ಅಚಲ ಭಕ್ತಿಯಿಂದ ಮಾಡಿದ ಸತ್ಕಾರ್ಯಕ್ಕೆ ಸತ್ಫಲ

ಅವನಿಲ್ಲದೇ ಏನೂ ಇಲ್ಲ; ಇದು ಸೂರ್ಯ ಚಂದ್ರರಷ್ಟೇ ಸತ್ಯ. ಈ ದೇವನ ಇರುವಿನ ನಂಬಿಕೆಯಿಂದಲೇ ಜೀವನದಲ್ಲಿ ಸಾಕ್ಷಾತ್ಕಾರ ಪಡೆದ ಅದೆಷ್ಟೋಒ ಸಂತ ಮಹಂತರು ಅದ್ಭುತವಾದ ಪದವಿಗಳನ್ನು ಪಡೆದರು.
ಅಪ್ಪಟ ವಿಷ್ಣು ಭಕ್ತನಾದ ಚಕ್ರವರ್ತಿ ಅಂಬರೀಷ. ಅನೇಕ ವರ್ಷಗಳ ಕಾಲ ರಾಜ್ಯ ಭಾರ ಮಾಡಿದನಾದರೂ ದೇವರ ಬಗೆಗಿನ ಭಕ್ತಿಯಂತೂ ಪ್ರಶ್ನಾತೀತವಾದದ್ದು. ಅಂಥವನ ಭಕ್ತಿ ಅಚ್ಚರಿ ಮೂಡಿಸುತ್ತದೆಯಲ್ಲದೇ ಅಂಬರೀಷ ಚಕ್ರವರ್ತಿಯ ಒಂದೊಂದು ನಿಷ್ಠೆಗಳನ್ನು ನೋಡುತ್ತಾ ಹೋದರೆ ನಿಜವಾಗಿಯೂ ರೋಮಾಂಚನವಾಗುತ್ತದೆ.
ತನ್ನ ಮಾತುಗಳಿಂದ ಏನೇ ಆಡಲಿ ರಾಜ್ಯದ ಕಾರ್ಯಭಾರಕ್ಕೆ ಸಂಬಂಧಪಟ್ಟ ತನ್ನ ವೈಯಕ್ತಿಕ ಕುಟುಂಬದ ಸಂಬಂಧಪಟ್ಟ ವಿಷಯ, ಹೊರರಾಷ್ಟ್ರದ ಸಂಬಂಧ ಪಟ್ಟ ವಿಷಯ ಇರಬಹುದು ಯಾವುದೇ ಲೌಕಿಕ, ವೈದಿಕ ಚರ್ಚೆ ಇನ್ನಿತರ ಕಾರ್ಯ ಕಲಾಪದ ಸಂಬಂಧಪಟ್ಟಂತೆ ಏನೇ ಮಾತನಾಡಿದರೂ, ದೇವರ ಮಹಿಮೆಯನ್ನು ಸೇರಿಸಿ, ದೇವರ ಗುಣಗಳನ್ನು ಅದರಲ್ಲಿ ಪೋಣಿಸಿ ಮಾತನಾಡುವುದನ್ನು ರೂಢಿಯನ್ನು ತನ್ನ ಜೀವನದಲ್ಲಿ ಇಟ್ಟುಕೊಂಡಿದ್ದ.
ಹಾಗೆ ಮಾತನಾಡುವ ರೂಢಿಯನ್ನು ತನ್ನ ಮಂತ್ರಿಗಳಿಗೂ ತನ್ನ ಪ್ರಜೆಗಳಿಗೂ ಕೂಡ ದೇವರ ಮಹಿಮೆಗಳನ್ನು ಸೇರಿಸಿ ಮಾತನಾಡುವಂತೆ ತರಬೇತಿಯನ್ನು ಕೊಟ್ಟಿದ್ದ. ಭಗವಂತನ ಗುಣಗಳನ್ನು ನಿಮ್ಮ ಮಾತುಗಳಲ್ಲಿ ಸೇರಿಸಿ ಮಾತನಾಡಿ ಎಂದು ತರಬೇತಿಯನ್ನು ಕೊಡುವುದು. ಎಷ್ಟರಮಟ್ಟಿಗೆ ಪ್ರಜೆಗಳ ಮೇಲೆ ತನ್ನ ಸಾತ್ವಿಕವಾದ ಪ್ರಭಾವವನ್ನು ಬೀರಿ ಅವರಿಗೆ ಭಗವಂತನ ಕಥೆಗಳನ್ನು ಹಾಸುಹೊಕ್ಕಾಗಿ ಹೇಳುವಂತೆ ತರಬೇತು ಕೊಟ್ಟಿದ್ದ ಎಂದು ಕೇಳುವುದಕ್ಕೆ ಅಚ್ಚರಿಯಾಗುತ್ತದೆ.
