ಯುದ್ಧ ಭೂಮಿಯಲ್ಲಿ ಕ್ಷಿಪಣಿಗಳ ಬಳಕೆಯನ್ನು ಭಾರತ ೧೯೭೧ರಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಿಸಿತು. ಬಾನ್‌ಟ್ ಗನ್ ಮುಖೇನ ನಡೆಯುತ್ತಿದ್ದ ದಾಳಿ ಪ್ರಸ್ತುತ ಕೃತಕ ಬುದ್ಧಿಮತ್ತೆ ಆಧರಿಸಿ ನಡೆಯುತ್ತಿದೆ. ಅಂದಿನ ಯುದ್ಧಕ್ಕೆ ಹೋಲಿಸಿದಲ್ಲಿ ಅಜಗಜಾಂತರ ರೂಪಾಂತರವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಆಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎನ್ನುವುದು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕೆ.ಪಿ. ಸೋಮಣ್ಣ ಅವರ ಅಭಿಮತವಾಗಿದೆ.
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸಂಯುಕ್ತ ಕರ್ನಾಟಕದ ಜೊತೆ ಅನಿಸಿಕೆ ಹಂಚಿಕೊಂಡಿರುವ ಅವರು, ಎಐ ತಂತ್ರಜ್ಞಾನದಿಂದ ಭಾರತೀಯ ನೆಲದಲ್ಲೆ ನಿಂತು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಅತ್ಯಂತ ನಿಖರವಾಗಿ ಗುರುತಿಸಿ ಧ್ವಂಸ ಮಾಡುತ್ತಿರುವುದು ಇದೇ ಎಐ ತಂತ್ರಜ್ಞಾನಕ್ಕೆ ನಿದರ್ಶನ ಎಂದರು.
ಸಮರವಲ್ಲ ಪ್ರತೀಕಾರ: ಪಹಲ್ಗಾಮ್‌ನಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದಕರಿಂದ ನಡೆದ ಕೃತ್ಯಕ್ಕೆ ಪ್ರತೀಕಾರ ರೂಪದಲ್ಲಿ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ನಡೆಯುತ್ತಿದೆಯೇ ಹೊರತು ಘೋಷಿತ ಯುದ್ಧವಲ್ಲ.
ಭಾರತೀಯ ಸೈನ್ಯ ಎಂದಿಗೂ ಯುದ್ಧಕ್ಕೆ ಮುಂದಾಗಿಲ್ಲ. ಅಮಾಯಕರ ಮೇಲಿನ ಪಾಕಿಸ್ತಾನದ ದಾಳಿಗಳಿಗೆ ಪ್ರತಿಯಾಗಿ, ಭಯೋತ್ಪಾದಕ ನೆಲೆಗಳನ್ನಷ್ಟೆ ಗುರಿಯಾಗಿಸಿಕೊಂಡು ದಾಳಿಗಳನ್ನು ಸಂಯೋಜಿಸಿದೆಯೆಂದು ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಸೋಮಣ್ಣ ಅಭಿಪ್ರಾಯಪಟ್ಟರು.
ವಿಶ್ವರಾಷ್ಟ್ರಗಳ ವಿಶ್ವಾಸಕ್ಕೆ ಮೆಚ್ಚುಗೆ: ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದ ಪರವಾಗಿದೆ. ಪಾಕಿಸ್ತಾನದ ಕುತಂತ್ರಗಳಿಗೆ ಪ್ರತಿಯಾಗಿ ಭಾರತ ತನ್ನ ರಕ್ಷಣೆಯೊಂದಿಗೆ, ಉಗ್ರ ನೆಲೆಗಳನ್ನು ಧ್ವಂಸಗೊಳಿಸಲು ಮುಂದಾಗಿದೆ. ಪಾಕಿಸ್ತಾನದ ಬೆಂಬಲಕ್ಕೆ ನಿಂತ ರಾಷ್ಟ್ರಗಳು ಚೀನಾ ಸೇರಿದಂತೆ ಒಂದೆರಡು ರಾಷ್ಟ್ರಗಳಷ್ಟೆ. ೧೯೭೧ರ ಇಂಡೋ ಪಾಕ್ ಯುದ್ಧದ ಸಂದರ್ಭ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಷ್ಯಾ, ಫ್ರಾನ್ಸ್, ಅಮೇರಿಕಾ ರಾಷ್ಟ್ರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿಕೊಳ್ಳುವ ಮೂಲಕ ಯುದ್ಧ ಘೋಷಣೆ ಮಾಡಿದ್ದರಾದರೆ, ಈಗಿನ ಪ್ರಧಾನಿ ನರೇಂದ್ರ ಮೊದಿ ಅವರು ಸಹ ವಿಶ್ವದ ಹಲ ರಾಷ್ಟ್ರಗಳನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಸೈನ್ಯದ ಕಾರ್ಯಾಚರಣೆಗೆ ಮುಂದಾಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಾನೆಟ್ ಗನ್‌ನಿಂದ ಎಐ ತಂತ್ರಜ್ಞಾನದವರೆಗೆ- ೧೯೭೧ ರ ಇಂಡೋ-ಪಾಕ್ ಯುದ್ಧದ ದಿನಗಳು ಮತ್ತು ಇಂದಿನ ಯುದ್ಧದ ವಿಧಾನಗಳತ್ತ ಬೊಟ್ಟು ಮಾಡಿದ ಕೊಟ್ಟುಕತ್ತೀರ ಸೋಮಣ್ಣ ಅವರು, ಸ್ವಾತಂತ್ರ್ಯದ ಆರಂಭಿಕ ದಿನಮಾನಗಳಲ್ಲಿ ‘ಬಾನೆಟ್ ಗನ್’ನೊಂದಿಗೆ ನಡೆಯುತ್ತಿದ್ದ ಯುದ್ಧ, ಆಧುನಿಕ ತಂತ್ರಜ್ಞಾನಗಳಿಗೆ ತಕ್ಕಂತೆ ಬದಲಾವಣೆಗಳಿಗೆ ತೆರೆದುಕೊಳ್ಳುತ್ತ ಇಂದು `ಕೃತಕ ಬುದ್ಧಿಮತ್ತೆ'(ಎಐ)ಯ ನೆರವಿನೊಂದಿಗೆ ನಡೆಯುತ್ತಿದೆ ಎಂದು ವಿಶ್ಲೇಷಿಸಿದರು.