ತಂತ್ರಜ್ಞಾನದ ಬಳಕೆಯಿಂದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆ
ಬೆಂಗಳೂರು: ಗ್ರಾಮೀಣಾಭಿವೃದ್ಧಿಯಲ್ಲಿ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಳ್ಳುವುದು ಹಾಗೂ ಗ್ರಾಮಗಳ ಮಟ್ಟದಲ್ಲೂ ಆಧುನಿಕ ತಂತ್ರಜ್ಞಾನವನ್ನು ಕೊಂಡೊಯ್ಯುವುದು ನನ್ನ ಪ್ರಮುಖ ಆಶಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಗ್ರಾಮೀಣಾಭಿವೃದ್ಧಿ ಹಾಗೂ ಐಟಿ, ಬಿಟಿ ಸಚಿವನಾಗಿ ಈ ಆಶಯವನ್ನು ಕಾರ್ಯರೂಪಕ್ಕೆ ತರುವುದು ನನಗೆ ಸಂತೋಷದ ಸಂಗತಿ. ತಂತ್ರಜ್ಞಾನದ ಬಳಕೆಯಿಂದ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದು ನನ್ನ ನಂಬಿಕೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮುದಾಯ ಕಾಮಗಾರಿಯಲ್ಲಿ ಪಾರದರ್ಶಕತೆ ತರಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಾಂಶವನ್ನು ಅಳವಡಿಸಿದೆ.
ಸಮುದಾಯ ಕಾಮಗಾರಿಗಳಲ್ಲಿ ಎಷ್ಟು ಮಂದಿ ಭಾಗವಹಿಸಿದ್ದಾರೆ ಎಂಬ ನಿಖರವಾದ ಲೆಕ್ಕವನ್ನು ಹೆಡ್ ಕೌಂಟ್ ವ್ಯವಸ್ಥೆ ಮೂಲಕ ಎಐ ತಂತ್ರಾಂಶವೇ ದಾಖಲಿಸಿಕೊಳ್ಳುತ್ತದೆ. ಇಲಾಖೆಯ ಈ ಪ್ರಯತ್ನದ ಫಲವಾಗಿ ಮನರೇಗಾದ ಕೂಲಿ ಹಣ ಸೋರಿಕೆಯಾಗುವ ಸಮಸ್ಯೆಗೆ ಕಡಿವಾಣ ಬೀಳಲಿದೆ.
ಮನರೇಗಾ ಯೋಜನೆ ಮೂಲಕ ಗ್ರಾಮೀಣ ಭಾಗದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಜತೆಗೆ, ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಗಮನ ಸೆಳೆಯುತ್ತಿದೆ. ಅಧಿಕ ಉದ್ಯೋಗ ಸೃಷ್ಟಿ ಹಾಗೂ ಹೆಚ್ಚಿನ ಕೂಲಿ ದರ ಒದಗಿಸುವುದರಲ್ಲಿ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
ಈಗ ಹಾಜರಾತಿ ಲೋಪಗಳು, ಕೂಲಿ ಹಣ ದುರ್ಬಳಕೆಯ ಸಾಧ್ಯತೆಗಳನ್ನು ತಪ್ಪಿಸಲು ಎಐ ತಂತ್ರಾಂಶ ಜಾರಿ ಮೂಲಕ ನಮ್ಮ ಇಲಾಖೆ ಮಾದರಿ ಹೆಜ್ಜೆ ಇರಿಸಿದೆ. ಈ ರೀತಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ಇಲಾಖೆ ಎಂಬ ಹೆಗ್ಗಳಿಕೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಾತ್ರವಾಗಿದೆ ಎಂದಿದ್ದಾರೆ.