ಬೆಂಗಳೂರು: ಈ ನೆಲದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹುಲಿಯ ಉಗುರನ್ನು ತಮ್ಮ ಕೊರಳಲ್ಲಿ ಹಾಕಿಕೊಂಡಿದ್ದಾರೆ ಎಂದು ದೂರುಗಳು ಬರುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಅರಣ್ಯ ಇಲಾಖೆ ತನಿಖೆ ನಡೆಸಿ ಸೂಕ್ತ ಕಾನೂನು ರೀತಿ ಕ್ರಮ ಕೈಗೊಳ್ಳಲಿದೆ ಎಂದರು. ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರಲ್ಲಿ ಜಾರಿಗೆ ಬಂದಿದೆ. ಅದಾದ ನಂತರ 80ರ ದಶಕದಲ್ಲಿ,2002ರಲ್ಲಿ, 2022ರಲ್ಲಿ ತಿದ್ದುಪಡಿಯಾಯಿತು. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿಯಲ್ಲಿ ವನ್ಯಪ್ರಾಣಿಗಳ ಅಂದರೆ ಹುಲಿ ಚರ್ಮ, ಆನೆಯ ದಂತ, ಹುಲಿ ಉಗುರು, ಚಿಂಕೆ ಚರ್ಮ, ಕೊಂಬು ಇತ್ಯಾದಿಗಳನ್ನು ಯಾವುದನ್ನೂ ಉಪಯೋಗ ಮಾಡಲು, ಸಂಗ್ರಹ ಮಾಡಲು, ಸಾಗಾಟ ಮಾಡಲು, ಸ್ವಂತಕ್ಕೆ ಇಟ್ಟುಕೊಳ್ಳಲು ಅವಕಾಶವಿಲ್ಲ. ಯಾರಾದರೂ ಆ ರೀತಿ ಮಾಡಿದ್ದರೆ ಅದು ಶಿಕ್ಷಾರ್ಹ ಅಪರಾಧ, ಈ ನೆಲದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ. ಯಾರೂ ಕಾನೂನಿಗೆ ಮೀರಿದವರು ಇಲ್ಲ. ಎಷ್ಟೇ ಪ್ರಭಾವವಿದ್ದರೂ ಸರ್ಕಾರ ಕಾನೂನು ಕ್ರಮ ಜರುಗಿಸುತ್ತದೆ ಎಂದರು.