ಅಪಾತ್ರರ ಕಾಲಿಗೆ ಬೀಳೋ ಸಾಂಕ್ರಾಮಿಕ!

ಇಂದಿನ ರಾಜಕೀಯ ಮುಖಂಡರ ಕಾಲಿಗೆ ಬೀಳಬೇಡಿ. ಇದಕ್ಕವರು ಅರ್ಹತೆ ಹೊಂದಿಲ್ಲ...' ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ಹೊಸ ಜ್ಞಾನೋದಯ’ ಆದಂತೆಯೋ ಅಥವಾ ಪ್ರಾಯಶ್ಚಿತ್ತ'ವಾದಂತೆ ಈ ಮಾತನ್ನಾಡಿದ್ದಾರೆ! ತಮ್ಮ ಎನ್‌ಸಿಪಿ ಯುವ ಘಟಕದ ಕಾರ್ಯಕರ್ತರ ಸಭೆಯಲ್ಲಿ ಇತ್ತೀಚೆಗೆ ಆಡಿದ ಅವರ ಈ ಮಾತಲ್ಲಿ ಹೊಸದೇನೂ ಇಲ್ಲದಿದ್ದರೂ, ಅವರು ಹೀಗೆ ಹೇಳಿದರಾ? ಇದು ಬೇಸರದ, ಪಶ್ಚಾತ್ತಾಪದ, ಪಾಪ ಪ್ರಜ್ಞೆಯ ನುಡಿಗಳಾ ಎಂದು ಅಚ್ಚರಿಯಾಗುತ್ತದೆ!! ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಹಗರಣದಲ್ಲಿ ಸಿಲುಕಿ,ಬಿಜೆಪಿ ವಾಷಿಂಗ್ ಮಷಿನ್’ನಿಂದ ಹೊರ ಬಂದ ನಂತರ ಈಗ ಎರಡನೇ ಸಾರೆ ಉಪ ಮುಖ್ಯಮಂತ್ರಿಯಾದ ಅಜಿತ್ ಪವಾರ್, ನನ್ನ ಕಾಲಿಗೆ ಬೀಳಬೇಡಿ; ಇಂದಿನ ರಾಜಕೀಯ ನಾಯರ‍್ಯಾರೂ ಕಾಲಿಗೆ ಬೀಳಿಸಿಕೊಳ್ಳುವ ಅರ್ಹತೆ ಹೊಂದಿಲ್ಲ' ಎಂದು ತನ್ನ ಯುವ ಕಾರ್ಯಕರ್ತರಿಗೆ ಮಹಾರಾಷ್ಟ್ರದ ಭೀಡ್ ನಗರದಲ್ಲಿ ಬಿಡು ಬೀಸಾಗಿ ಕರೆ ಕೊಟ್ಟಿದ್ದಾರೆ! ಅಜಿತ್ ಪವಾರ್ ಅವರು ವ್ಯಾವಹಾರಿಕ ರಾಜಕೀಯ ಲೀಲೆ ಬಲ್ಲವರು ಭೂತದ ಬಾಯಲ್ಲಿ ಭಗವದ್ಗೀತೆ ಎಂದರು.. ಆದರೆ ಎಲ್ಲರೂ ಯೋಚಿಸಬೇಕಾದ ಈಕಾಲಿಗೆ ಬೀಳುವ ಸಂಸ್ಕೃತಿ’ಯ ಮಾತು ಒಳವಾಹಿನಿಯಾಗಿ ಗಮನವನ್ನಂತೂ ಸೆಳೆದಿದೆ. ಇತ್ತೀಚಿನ ವರ್ಷಗಳಲ್ಲಿ ಲೀಡರ್, ದಾದಾ, ಮುಖಂಡ, ಬಾಸ್, ಸಾಹೇಬ್ರು ಇತ್ಯಾದಿ ಅಲಂಕಾರಿಕ ಭೂಷಣಗಳನ್ನು ಹೊತ್ತವರು