ಅಜ್ಜಿಯ ಆಣೆಗೂ ನನಗೆ ಗೊತ್ತಿಲ್ಲ…

ಲೊಂಡೆನುಮನ ಹತ್ತಿರ ಏನೋ ಅರ್ಜಂಟ್ ಕೆಲಸವಿದೆ ಎಂದು ಲಮಿತ್ ಸಾ ಕಾಕಾ ಅವರು ಊರಿಗೆ ಬಂದರು. ಊರು ದೊಡ್ಡದಾಗಿರುವುದರಿಂದ ಲೊಂಡೆನುಮನ ಅಡ್ರೆಸ್ ಸಿಗುವುದು ಬಹಳ ಕಷ್ಟವಾಯಿತು. ಯಾರಿಗಾದರೂ ಕೇಳೋಣ ಅಂದುಕೊಂಡರು. ಬಸ್ ಇಳಿದು ಹಾಗೇ ಮುಂದಕ್ಕೆ ಹೋದರೆ ಅಲ್ಲಿ ಸಿಟ್ಯೂರಪ್ಪನವರು ನಿಂತಿದ್ದರು. ಅಯ್ಯೋ ಸಿಟ್ಟೂರಪ್ಪ ಇಲ್ಲೇ ಇದಾರಲ್ಲ ಎಂದು ಅವರಿಗೆ ಈ ಅಡ್ರೆಸ್ ಎಲ್ಲಿ ಬರುತ್ತೆ ಅಜ್ಜಾ ಅವರೇ ಅಂದಾಗ..ಮೊದಲೇ ಸಿಟ್ಟಿನ ಮನಿಷಾ ಸಿಟ್ಯೂರಪ್ಪ ನನಗೇನ್ ಕೇಳ್ತಿ ಅಲ್ಲಿ ಕೇಳೋಗಿ ಎಂದು ಅಲ್ಲಿಂದ ಭರಾಭರಾ ಹೋದರು. ಇನ್ನು ಸ್ವಲ್ಪ ಮುಂದೆ ಬಂದಾಗ ಅಲ್ಲಿ ಬಂಡೆ ಕನಕೇಸಿ ಸೈಕಲ್ ಹೊಡೆದುಕೊಂಡು ನಾ ಬೆಂಕಿಯಂತೇ…ನಾನೇ ಗಾಳಿಯಂತೆ ಎಂದು ಹಳೆಯ ಸಾಂಗ್ ಹಾಡುತ್ತಿದ್ದ. ಸೈಕಲ್ ನಿಲ್ಲಿಸಿ ಎಂದು ಕೈ ಮಾಡಿದಾಗ ಆತ ಧುಬುಕ್ಕನೇ ಬಿದ್ದು ಮತ್ತೆ ಎದ್ದು ನಿಂತು ಏನ್ರಿ ನಿಮ್ದು ಅಂದಾಗ ಈ ಅಡ್ರೆಸ್ ಬೇಕಾಗಿತ್ತು ಎಂದು ತೋರಿಸಿದರು. ಸೈಕಲ್ ಮೇಲಿಂದ ಬಿದ್ದಿದ್ದ ಸಿಟ್ಟು ಇತ್ತಲ್ಲ ಅದಕ್ಕೆ ನನಗೇನು ಕೇಳುತ್ತೀರಿ ಅಲ್ಲಿ ಕೇಳಿ ಅಂದರು…ಅಲ್ಲಿ ಹೋದಾಗ ಯಜಮಾನ್ ಲೇವೇಗೌಡರು ಗಿಡದ ಕೆಳಗೆ ನಿಂತಿದ್ದರು. ಏನ್ ಸಾ…ಈ ಅಡ್ರೆಸ್ ಎಲ್ಲಿ? ಎಂದು ಕೇಳಿದಾಗ ಲಮಿತ್ ಕಾಕಾರಿಗೆ ತಿಳಿಯಲಿಲ್ಲ. ಸ್ವಲ್ಪ ಮುಂದೆ ಹೋದಾಗ ಸುಮಾರಣ್ಣ ನಿಂತಿದ್ದರು. ಅಣ್ಣೋರೆ ಈ ಅಡ್ರೆಸ್ ಎಲ್ಲಿ ಬರುತ್ತೆ ಅಂದಾಗ..ಬಹಳ ಹೊತ್ತಿನವರೆಗೆ ಅದನ್ನು ನೋಡಿ ನನಗೆ ಗೊತ್ತಿಲ್ಲ ಬ್ರದರ್ ಎಂದು ಹೇಳಿದರು. ಅಲ್ಲೇ ಒಂದು ಆಫ್ ಟೀ ಕುಡಿದು ಮುಂದೆ ಹೋದಾಗ ಅಲ್ಲಿ ಮದ್ರಾಮಣ್ಣನವರು ಗತ್ತಿನಿಂದ ಬರುತ್ತಿದ್ದುದನ್ನು ಕಂಡ ಲಮಿತ್ ಸಾ…ಅಣ್ಣೋರೆ ಈ ಅಡ್ರೆಸ್ ಗೊತ್ತಾ? ಎಂದು ತೋರಿಸಿದರು…ಓ…ನೀವು ಸೀದಾ ಓದರೆ ಅಲ್ಲಿ ಮೂರು ರಸ್ತೆ ಸಿಗುತ್ತೆ…ಮೂರನೇ ರಸ್ತೆಗುಂಟ ಹೋಗಿ..ಅಲ್ಲಿ ಮೂರು ಮರ ಕಾಣುತ್ತೆ ಮೂರನೇ ಮರದ ಬಲಗಡೆ ಓಗಿ ಅಲ್ಲಿ ಮೂರು ಮನೆ ಕಾಣುತ್ತವೆ ಒಂದು ಎರಡು ಬಿಟ್ಟು ಮೂರನೇ ಮನೆಗೆ ಹೋಗಿ…ಮೂರು ಕೋಣೆಗಳಿವೆ…ಒಂದು ಎರಡು ಬಿಟ್ಟು ಮೂರನೇ ಕೋಣೆಗೆ ಹೋಗಿ ಅಲ್ಲಿ ಮೂರು ಟೇಬಲ್‌ಗಳಿವೆ…ಮೂರನೇ ಟೇಬಲ್ ಮೇಲೆ ಮೂರು ಪುಸ್ತಕಗಳಿವೆ…ಮೂರನೇ ಪುಸ್ತಕ ತೆರೆದು ಮೂರನೇಪುಟ ತೆಗೆಯಿರಿ ಅಲ್ಲಿ ನಮ್ಮ ಅಜ್ಜಿಫೋಟೋ ಇದೆ..ಅದನ್ನ ಮುಟ್ಟಿ ಹೇಳುತ್ತೇನೆ…ಈ ಅಡ್ರೆಸ್ ನನಗೆ ಗೊತ್ತಿಲ್ಲ…ಗೊತ್ತಿಲ್ಲ…ಗೊತ್ತಿಲ್ಲ ಅಂದ..ಲಮಿತ್ ಸಾ ಮೂರ್ಛೆ ಹೋಗಿದ್ದ.