ಭಗವಂತನ ಪರಮ ಮಂಗಳಕರವಾದ ದಿವ್ಯವಾದ ಪಾಪಗಳನ್ನು ಪರಿಹಾರ ಮಾಡುವ ಜೀವನದಲ್ಲಿ ದೃಢವಾದಂತಹ ನಿಜವಾದ ಭರವಸೆಯನ್ನು ನೀಡುವಂತಹ ಪರಮಾತ್ಮನ ಕಥೆಗಳನ್ನು ಕೇಳುವದಕ್ಕೆ ಕಿವಿಗೆ ಕೆಲಸ ಕೊಟ್ಟಿದ್ದಾನೆ. ನನ್ನ ಕಾರ್ಯಭಾರ ಏನೇ ಇದ್ದರು ದೇವರ ಕಥೆ ಸೇರಿಸಿ ಹೇಳಬೇಕು. ಜನ್ಮಾಂತರದಲ್ಲಿ ನನ್ನ ಸ್ವರೂಪ ಯೋಗ್ಯತೆ ನನ್ನ ಪೂರ್ವ ಜನ್ಮದ ಕರ್ಮಗಳನ್ನು ನೋಡಿಕೊಂಡು ನನ್ನಿಂದ ದೇವರು ಏನು ಕರ್ಮ ಮಾಡಿಸಿದ್ದಾನೆ ಗೊತ್ತಿಲ್ಲ. ದೇವರು ನನ್ನ ಯೋಗ್ಯತೆ ಮತ್ತು ಪೂರ್ವಕರ್ಮಗಳ ಯೋಗ್ಯತೆಗೆ ತಕ್ಕಂತೆ ಮಾಡಿಸಿದ ಕರ್ಮಗಳ ಪ್ರಭಾವ ಇವತ್ತಿಗೆ ನನಗೆ ದಾರಿದ್ರ ಬಂದಿದೆ. ಪರಮಾತ್ಮ ವೇದಶಾಸ್ತ್ರಗಳಲ್ಲಿ ಮಹಾಭಾರತದಲ್ಲಿ ಹೇಳಿದಂತೆ ನಾನು ಜನ್ಮಾಂತರದಲ್ಲಿ ದಾನ ಧರ್ಮಗಳನ್ನು ಮಾಡಿದ್ದರೆ. ಈ ದಾರಿದ್ರೆ ನನಗೆ ಬರಲು ಅವಕಾಶವಿರಲಿಲ್ಲ. ದೇವರ ಆಜ್ಞೆಯನ್ನು ನಾನು ಪರಿಪಾಲನೆ ಮಾಡಲಿಲ್ಲ ಆದರೂ ನಿನ್ನಂತಹ ಉದಾರ ರಾಜನನ್ನು ಈ ಧರೆಗೆ ಕೊಟ್ಟು ನಮಗೆಲ್ಲ ಅನುಗ್ರಹ ಮಾಡಿದ್ದಾನೆ. ದೇವರ ಪ್ರೇರಣೆಯಂತೆ ನನಗೊಂದು ಎರಡು ಕಾಸು ಕೊಟ್ಟು ನಮಗೆ ಉದ್ಧಾರ ಮಾಡು ಎಂದು ಭಿಕ್ಷುಕ ಅಂಬರೀಶ ರಾಜನಿಗೆ ಭಿಕ್ಷೆ ಕೇಳುವಾಗ ಹೀಗೆ ಕೇಳಬೇಕಿತ್ತಂತೆ. ಅಂಥದ್ದೊಂದು ರಾಜ್ಯದ ಜನರಲ್ಲಿ ಭಕ್ತಿಯನ್ನು ಹುಟ್ಟು ಹಾಕಿದ್ದನು. ಅದರಂತೆ ಸದ್ಭಕ್ತಿ, ಆಸ್ತಿಕ್ಯ ಮನೋಭಾವ, ಸತತ ನಾಮಸ್ಮರಣೆಯಿಂದ ಪೂರ್ವದ ವಿಕೃತಗಳನ್ನು ಕಳೆದು ಸುಕೃತಿಯನ್ನು ಭಗವಂತ ಕೊಡುತ್ತಾನೆ. ಆದುದರಿಂದ ಅಚಲ ಭಕ್ತಿಯಿಂದ ಮಾಡಿದ ಸತ್ಕಾರ್ಯಕ್ಕೆ ಸತ್ಫಲ ಪುಣ್ಯವನ್ನು ತರುತ್ತದೆ.