ಉಗ್ರ ದಾಳಿ ಗೊತ್ತಿದ್ದರೂ 26 ಕೊಲೆ ತಡೆಯದ ಪ್ರಧಾನಿ

ಹೊಸಪೇಟೆ: ಉಗ್ರ ದಾಳಿ ಬಗ್ಗೆ ಮಾಹಿತಿ ಇದ್ದರೂ, ಪ್ರಧಾನಿ ನರೇಂದ್ರ ಮೋದಿ 26 ಪ್ರವಾಸಿಗರ ಕೊಲೆ ತಡೆಯಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ಡಾ. ಪುನೀತರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ, ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆಯ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರವಾಸಿಗರಿಗೆ ಭದ್ರತೆ ಕೊಟ್ಟಿಲ್ಲ. ಪ್ರವಾಸಿಗರಿಗೆ ಪೊಲೀಸರ ಭದ್ರತೆ, ಗಡಿ ಭದ್ರತೆ, ಸೇನಾ ಭದ್ರತೆ ನೀಡಿ, ಸಹಾಯ ಮಾಡಲಿಲ್ಲ. ಹಾಗಾಗಿ 26 ಪ್ರವಾಸಿಗರ ಕೊಲೆಯಾಯಿತು. ಇದರ ಬಗ್ಗೆ ಮೋದಿ ಮಾತನಾಡಲಿಲ್ಲ. ಅವರಿಂದ ಈವರೆಗೂ ಉತ್ತರ ಬಂದಿಲ್ಲ. ಏ. 17ರಂದು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ನಿಗದಿಯಾಗಿತ್ತು. ಗುಪ್ತಚರ ಇಲಾಖೆ ಮಾಹಿತಿಯು ಏ. 17ಕ್ಕೆ ಕಾಶ್ಮೀರದಲ್ಲಿ ಗಲಾಟೆ ಆಗಬಹುದೆಂದು ಹೋಗಬೇಡಿ ಎಂದು ಸಲಹೆ ನೀಡಿತು. ಆದ್ದರಿಂದ ಪ್ರವಾಸ ರದ್ದಾಯಿತು. ಆಗಲೇ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರೆ ಅಥವಾ ರಕ್ಷಣೆ ನೀಡಿದ್ದರೆ ಪ್ರಾಣ ಉಳಿಯುತ್ತಿತ್ತು ಎಂದರು.
ಭಾರತದ ಮೇಲೆ ಗೂಬೆ ಕೂರಿಸಿರುವುದೇ ಪಾಕಿಸ್ತಾನದ ಕೆಲಸವಾಗಿದೆ. ಚೀನಾದಿಂದ ಸಹಾಯ ಪಡೆದು, ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ಇದನ್ನು ನಮ್ಮ ದೇಶ ಸಹಿಸುವುದಿಲ್ಲ. ನಾವು ಒಗ್ಗಟ್ಟಾಗಿದ್ದೇವೆ. ಒಗ್ಗಟ್ಟಾಗಿ ದೇಶಕ್ಕಾಗಿ ನಾವೆಲ್ಲರೂ ಸೇರಿ ಪ್ರಾಣ ಕೊಡೋಣ. ನಮಗೆ ದೇಶ ಮುಖ್ಯ. ನಂತರ ಜಾತಿ, ಧರ್ಮ. ದೇಶಕ್ಕಾಗಿ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ ಗಾಂಧಿ ಪ್ರಾಣ ಕೊಟ್ಟಿದ್ದಾರೆ. ಮಹಾತ್ಮ ಗಾಂಧೀಜಿ ಸ್ವಾತಂತ್ರ‍್ಯ ಕೊಡಿಸಿ, ದೇಶಕ್ಕೆ ಪ್ರಾಣ ಕೊಟ್ಟರು. ಇಂತಹ ನಮ್ಮ ಕಾಂಗ್ರೆಸ್ಸಿನ ಮೇಲೆ ಗೂಬೆ ಕೂರಿಸುತ್ತೀರಿ. ಇಡಿ, ಸಿಬಿಐ, ಐಟಿ ಮೂಲಕ ನೋಟಿಸ್ ಕೊಟ್ಟು ನಮ್ಮನ್ನು ಮೆತ್ತಗೆ ಮಾಡಲು ಹೊರಟಿದ್ದಾರೆ. ಇದಕ್ಕೆ ಕಾಂಗ್ರೆಸ್ ಬಗ್ಗುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿದೇಶಕ್ಕೆ ನಿಯೋಗ ಹೋಗಲು ಪ್ರತಿನಿಧಿಗಳನ್ನು ಆಯ್ಕೆ ಮಾಡಿದೆ. ಈ ಬಗ್ಗೆ ನಮ್ಮ ಬಳಿ ಮಾತನಾಡಲಿಲ್ಲ. ಆದರೂ, ನಮ್ಮ ಪ್ರತಿನಿಧಿಗಳನ್ನು ವಿದೇಶಕ್ಕೆ ಕಳುಹಿಸುತ್ತಿದ್ದೇವೆ. ದೇಶ ಉಳಿಸುವುದು ಎಲ್ಲರ ಜವಾಬ್ದಾರಿ. ನಾವು ದೇಶದ ಬಗ್ಗೆ ಚರ್ಚೆ ಮಾಡುವಾಗ, ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಭಾಷಣ ಮಾಡಲು ಬಿಹಾರಗೆ ತೆರಳಿದರು. ಅವರಿಗೆ ದೇಶ ಪ್ರೇಮ ಇಲ್ಲ. ಕೇಂದ್ರ ಸರ್ಕಾರ ದಾಳಿಗಳ ಬಗ್ಗೆ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಿತು. ಸಭೆಗೆ ಪ್ರಧಾನಿ ಮೋದಿ ಬರಲಿಲ್ಲ. ಸಭೆಗೆ ಹೋಗದಿದ್ದರೆ ನಾವು ದೇಶದ್ರೋಹಿಗಳು. ಅವರು ಬರದಿದ್ದರೂ ದೇಶಪ್ರೇಮಿಗಳು ಎಂದು ವ್ಯಂಗ್ಯವಾಡಿದರು.