನ್ನು ಮರೆಯುವಂತಿಲ್ಲ. ಆದರೆ, ಈಗಿನ ಚರಿತ್ರೆಯೇ ಬೇರೆ.
ಈಗಿನ ಯುದ್ಧ ಹಿಂದಿನ ಯುದ್ಧಗಳಂತೆ ಅಖಾಡಕ್ಕೂ ಧುಮುಕಿ ಬಲಪ್ರದರ್ಶನ ಮಾಡುವುದಲ್ಲ. ಕಾಣದ ಊರಲ್ಲಿ ಕೂತು ಕಾಣದಿರುವ ಜಾಗವನ್ನು ಗುರುತಿಸಿ ನಿಖರವಾಗಿ ಗುರಿ ಇಟ್ಟು ಬಿಲಗಳಂತಿರುವ ವೈರಿಗಳ ನೆಲೆಯನ್ನು ನಿರ್ನಾಮ ಮಾಡುವುದೇ ಈಗಿನ ಯುದ್ಧದ ಸ್ವರೂಪ. ಇದಕ್ಕೆಲ್ಲಾ ತಂತ್ರಜ್ಞಾನದ ಕೃಪಾಕಟಾಕ್ಷವೇ ಆಧಾರ. ಅಕ್ಷೋಹಿಣಿ ಸೈನ್ಯವನ್ನು ರಣರಂಗದಲ್ಲಿ ಕಾಣುವುದು ಇನ್ನು ಅಸಾಧ್ಯ. ಈ ಅಕ್ಷೋಹಿಣಿ ಸೈನ್ಯ ಇನ್ನೇನಿದ್ದರೂ ಕಂಪ್ಯೂಟರ್ ನಿಯಂತ್ರಣದ ಶಸ್ತ್ರಾಸ್ತ್ರಗಳ ಪ್ರಯೋಗದ ಕೌಶಲ್ಯ ಸಿದ್ಧಿಸಿಕೊಳ್ಳಲೇಬೇಕು. ಈಗ ಅಂತಹ ಕೌಶಲ್ಯ ಯಾವ ದೇಶ ತನ್ನದಾಗಿಸಿಕೊಳ್ಳುತ್ತದೋ ಅದೇ ಜಗದೇಕ ವೀರ. ಹಾಗೊಮ್ಮೆ ಉತ್ತಮ ತಂತ್ರಜ್ಞಾನದ ಸಾಧನಗಳಿದ್ದರೂ ಬಳಸಲು ಬಾರದ ಅಬ್ಬೇಪಾರಿ ಸೈನಿಕರಿದ್ದರೆ ಅದು ನಿಷ್ಪçಯೋಜಕ. ಈಗಿನ ಯುದ್ಧದಲ್ಲಿ ಪಾಕಿಸ್ತಾನದ ಯೋಧರು ಚೀನಾ ನಿರ್ಮಿತ ಜೆಎಫ್ ೧೦ ಹಾಗೂ ಜೆಎಫ್ ೧೭ ಶ್ರೇಣಿಯ ಮಿಸೈಲ್‌ಗಳನ್ನು ಬಳಸಲು ಬಾರದೆ ಜಗತ್ತಿನ ಮುಂದೆ ಮೂರ್ಖತನ ಪ್ರದರ್ಶನ ಮಾಡಿರುವುದು ಇದಕ್ಕೊಂದು ಸಾಕ್ಷಿಯಾದೀತು.
