ಸಪ್ಪೆ ಮೋರೆ ಹಾಕಿಕೊಂಡು ತಿರುಗಾಡುತ್ತಿದ್ದ ತಿಗಡೇಸಿಯನ್ನು ನಿಲ್ಲಿಸಿ ಯಾಕೆ ಹೀಗೆ ಎಂದು ಕೇಳಿದಾಗ…ಏನಂತ ಹೇಳಲಿ? ನನಗೆ ಬೇಜಾರಾಗಿದೆ… ನೀರಿಲ್ಲದ ಬಾವಿಗೆ ಜಿಗಿದು ಮುಗಿಸಿಕೊಂಡು ಬಿಡಲೇ ಅನಿಸುತ್ತಿದೆ. ಸೈಕಲ್ ಗಾಲಿಗೆ ಬೀಳುವ ಹಾಗೆ ಆಗಿದೆ… ನಮ್ಮ ಹಣೆಬರಹವೇ ಇಷ್ಟೇ? ನಾನು ಏನೂ ಅಂತ ಮಾಡಲಿ? ನನ್ನ ತಲೆ ಚಿಟ್ಟು ಹಿಡಿದಿದೆ… ಹಿಡಿದಿದೆ ಎಂದು ಎರಡೆರಡು ಬಾರಿ ಹೇಳಿ ಜೋತಾಡಿಕೊಂಡು ಹೋಗುತ್ತಿದ್ದ. ಇದನ್ನು ನೋಡಿದ ಕೆಲವರ ಕರುಳು ಚುರ್ ಅಂದು ಆತನನ್ನು ರಮಿಸಿ ಕೇಳಿದಾಗ… ಉಗಾದಿ.. ಉಗಾದಿ ವರ್ಷಭವಿಷ್ಯ.. ಕುಂಟ್ತಿರುಪ್ತಿ ಪಂಚಾಂಗ ನೋಡಿಕೊಂಡು ಹೇಳಿದ… ಅದಕ್ಕೆ ನನಗೆ ಹೀಗೆ ಎಂದು ಅಂದ…ಹೌದೂ ಏನಂತ ಹೇಳಿದರು? ನಿನ್ನ ರಾಶಿ ಯಾವುದು ಎಂದು ಕೇಳಿದರೆ ಕಿಸೆಯಲ್ಲಿರುವ ಹಾಳೆ ತೆಗೆದು ರಾಶಿಚಕ್ರವನ್ನು ತೋರಿಸುತ್ತಿದ್ದ. ತಲೆ ತಲೆ ಜಜ್ಜಿಕೊಂಡು ಅವರ ಗೆಳೆಯರು ರಾಶಿಭವಿಷ್ಯ ನೋಡಿದಾಗ….
ಮೇಷ; ಅತ್ತೆ ಉಂಗುರ ಬರೀ ಕನಸು
ವೃಷಭ; ಬಿಟ್ಟರೆ ಕೆಟ್ಟೀರಿ ಜೋಕೆ
ಮಿಥುನ; ಹನಿಟ್ರ್ಯಾಪ್ ಭಯ ಇದೆ
ಕರ್ಕ; ಗ್ಯಾರಂಟಿ ನಂಬಿದರೆ ಗೋರಂಟಿ
ಸಿಂಹ; ಅರ್ಧವರ್ಷ ಇಲಿಯಂತಾಗಿರಿ
ಕನ್ಯಾ; ಮಾವನ ಮನಸ್ಸು ಕರಗಬಹುದು
ತುಲಾ; ವ್ಯಾಪಾರಿಗಳಿಗೆ ತೂಕದಲ್ಲಿ ಭಾರೀ ಲಾಭ
ವೃಶ್ಚಿಕ; ಇರುವೆ ಕಚ್ಚಿದರೆ ಅಲಕ್ಷ್ಯ ಬೇಡ
ಧನು; ನನಗೆ ನೂರಾಒಂದು ರೂ. ದಕ್ಷಿಣೆ ಕೊಡಿ
ಮಕರ; ಮಕ ಮಕ ನೋಡಿಕೊಂಡು ತಿರುಗಾಡಿ
ಕುಂಭ; ಬರೆಗೆಟ್ಟ ಬಸ್ಯಾನಂಗೆ ಆಗಬಾರದು ಅಂದರೆ ಆ ಕೆಲಸ ಮಾಡಿ
ಮೀನ; ವರ್ಷದವರೆಗೆ ನಾನ್‌ವೆಜ್ ನಿಷೇಧ
ಎಲ್ಲ ರಾಶಿಗಳನ್ನು ನೋಡಿದ ಆತನ ಗೆಳೆಯರಿಗೆ ತಿಗಡೇಸಿಯ ಸಮಸ್ಯೆ ಅರ್ಥವಾಗಿತ್ತು. ನಮತ್ತೆ ಯುಗಾದಿ ನಂತರ ಉಂಗುರ ಕೊಡುತ್ತಾರೆ ಎಂದು ಎಲ್ಲರ ಎದುರಿಗೆ ಸಾವಿರಾರು ಬಾರಿ ಹೇಳಿದ್ದ. ಆದರೆ ಈ ಬಾರಿ ವರ್ಷ ಭವಿಷ್ಯದಲ್ಲಿ ಅತ್ತೆ ಉಂಗುರ ಬರೀ ಕನಸು ಎಂದು ಇದೆ ಎಂಬುದೇ ಆತನ ಬೇಜಾರಿಗೆ ಕಾರಣವಾಗಿತ್ತು.