ಆಲೂರು ಗ್ರಾಮ ಪಂಚಾಯ್ತಿಆಡಳಿತ ವೈಫಲ್ಯ: ದಿಢೀರ್ ಪ್ರತಿಭಟನೆ

ದಾಂಡೇಲಿ: ಇಲ್ಲಿಗೆ ಸಮೀಪದ ಆಲೂರು ಗ್ರಾಮ ಪಂಚಾಯತಿಯ ಆಡಳಿತ ವೈಫಲ್ಯ ಕುರಿತು ಪಂಚಾಯತಿ ಸದಸ್ಯ ಸುಭಾಸ ಭೋವಿ ವಡ್ಡರ್ ಹಾಗೂ ಭಾಜಪ ಮುಖಂಡರು ಬುಧವಾರ ಸಂಜೆ ಪಂಚಾಯತ ಕಛೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ. ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಜನ ಸಾಮಾನ್ಯರ ಯಾವುದೇ ಕೆಲಸಗಳು ಆಗುತ್ತಿಲ್ಲ. ಎರಡುವರೆ ವರ್ಷಗಳ ಅವಧಿಯಲ್ಲಿ ಒತ್ತಾಯದ ಮೇರೆಗೆ ಒಂದೇ ಒಂದು ಗ್ರಾಮ ಸಭೆ ಮಾಡಿದ್ದಾರೆ. ವಾರ್ಡ್ ಸಭೆಗಳನ್ನು ಮಾಡುತ್ತಿಲ್ಲ. ಪಂಚಾಯತಿ ಯಾವುದೇ ಯೋಜನೆಯ ಫಲಾನುಭವಿಗಳ ಆಯ್ಕೆಮಾಡಬೇಕಾದರೆ ಅದನ್ನು ಗ್ರಾಮ ಸಭೆಯಲ್ಲಿ ನಿರ್ಧರಿಸಬೇಕು. ಆದರೆ ಇಲ್ಲಿ ಒಳಗಿಂದೊಳಗೆ ತಮಗೆ ಬೇಕಾದವರನ್ನು ಫಲಾನುಭವಿಯಾಗಿ ಆಯ್ಕೆ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿಗಾಗಿ ವಾಹನವೊಂದನ್ನು ತರಿಸಿದ್ದು ಅದನ್ನು 6 ತಿಂಗಳಿಂದ ನಿಲ್ಲಿಸಿಡಲಾಗಿದೆ. ಕಸ ವಿಲೇವಾರಿಯಾಗುತ್ತಿಲ್ಲ. ಚರಂಡಿಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಪಂಚಾಯ್ತಿ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದು ಕೂಡಲೇ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ವಾಮನ ನಾರಯಣ ಮಿರಾಶಿ, ಭಾಜಪ ಮುಖಂಡರಾದ ರವಿವಾಟ್ಲೆಕರ, ಗಿರೀಶ ಟೋಸುರ, ಪ್ರಶಾಂತ ಬಸೂರತೆಕರ ಮತ್ತಿತರರು ಉಪಸ್ಥಿತರಿದ್ದರು.