ಸೃಷ್ಟಿಸಿ ಬೆಳೆಸಿರುವುದೇ ಈ ಕಾಲಿಗೆ ಬೀಳುವ ಸಂಸ್ಕೃತಿ. ಹಿಂದೆ ಧರ್ಮಭೀರುಗಳು, ಸ್ವಾಮಿಗಳು, ಮಠಾಧೀಶರು ಅಥವಾ ಅಂತಹ ಸಾಧಕರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರೆ ಒಳ್ಳೆಯದು ಎಂಬ ಭಾವನೆ ಜನಮಾನಸದಲ್ಲಿ ವ್ಯಾಪಕವಾಗಿ ಬೇರೂರಿತ್ತು. ಇಂತಹ ನೈಜ ಮಹನೀಯರು ಮಾತ್ರ ಪಾದ ಮುಟ್ಟಿ ನಮಸ್ಕರಿಸಲು ಯೋಗ್ಯರು ಎಂಬ ತಿಳಿವಳಿಕೆ ಸಮಾಜದಲ್ಲಿ ಹಾಸು ಹೊಕ್ಕಾಗಿತ್ತು. ಹಲವು ಧರ್ಮ ಸಂಸ್ಥಾಪಕರು, ಮಠಾಧೀಶರು ಕೂಡ ತಮ್ಮ ಭಕ್ತರಿಂದ ದೂರದಿಂದಲೇ ನಮಸ್ಕಾರ ಪಡೆಯುತ್ತಿದ್ದರು. ಇಂದಿಗೂ ಕೆಲವರು ತಮ್ಮ ಕಾಲು ಮುಟ್ಟಿಸಿಕೊಳ್ಳುವುದಿಲ್ಲ. ಬಹುಶಃ ಈ ಕಾಲು ಮುಟ್ಟಿಸಿಕೊಳ್ಳುವ ಶ್ರೇಷ್ಠತೆ ಅಥವಾ ಇದು ಮಹತ್ವ ಎನ್ನುವ ಭಾವನೆ ಹೊಂದಿರುವುದಕ್ಕೋ ಏನೋ, ಅಜಿತ್ ಪವಾರ್ ಹೃದಯಾಂತರಾಳದಿಂದ ಈ ಮಾತನ್ನಾಡಿದರೋ ಅಥವಾ ಕಾರ್ಯಕರ್ತರು ಕಾಲಿಗೆ ಬೀಳುವುದನ್ನು ತಪ್ಪಿಸಿಕೊಳ್ಳಲು ಹೀಗೆ ಹೇಳಿದರೋ? ಅಂದಿನ ಪರಿಸ್ಥಿತಿ ಏನಿತ್ತೋ?
ಆದರೆ ಮಹಾರಾಷ್ಟ್ರದ ರಾಜಕಾರಣಿಗಳು ಮಾತ್ರವಲ್ಲ, ಇಡೀ ದೇಶದಲ್ಲೇ ರಾಜಕೀಯ ನೇತಾರರ ಮನಸ್ಥಿತಿ ಕಾಲಿಗೆ ಬೀಳಿಸಿಕೊಳ್ಳುವುದಕ್ಕೆ ಪೂರಕವಾಗಿಯೇ ಇದೆ. ಜೀ ಹುಜೂರ್ ಪರಿಕಲ್ಪನೆ ಇಂದಿರಾ ಕಾಲದಿಂದ ಬಂದ ನಂತರ, ಕಾಲಿಗೆ ಬೀಳುವ, ಪಾದ ಮುಟ್ಟುವ, ಅದರಲ್ಲೇ ಸಂತಸ, ಹೆಮ್ಮೆ, ಅಭಿಮಾನ ಪಡುವ ಸ್ಥಿತಿ ಬಂದು ಬಿಟ್ಟಿದೆ. ಈಗಂತೂ ರಾಜಕಾರಣದ ಮೊದಲ ಮೆಟ್ಟಿಲೇ ತಮ್ಮ ನಾಯಕನ ಪಾದ ಮುಟ್ಟುವುದು ಮತ್ತು ಜೈಕಾರ ಹಾಕುವುದು!
