ಬೆಂಗಳೂರು: ವಯೋವೃದ್ಧರು, ಬಡಜನರು ಸೇರಿದಂತೆ ಜನಸಾಮಾನ್ಯರ ಕಣ್ಣಿನ ಸುರಕ್ಷತೆಯ ಕಾಳಜಿ ವಹಿಸುವ ಸಲುವಾಗಿ ನಮ್ಮ ಸರ್ಕಾರವು ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದ ಆಶಾಕಿರಣ ಯೋಜನೆಯ ಮಹತ್ವವನ್ನು ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಪ್ರಶಂಸಿಸಿದ್ದು ಹೆಮ್ಮೆಯ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ದೃಷ್ಟಿ ಪರೀಕ್ಷೆ ಮಾಡುವುದು, ದೃಷ್ಟಿದೋಷ ಹೊಂದಿದವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಮಾಡುವುದು ಸೇರಿದಂತೆ ಸಾರ್ವಜನಿಕರ ಕಣ್ಣಿನ ಆರೈಕೆ ಮಾಡುವ ಉದ್ದೇಶದ ಈ ಯೋಜನೆಯು ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಿದೆ.
ಈ ವರೆಗೆ ಒಟ್ಟು 1.40 ಕೋಟಿ ಜನರನ್ನು ನೇತ್ರ ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿ 24.50 ಲಕ್ಷ ಜನರಲ್ಲಿ ದೃಷ್ಟಿದೋಷ, ಇನ್ನಿತರೆ ನೇತ್ರದ ತೊಂದರೆಗಳನ್ನು ಪತ್ತೆ ಮಾಡಿ ಉಚಿತ ಚಿಕಿತ್ಸೆ ಒದಗಿಸಲಾಗಿದೆ. 4.30 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ ಮತ್ತು 1.05 ಲಕ್ಷ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇಂದಿನಿಂದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 393 ಆಶಾ ದೃಷ್ಟಿಕೇಂದ್ರಗಳಿಗೆ ಚಾಲನೆ ನೀಡಲಾಗಿದ್ದು, ಇವುಗಳ ಮೂಲಕವೂ ಸೇವೆಯನ್ನು ಒದಗಿಸಲಾಗುತ್ತದೆ.
ಜನಪರ ಸರ್ಕಾರವೊಂದರ ಕಾರ್ಯಕ್ರಮಗಳು ಹೇಗಿರಬೇಕು ಎಂಬುದಕ್ಕೆ ಗ್ಯಾರಂಟಿ ಯೋಜನೆಗಳು ಒಳಗೊಂಡಂತೆ ನಮ್ಮ ಹಲವು ಕಾರ್ಯಕ್ರಮಗಳಿಗೆ ಜಾಗತಿಕ ಮನ್ನಣೆ ದೊರಕುತ್ತಿರುವುದು ಸಾಕ್ಷಿ ಎಂದಿದ್ದಾರೆ.