ಸನಾತನ ಸಂಸ್ಕೃತಿಯಲ್ಲಿ ಧರ್ಮಾಚರಣೆಗೆ ಆದ್ಯತೆ ನೀಡಲಾಗಿದೆ. ಪ್ರತಿಯೊಬ್ಬನೂ ಕಾಲ-ದೇಶ-ಸ್ಥಿತಿಗೆ ಅನುಗುಣವಾಗಿ ವೇದ-ಶಾಸ್ತ್ರ-ಉಪನಿಷತ್ತು-ಪುರಾಣಗಳಲ್ಲಿ ತಿಳಿಸಿದಂತೆ ಧರ್ಮಾಚರಣೆ ಮಾಡಲೇಬೇಕು. ಜ್ಞಾನಸಂಪಾದನೆ, ದೇಶರಕ್ಷಣೆ, ವ್ಯಾಪಾರಾದಿಗಳನ್ನು ಮಾಡುವುದು, ಭೂಮಿಯಲ್ಲಿ ಬಿತ್ತಿ ಬೆಳೆ ತೆಗೆದು ಸರ್ವರ ಹಸಿವನ್ನು ನೀಗಿಸುವುದು – ಹೀಗೆ ಆಯಾಯ ವರ್ಣಗಳವರು ತಮ್ಮ ಧರ್ಮವನ್ನು ಆಚರಿಸುವುದು ಶ್ರೇಷ್ಠ. ಆದರೂ ವಿಶೇಷ ಸಂದರ್ಭಗಳಲ್ಲಿ ತಾವು ಪಾಲಿಸುವ ಧರ್ಮ ಬಿಟ್ಟು; ಸಮಾಜದಲ್ಲಿ ಶಾಂತಿ ಸಂಯಮ ಕಾಪಾಡುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಆಪತ್ಕಾಲದ ಧರ್ಮವನ್ನು ಪಾಲಿಸಿದರೆ, ಅದು ಶ್ರೇಷ್ಠ ಧರ್ಮವಾಗುತ್ತದೆ. ಆಪತ್ತು ಎಂದರೆ ಅಪಾಯ ಅಥವಾ ಬಿಕ್ಕಟ್ಟು. ಧರ್ಮ ಎಂದರೆ ಕರ್ತವ್ಯ. ನಡವಳಿಕೆಯ ನೈತಿಕ ಮಾನದಂಡ. ಆದ್ದರಿಂದ, ಆಪದ್ಧರ್ಮ ಎಂದರೆ ಅಪಾಯದ ಸಮಯದಲ್ಲಿ ಅನುಸರಿಸಬೇಕಾದ ನೈತಿಕ ಮಾರ್ಗ ಅಥವಾ ನಡವಳಿಕೆಗೆ ತಕ್ಕ ಧರ್ಮ. ಇದು ವ್ಯಕ್ತಿಯ ಅಥವಾ ಸಮುದಾಯದ ಉಳಿವಿಗಾಗಿ ಪಾಲಿಸಬೇಕಾದ ಧಾರ್ಮಿಕ ತತ್ತ್ವವಾಗಿದೆ. ಕಾಲ, ದೇಶ, ಪರಿಸ್ಥಿತಿ, ಔಪಚಾರಿಕತೆಯ ಪ್ರಕಾರ ಧರ್ಮದ ಅನ್ವಯ ವಿಷಯದಲ್ಲಿ ವಿವೇಚನೆ ಮಾಡಿವೆ. ಅದರಲ್ಲೂ, ಆಪತ್ಕಾಲದಲ್ಲಿ ಪಾಲಿಸಬೇಕಾದ ಧರ್ಮವನ್ನು ಆಪದ್ಧರ್ಮ ಎಂದು ಕರೆಯುತ್ತಾರೆ. ಆಪದ್ಧರ್ಮವು ಸಾಮಾನ್ಯಧರ್ಮದ ನಿಯಮಗಳಿಗೆ ತಾತ್ಕಾಲಿಕ ವಿನಾಯಿತಿಯನ್ನು ನೀಡುತ್ತದೆ. ಮಹಾಭಾರತವು ಈ ತತ್ತ್ವದ ಅತ್ಯುತ್ತಮ ಉದಾಹರಣೆಗಳನ್ನು ಹೊಂದಿದೆ.
ಯುದ್ಧದಲ್ಲಿ ಅಶ್ವತ್ಥಾಮನ ಬಗೆಗಿನ ಸುಳ್ಳು ಮಾಹಿತಿ: ತನ್ನ ಪುತ್ರ ಅಶ್ವತ್ಥಾಮನು ಸತ್ತಿದ್ದಾನೆಂಬ ಸುಳ್ಳಿನ ಬಗ್ಗೆ ದ್ರೋಣಾಚಾರ್ಯನು ಕೇಳಿದಾಗ, ಧರ್ಮರಾಜನು ಅಶ್ವತ್ಥಾಮಾ ಹತಃ (ಅಶ್ವತ್ಥಾಮನು ಸತ್ತನು) ಎಂದು ಹೇಳುತ್ತಾನೆ. ಆದರೆ ನಿಜವಾಗಿ ಸತ್ತದ್ದು ಅದೇ ಹೆಸರಿನ ಆನೆ. ಧರ್ಮರಾಜನಂತಹ ಸತ್ಯವಂತನಿಂದ ಇಂತಹ ಅರ್ಧಸತ್ಯದ ಬಳಕೆಯಾಯಿತು. ಅವನು ಸತ್ಯವನ್ನು ನುಡಿದನಾದರೂ ಅದು ಆ ಕ್ಷಣದ ಆಪತ್ಕಾಲ ಧರ್ಮದ ಉದಾಹರಣೆಯಾಗಿದೆ.