ಹಾವೇರಿ: ಇನ್‌ಸ್ಟಾಗ್ರಾಂನಲ್ಲಿ ಆ್ಯಪ್ ಮೂಲಕ ಪರಿಚಯಗೊಂಡಿದ್ದ ಮೂವರು ಜ್ಯೋತಿಷಿಗಳು ಫಾರ್ಮಸಿಸ್ಟ್ ವಿದ್ಯಾರ್ಥಿನಿಯೋರ್ವಳ ಸಮಸ್ಯೆಗೆ ಪರಿಹಾರ ಮಾಡಿಕೊಡುತ್ತೇವೆಂದು ನಂಬಿಸಿ 15 ಲಕ್ಷ ರೂ. ಮೌಲ್ಯದ 165 ಗ್ರಾಂ ಬಂಗಾರ ಪಡೆದುಕೊಂಡು ಮೋಸ ವೆಸಗಿದ ಘಟನೆ ನಡೆದಿದೆ.
ಹಾವೇರಿಯ ದಾನೇಶ್ವರಿ ನಗರದ ವೈಷ್ಣವಿ ಹೂವನಗೌಡ ದ್ಯಾವಣ್ಣನವರ ಎಂಬಾಕೆಯೇ ಮೋಸ ಹೋದ ಫಾರ್ಮಾಸಿಸ್ಟ್ ವಿದ್ಯಾರ್ಥಿನಿ.
ಗಣೇಶ ಶಾಸ್ತ್ರಿ, ಚಂದನ ಹಾಗೂ ಗುರು ಎಂಬ ಮೂವರು ಜ್ಯೋತಿಷಿಗಳ ವಿರುದ್ಧ ದೂರು ದಾಖಲಾಗಿದೆ. ಆರೋಪಿತರು ಇನ್‌ಸ್ಟಾಗ್ರಾಂನಲ್ಲಿ ಅಸ್ಟ್ರೋಟಾಕ್ ಎಂಬ ಆ್ಯಪ್ ಮೂಲಕ ವಿದ್ಯಾರ್ಥಿನಿ ವೈಷ್ಣವಿಗೆ ಪರಿಚಯಗೊಂಡು, ಬೇರೆ ರೀತಿಯ ಕುಂಕುಮ, ಭಂಡಾರ, ತಾಯತಾ, ಕುಬೇರ ಯಂತ್ರ ಪೂಜೆ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕೊಡುತ್ತೇವೆ. ಇಲ್ಲದಿದ್ದರೆ ನಿಮ್ಮ ಜೀವನಕ್ಕೆ ಅಪಾಯವಿದೆ ಎಂದು ನಂಬಿಸಿ, ಹೆದರಿಸಿ ಸುಮಾರು 15 ಲಕ್ಷ ರೂ. ಮೌಲ್ಯದ 165 ಗ್ರಾಂ ಬಂಗಾರವನ್ನು ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.