ಆರೋಗ್ಯ ಭಾಗ್ಯ ಕಿತ್ತುಕೊಂಡು ಯಾವ ಭಾಗ್ಯ ಕೊಟ್ಟರೇನು

ಸರ್ಕಾರಕ್ಕೆ ಬಡವರು ಹಾಗೂ ಶೋಷಿತ ಸಮುದಾಯಗಳೆಂದರೆ ತಾತ್ಸಾರ

ಬೆಂಗಳೂರು: ಆರೋಗ್ಯ ಭಾಗ್ಯವನ್ನೇ ಕಿತ್ತುಕೊಂಡ ಈ ಸರ್ಕಾರ ಯಾವ ಭಾಗ್ಯ ಕೊಟ್ಟರೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸರ್ಕಾರಗಳೆಂದರೆ ಜನರ ಕಷ್ಟಗಳಿಗೆ ಸ್ಪಂದಿಸುವ, ಜನಪರ ಯೋಜನೆ ರೂಪಿಸಿ ಜನರ ಆರೋಗ್ಯ ರಕ್ಷಣೆಗೆ ಕಾಳಜಿಯ ಜವಾಬ್ದಾರಿ ಹೊತ್ತು ಶ್ರಮಿಸಬೇಕು. ಆದರೆ ಕರ್ನಾಟಕದಲ್ಲಿ ಆಮಿಷಗಳನ್ನೊಡ್ಡಿ ಅಧಿಕಾರಕ್ಕೆ ಬಂದು ತನ್ನ ಜವಾಬ್ದಾರಿ ಮರೆತಿರುವ ಈ ಸರ್ಕಾರದ ದುರಾಡಳಿತದಲ್ಲಿ ಸರಣೀ ರೂಪದ ಬಾಣಂತಿಯರ ಸಾವುಗಳ ಮೂಲಕ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ. ಇದೀಗ ರಾಜ್ಯದ ಉಗ್ರಾಣದಲ್ಲಿ ಔಷಧಿಗಳ ಕೊರತೆ ಉಂಟಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆಗೆ ಅಗತ್ಯ ಔಷಧಿಗಳೇ ಸಿಗದಿರುವ ಪರಿಸ್ಥಿತಿ ಉಲ್ಬಣಗೊಂಡಿರುವುದನ್ನು ಗಮನಿಸಿದರೆ ಈ ಸರ್ಕಾರ ಆರ್ಥಿಕ ದಿವಾಳಿಯಂಚಿಗೆ ತಲುಪಿರುವುದನ್ನು ಸಾಕ್ಷೀಕರಿಸುತ್ತಿದೆ.

ಕೇವಲ ಮತಬ್ಯಾಂಕ್ ರಾಜಕಾರಣ ಹಾಗೂ ಚುನಾವಣಾ ಸಂದರ್ಭದ ಆಮಿಷಗಳ ಯೋಜನೆಗಳ ಮೇಲೆ ಅವಲಂಬಿತವಾಗಿದೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರಕ್ಕೆ ಬಡವರು ಹಾಗೂ ಶೋಷಿತ ಸಮುದಾಯಗಳೆಂದರೆ ತಾತ್ಸಾರ. ಆರೋಗ್ಯ ಭಾಗ್ಯವನ್ನೇ ಕಿತ್ತುಕೊಂಡ ಈ ಸರ್ಕಾರ ಯಾವ ಭಾಗ್ಯ ಕೊಟ್ಟರೇನು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಜನಸಾಮಾನ್ಯರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಬಡವರ ಜೀವ ರಕ್ಷಕ ಔಷಧಿಗಳ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.