ಅಜಿತ್ ಪವಾರ್ ವಾಸ್ತವವನ್ನೇ ಹೇಳಿದ್ದಾರೆ. ಆದರೆ ನಾಯಕರ ಕಾಲಿಗೆ ಬೀಳೋ ಸಂಸ್ಕೃತಿಗೆ ನೀರೆರೆದವರು, ಪೋಷಿಸಿದವರು ರಾಜಕಾರಣಿಗಳೇ ಅಲ್ಲವೇ? ಇಡೀ ದೇಶದಲ್ಲೀಗ ರಾಜಕಾರಣಿಗಳ ಕಾಲಿಗೆ ಕಾರ್ಯಕರ್ತರು ಅಥವಾ ಕೆಲಸ ಆಗಬೇಕೆನ್ನುವವರು, ಅಧಿಕಾರಿಗಳು ಬೀಳಲೇಬೇಕಾಗಿದೆ. ಭಕ್ತಿ ಗೌರವಗಳಿಂದ ಅಲ್ಲ, ತಮ್ಮ ಕೆಲಸ ಆಗುವುದಕ್ಕಾಗಿ ಕಾಲಿಗೆ ಬೀಳುವುದು ಜೋರಾಗಿದೆ.
ಕಥೆ ಹೇಗಾಗಿದೆ ಎಂದರೆ ಶಾಲು ಹೊದಿಸಿ, ಸನ್ಮಾನಿಸಿ, ಮನವಿ ಪತ್ರ ಕೊಟ್ಟರೆ ಅದು ಟಿಪ್ಪಣಿಯೊಂದಿಗೆ ಆಪ್ತ ಸಹಾಯಕನಿಗೆ ಹಸ್ತಾಂತರ. ಹಾಗೇ ಅರ್ಜಿ ಕೊಟ್ಟರೆ ಅದು ಅಲ್ಲಿಯೇ ಕಬುಗೆ! ಇನ್ನು, ತನ್ನ ಆಪ್ತರ ಬಳಗಕ್ಕೆ ಸೇರಿದವ ಅಥವಾ ಮರಿ ಪುಢಾರಿಯಾಗಲು ಹೊರಟವ, ನಿತ್ಯ ಕಾಲಿಗೆ ಬೀಳುವವ ಇಂದೇಕೋ ಬಿದ್ದಿಲ್ಲ ಎಂದರೆ ಅವನ ಮೇಲೆ ಒಂದು ಕಣ್ಣಿಡು ಎಂದು ಸೂಚನೆ, ಅಣತಿ.
ಮರಿ ಪುಢಾರಿಗಳಂತೂ ಈಗ ದಾದಾಗಳಾಗಿ ಹೋಗಿದ್ದಾರೆ. ಬಡಾವಣೆಯಲ್ಲಿ ಬೆದರಿಸಿ ಗೌರವ ಪಡೆದುಕೊಳ್ಳುವ ಮಂದಿ ಬೆಳೆದಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ರೌಡಿ ನಾಯಕನೊಬ್ಬ ತನಗೆ ಗೌರವ ಕೊಟ್ಟಿಲ್ಲ ಎಂದು ಜಗಳ ಕಾದು ಬಡಿದಾಡಿದ್ದಿದೆ. ಹುಬ್ಬಳ್ಳಿಯಲ್ಲಿ ಅಣ್ಣಾ ಎನ್ನದ ಎದುರು ಪಾಳಯದ ಬಡಾವಣೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದೂ ಇದೆ. ತಲ್ವಾರ್ ಝಳಪಿಸಿ ಕಾಲಿಗೆ ಬೀಳಿಸಿಕೊಳ್ಳುವ ಪದ್ಧತಿಯೂ ಶುರುವಾಗಿದೆ.
