ಧಾರವಾಡ: ಕಳೆದ ವರ್ಷ ದೇಶದಲ್ಲಿಯೇ ಹೆಚ್ಚಿನ ಆಹಾರ ಉತ್ಪಾದನೆ ಮಾಡುವ ಮೂಲಕ ಕರ್ನಾಟಕ ಮುನ್ನಡೆ ಸಾಧಿಸಿದ್ದು, ಈ ಬಾರಿಯೂ ರೈತರಿಗೆ ಎಲ್ಲ ರೀತಿಯ ಸಹಕಾರ ನೀಡಲು ಸರಕಾರ ಸಿದ್ಧವಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತದೆ ಎಂದು ಬಿಜೆಪಿ-ಜೆಡಿಎಸ್‌ನವರು ಹೇಳುತ್ತಿದ್ದರು. ಆದರೆ, ರಾಜ್ಯದಲ್ಲಿ ಕಳೆದ ವರ್ಷ 1.48 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮಾಡಲಾಗಿದೆ. ಈಗ ಅವಧಿಗೂ ಮುನ್ನ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿಗೆ ಸರಕಾರದಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ ತಿಂಗಳ ನಂತರ ಎಲ್ಲೆಡೆ ಬಿತ್ತನೆ ಕಾರ್ಯ ಪ್ರಾರಂಭವಾಗಲಿದೆ ಎಂದರು.
ಕೃಷಿ ಪರಿಕರಗಳ ಸಬ್ಸಿಡಿ ಇಳಿಕೆ ಕುರಿತು ಮಾತನಾಡುತ್ತ, ಯಾವುದೇ ಸಬ್ಸಿಡಿ ಕಡಿಮೆಯಾಗಿಲ್ಲ. ಕೆಲವೊಂದು ಬೆಲೆ ಜಾಸ್ತಿ ಆಗಿದೆ. ಹೀಗಾಗಿ ರೈತರು ಸಬ್ಸಿಡಿ ಕಡಿಮೆ ಎಂದು ಹೇಳುತ್ತಿದ್ದಾರೆ. ಎಲ್ಲರಿಗೂ ಸಬ್ಸಿಡಿ ಕೊಡುತ್ತಿದ್ದೇವೆ. ಸ್ವಲ್ಪ ಸಬ್ಸಿಡಿ ಹೆಚ್ಚಿಗೆ ಮಾಡಿ ಎಂದು ಕೇಳುತ್ತಿದ್ದಾರೆ. ಎಲ್ಲಿ ಹೆಚ್ಚಿನ ಬೇಡಿಕೆ ಇದೆಯೋ ಅಲ್ಲಿ ಸಬ್ಸಿಡಿ ಹೆಚ್ಚಿಗೆ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಖಾಲಿ ಹುದ್ದೆಗೆ ನೇಮಕಾತಿ ನಡೆದಿದೆ. ಈ ಸಂಬಂಧ ಪ್ರಸ್ತಾವನೆಯೊಂದನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ಉತ್ತರ ಬಂದ ಬಳಿಕ ಮುಂದಿನ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.