ನಿಜ. ಯುದ್ಧ ಶುರುವಾದಾಗ ಇಲ್ಲವೇ ಶುರುವಾಗುವ ಮುನ್ನಾ ದಿನಗಳಲ್ಲಿ ಅದರ ಅಗತ್ಯ ಮತ್ತು ಅನಗತ್ಯಗಳ ಬಗ್ಗೆ ವಾದ ಮಂಡಿಸುವುದು ಕಷ್ಟವೇ. ಏಕೆಂದರೆ, ಯುದ್ಧವೆಂಬುದು ಕ್ಷಾತ್ರ ಧರ್ಮದ ಪ್ರದರ್ಶನದ ಒಂದು ಭಾಗ. ಕ್ಷಾತ್ರ ಗುಣ ಇದ್ದರಷ್ಟೆ ಬದುಕು ಸರಾಗ. ಎಲ್ಲಕ್ಕೂ ತಲೆಯಾಡಿಸಿ ಅನ್ಯಥಾ ಶರಣಂ ನಾಸ್ತಿ ಎನ್ನುವುದು ರಣಹೇಡಿತನ. ಮಹಾತ್ಮ ಗಾಂಧಿಯವರು ಹೇಳಿರುವಂತೆ ಪರಾಕ್ರಮ ಅನಗತ್ಯ ಎಂದರೆ ರಣಹೇಡಿ ಆಗು ಎಂದಲ್ಲ. ತಮ್ಮತನವನ್ನು ಖಾತರಿಪಡಿಸಿಕೊಳ್ಳುವ ಗುಣವೇ ಸ್ವಾಭಿಮಾನ. ದುರಭಿಮಾನಕ್ಕೂ ಮಿತಿಮೀರಿದ ಸ್ವಾಭಿಮಾನಕ್ಕೂ ಕೂದಲೆಳೆಯ ವತ್ಯಾಸವಷ್ಟೆ. ಅಭಿಮಾನವೆಂಬುದು ಕನಿಕರದ ವಿಸ್ತರಣೆಯ ರೂಪ. ಒಂದೇ ಮಾತಿನಲ್ಲಿ ಯುದ್ಧ ಬೇಡವೇ ಬೇಡ ಎಂದು ಹೇಳುವುದು ಕಷ್ಟವೇ. ನಮ್ಮ ಹಕ್ಕುಗಳನ್ನು, ನಮ್ಮ ಸ್ವತ್ತುಗಳ ಪ್ರಭುತ್ವವನ್ನು ಕಾಯ್ದುಕೊಳ್ಳುವುದು ನಮ್ಮ ಅಧಿಕಾರ. ಇದಕ್ಕೆ ಯಾರಾದರೂ ಎದುರಾದರೆ ಯುದ್ಧ ಅನಿವಾರ್ಯ. ವೈಯಕ್ತಿಕ ನೆಲೆಗಟ್ಟಿನಲ್ಲಿ ಅನುಸರಿಸುವ ಮಾನದಂಡವೇ ಸಾಮೂಹಿಕ ನೆಲೆಗಟ್ಟಿಗೂ ಅನ್ವಯ.
ಇನ್ನು ದಾಯಾದಿ ರಾಷ್ಟ್ರಗಳ ನಡುವಣ ಯುದ್ಧಕ್ಕೆ ಕಾರಣಕ್ಕಿಂತಲೂ ನೆವವೊಂದು ಸಾಕು. ಬ್ರಿಟನ್ ಹಾಗೂ ಫ್ರೆಂಚರ ನಡುವೆ ಈಗಲೂ ದಾಯಾದಿ ಮತ್ಸರ್ಯ ಹೊಗೆಯಾಡುತ್ತಿರುವುದು ಸುಳ್ಳಲ್ಲ. ಎಂತಹ ಅನಿವಾರ್ಯತೆ ಬಿದ್ದರೂ ಫ್ರೆಂಚರು ಇಂಗ್ಲಿಷನ್ನು ಬಳಸುವುದಿಲ್ಲ. ಸಣ್ಣ ಪುಟ್ಟ ಕಾರಣಗಳಿಗಾಗಿ ಈ ಹಿಂದೆ ಎರಡೂ ದೇಶಗಳ ನಡುವೆ ಜರುಗಿರುವ ಕದನಗಳು ಈಗ ಇತಿಹಾಸ. ರಾಬರ್ಟ್ ಸೌದೆ ಎಂಬ ಕವಿ ಈ ಪರಿಸ್ಥಿತಿಯ ಬಗ್ಗೆ ಬರೆದಿರುವ ಕವನ ಬಹುಶಃ ಎಲ್ಲಾ ರಾಷ್ಟ್ರಗಳಿಗೂ ದಿಕ್ಸೂಚಿ. ಈ ಹಿಂದೆ ಇರಾನ್ ಮತ್ತು ಇರಾಕ್ ದೇಶಗಳ ನಡುವೆ ಭುಗಿಲೇಳುತ್ತಿದ್ದ ಕದನಗಳನ್ನು ಕಂಡವರು ಈಗ ಸೋಜಿಗ ಕಾಣುತ್ತಿರಬಹುದು. ಆದರೂ ದಾಯಾದಿ ಮಾತ್ಸರ್ಯ ಇನ್ನೂ ಹೋಗಿರುವ ಕುರುಹಂತೂ ಇಲ್ಲ. ಚೀನಾ ದೇಶದ ಜೊತೆ ಮೊದಲಿನಿಂದಲೂ ದ್ವೇಷ ಕಟ್ಟಿಕೊಂಡಿರುವ ತೈವಾನ್ ಇದಕ್ಕೊಂದು ಕಾರಣ. ಭಾರತ ಹಾಗೂ ಪಾಕಿಸ್ತಾನದ್ದು ಇದೇ ಕಥೆ. ೧೯೪೭ರಲ್ಲಿ ಬ್ರಿಟಿಷರ ಕಿತಾಪತಿಯಿಂದಾಗಿ ಅಖಂಡ ದೇಶ ವಿಭಜನೆಯಿಂದ ಹುಟ್ಟಿದ ಪಾಕಿಸ್ತಾನ ಹಾಗೂ ಭಾರತದ ನಡುವೆ ಮಧುರವಾದ ಸಂಬಂಧ ಇದ್ದಿದ್ದರೆ ದಕ್ಷಿಣ ಏಷಿಯಾದ ಸ್ಥಿತಿಯೇ ಬೇರೆ ಇರುತ್ತಿತ್ತು. ಆದರೆ, ಅದೇಕೋ ಏನೋ ಜಿನ್ನಾ ಸಾಹೇಬರ ವೈಚಾರಿಕ ಹಾಗೂ ರಾಜಕೀಯ ದೃಷ್ಟಿಕೋನದ ಫಲವಾಗಿ ಉಭಯ ರಾಷ್ಟ್ರಗಳಲ್ಲಿ ತಲೆದೋರಿದ ಅನುಮಾನದ ಹುತ್ತ ಬ್ರಹ್ಮಾಂಡವಾಗಿ ಬೆಳೆದು ಭುಟ್ಟೋ ಸಂತತಿಯ ಅಧಿಕಾರ ಮುಕ್ತಾಯದ ವೇಳೆಗೆ ಪರಮ ವೈರಿಗಳಾಗಿ ಪರಿವರ್ತನೆಯಾಗಿ ಕನಿಷ್ಠ ಎರಡು ಬಾರಿ ಯುದ್ಧಗಳಲ್ಲಿ ಸೆಣೆಸಿ ದ್ವೇಷವನ್ನು ಮೈಯ್ಯಲ್ಲೆಲ್ಲಾ ಮೆತ್ತಿಕೊಂಡಿರುವುದು ವಿಪರ್ಯಾಸದ ಸಂಗತಿ.
ಭಾರತದಂತೆ ಪಾಕಿಸ್ತಾನವೂ ಜನತಂತ್ರ ರಾಷ್ಟ್ರವಾಗಿ ರೂಪುಗೊಂಡಿದ್ದರೆ ಅದರ ಸ್ಥಿತಿ ಹೀಗಿರುತ್ತಿರಲಿಲ್ಲವೇನೋ. ಮಿಲಿಟರಿಯವರೇ ಅನಿಭಿಷಿಕ್ತ ದೊರೆಗಳಾಗುವ ಅವಕಾಶ ಸೃಷ್ಟಿಸಿಕೊಂಡ ಮೇಲೆ ಪ್ರಧಾನಿ ಹಾಗೂ ಅಧ್ಯಕ್ಷರು ನಾಮಕಾವಸ್ಥೆ ಎಂಬಂತಾಗಿ ಪಾಕಿಸ್ತಾನಿಯರು ಅಜ್ಞಾನ ಹಾಗೂ ಹಸಿವಿನಿಂದ ನರಳುವ ಸ್ಥಿತಿ ಸೃಷ್ಟಿಯಾಗಿರುವುದೇ ಪಟ್ಟಭದ್ರರಿಗೆ ತಮ್ಮ ಬೇಳೆಬೇಯಿಸಿಕೊಳ್ಳಲು ಸುವರ್ಣಾಕಾಶ. ಅಜ್ಞಾನ ಮತ್ತು ಹಸಿವೆಗೆ ಧರ್ಮದ ಅಮಲನ್ನು ಹತ್ತಿಸಿ ಸಾವಿರ ವರ್ಷದ ಯುದ್ಧವೆಂಬ ಸ್ವರ್ಗಲೋಕವನ್ನು ನಂಬಿಸಿ ಭಾರತಕ್ಕೆ ದಿನನಿತ್ಯ ಮಗ್ಗುಲ ಮುಳ್ಳಾಗಿರುವ ಪಾಕಿಸ್ತಾನದ ಗತಿ ಏನಾದೀತು ಎಂಬುದು ಭವಿಷ್ಯಕ್ಕೆ ಬಿಟ್ಟಿರುವ ಪ್ರಶ್ನೆ. ಗುರುವಾರ ಮುಸ್ಸಂಜೆ ನಿಲಾಕಾಶದಲ್ಲಿ ಆರಂಭವಾದ ಈ ಕ್ಷಾತ್ರ ಪ್ರದರ್ಶನದಲ್ಲಿ ಉತ್ತರ ಕುಮಾರನ ಪೌರುಷದಂತೆ ಪಾಕಿಸ್ತಾನದ ಯೋಧರು ಗುದ್ದೋಡುವ ತಂತ್ರವನ್ನು ಅನುಸರಿಸಿ ಜಗತ್ತಿನ ಮುಂದೆ ತಮ್ಮ ಅಸಾಮರ್ಥ್ಯವನ್ನು ಪ್ರದರ್ಶಿಸಿಕೊಂಡದ್ದು ಆ ದೇಶದ ಪ್ರಭುದ್ಧತೆಯ ಮಟ್ಟದ ದಿಕ್ಸೂಚಿ ಅಷ್ಟೆ.