ಅಜಿತ್ ಪವಾರ್ ಆಡಿದ್ದಕ್ಕೆ ಅಚ್ಚರಿ, ನಗು ಬರುತ್ತದೆ. ಆದರೆ ವಾಸ್ತವಕ್ಕೆ ಈ ಮಾತು ಸನಿಹ. ದೊಡ್ಡ ವ್ಯಕ್ತಿತ್ವದವರು ಈ ಕಾಲಿಗೆ ಬೀಳೋ ವ್ಯವಸ್ಥೆಯನ್ನು ಬಯಸುವುದಿಲ್ಲ.
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಸಂಸ್ಮರಣ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಮಕ್ಕಳು ಬಂದು ಕುಳಿತಾಗ ಕೈ ಮುಗಿದರು. ಆ ಮಗು ಸಹಜವಾಗಿ ಅವರೆಡೆ ನೋಡಿತ್ತು. ಈ ಘಟನೆಯನ್ನು ಪ್ರತಿಪಕ್ಷಗಳು ಸಾಕಷ್ಟು ಅಪಹಾಸ್ಯ ಮಾಡಿದ್ದವು.
ನಿತೀಶ್‌ಕುಮಾರ್ ಗೊತ್ತಲ್ಲ, ಬಿಹಾರದ ಪ್ರಸ್ತುತ ಮುಖ್ಯಮಂತ್ರಿ, ಕಳೆದ ಲೋಕಸಭಾ ಚುನಾವಣೆಗೂ ಪೂರ್ವ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದಾಗ, ಎರಡು ಮೂರು ಸಭೆಗಳಲ್ಲಿ ಬಗ್ಗಿ ಮೋದಿ ಕಾಲು ಮುಟ್ಟಿ ನಮಸ್ಕರಿಸಿದರು. ಮೋದಿ ಮುಜುಗೊರಕ್ಕೊಳಗಾದರು…. ಪ್ರಧಾನ ಮಂತ್ರಿಯೊಂದಿಗೆ ರಾಜ್ಯದ ಮುಖ್ಯಮಂತ್ರಿಗಳು ಕೈಕುಲುಕುವ ಶಿಷ್ಟಾಚಾರ ಇದೆ. ನಿತೀಶ್ ಪಾದ ಮುಟ್ಟಿ ಆಶೀರ್ವಾದ ಪಡೆಯಲು ಯತ್ನಿಸಿದರು. ಇದು ರಾಜಕೀಯ ಆಶೀರ್ವಾದ ಪಡೆಯುವ ಹುನ್ನಾರವಲ್ಲದೇ ಇನ್ನೇನು? ನಿತೀಶ್ ಕುಮಾರ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜೆಡಿಯು, ಬಿಜೆಪಿಯಿಂದಲೂ ಪರೋಕ್ಷವಾಗಿ ಟೀಕೆ ಬಂತು.
ಈ ಪಾದ ಮುಟ್ಟಿಸಿಕೊಳ್ಳುವ ಸಂಸ್ಕೃತಿ ಎಂತಹ ಭೀಕರ ಮಟ್ಟಿಗೆ ಹೋಗಿದೆ ಎಂದರೆ ಅಂಡರ್‌ವರ್ಲ್ಡ್ ಡಾನ್‌ಗಳ ದಿನ ಆರಂಭವಾಗುವುದೇ ಈ ಪ್ರಕ್ರಿಯೆಯಿಂದ. ಇದೇ ಅವರುಗಳ ಪ್ರತಿಷ್ಠೆ. ರೌಡಿಶೀಟರ್‌ಗಳ ಹೊಸ ಕಲ್ಚರ್ ಇದಾಗಿಬಿಟ್ಟಿದೆ.
ಮಾತು ಮಾಣಿಕ್ಯ' ಎನ್ನುತ್ತೇವೆ. ಪ್ರಸ್ತುತ ಮಾತಿನಷ್ಟು ದುರ್ಬಳಕೆ ಮತ್ತೊಂದು ಆಗಿಲ್ಲ. ಬೈಗುಳ, ಅಪದ್ಧ ಮಾತು ಅಸಹ್ಯ ಹುಟ್ಟಿಸುವ ಮಟ್ಟಕ್ಕೆ ಬೆಳೆದಿದೆ. ದರ್ಪ, ಅಹಂಕಾರಗಳು ಪರಿಭಾಷೆ ಮೀರಿ ಬೆಳೆದಿವೆ. ರಾಜಕಾರಣಿಗಳ ದುರಹಂಕಾರ ದೇಶಾದ್ಯಂತ ಮರಿ ಪುಢಾರಿಗಳನ್ನು ಹುಟ್ಟು ಹಾಕಿದೆ. ಅಜಿತ್ ಪವಾರ್ ಅವರನ್ನು ಮಹಾ ಭ್ರಷ್ಟ, ಸಂಪತ್ತು ಕೊಳ್ಳೆ ಹೊಡೆದವ, ಮಹಾರಾಷ್ಟ್ರದ ರಕ್ತ ಪಿಪಾಸು ಎಂದೆಲ್ಲ ಜರಿದು, ಅವರ ಮೇಲೆ ಐಟಿ ರೇಡ್ ಮಾಡಿಸಿದವರೇ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಸಿಕೊಂಡು ಈಗ ಪರಿಶುದ್ಧಮಹಾನಾಯಕ’ ಎಂಬ ಬಿರುದನ್ನು ನೀಡಿದ್ದಾರೆ. ಈ ಇಂಥವರು' ಕಾಲಿಗೆ ಬೀಳುವುದರ ವಿರೋಧವಾಗಿ ಮಾತನಾಡುವುದಕ್ಕಿಂತ ದುರವಸ್ಥೆ ಇನ್ನೇನಿದೆ? ಅಂದು ಮಹಾಭ್ರಷ್ಟ ಇಂದು ಮಹಾ ಸಚ್ಚಾರಿತ್ಯವಂತ! ಕಾಲಿಗೆ ಬೀಳುವ ಈ ಭಾರತೀಯ ಮೂಲ ಸಂಸ್ಕೃತಿಯನ್ನೇ ಹೊಸಕಿ ಹಾಕುವ, ಇದನ್ನು ಇನ್ನಷ್ಟು ಅಪಹಾಸ್ಯಕ್ಕೆ ಈಡು ಮಾಡುವ ಕೆಟ್ಟ ಸ್ಥಿತಿಗೆ ಇಂಥವರೆಲ್ಲ ಸೇರಿ ತಲುಪಿಸುತ್ತಾರಷ್ಟೇ. ಕಾಲಿಗೆ ಬೀಳಿಸಿಕೊಳ್ಳುವವರಿಗಂತೂ ಗೌರವ ಇಲ್ಲ. ಕಾಲಿಗೆ ಬೀಳುವವರಂತೂ ಬಹುಪಾಲು ಅಸಹಾಯಕರು ಅಥವಾ ಅವಕಾಶವಾದಿಗಳು. ಇಂತಹ ಸಾಮಾಜಿಕ ಸಾಂಕ್ರಾಮಿಕಕ್ಕೆ ಚಿಕಿತ್ಸೆ ನೀಡೋದು ಹೇಗೆ? ನೀಡೋರು ಯಾರು? ಈ ಅಂತರ್ಗತ ಅರಿವಿನ ಕಾರಣದಿಂದಾಗಿಯೇ ಅಜಿತ್ ಪವಾರ್‌ರಂಥವರು ನೀಡುವಇಂತಹ ಕರೆ’ಗಳು ಅರ್ಥ ಕಳೆದುಕೊಂಡ ಮಾತುಗಳಾಗುತ್ತವೆ!