ಅಗತ್ಯವಸ್ತುಗಳ ಬೆಲೆ ಏರಿಕೆ ಬಡವರ ಬದುಕು ಕಷ್ಟ

ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಅಧಿಕಗೊಂಡಿದೆ. ಇದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿಲ್ಲ. ಉಚಿತ ಗ್ಯಾರಂಟಿಗಳಿಂದ ಜನ ಬೆಲೆಏರಿಕೆಯನ್ನು ಎದುರಿಸುತ್ತಾರೆ ಎಂಬ ಭ್ರಮೆಯಲ್ಲಿ ಜನಪ್ರತಿನಿಧಿಗಳು ಇದ್ದಾರೆ. ಗ್ಯಾರಂಟಿಗಳಿಂದ ಹೊಟ್ಟೆ ತುಂಬುವುದಿಲ್ಲ ಎಂಬುದು ಎಲ್ಲ ಕಡೆ ಬಹಿರಂಗಗೊಳ್ಳುತ್ತಿದೆ. ರಾಜ್ಯದಲ್ಲಿ ಬಡತನ ಪ್ರಮಾಣ ಶೇ. ೧೦.೩೩. ಇದು ಬೇರೆ ರಾಜ್ಯಗಳಿಗಿಂತ ಕಡಿಮೆ ಎಂದು ನಮ್ಮ ಸಮಾಧಾನಕ್ಕೆ ಹೇಳಿಕೊಳ್ಳಬಹುದು, ಆದರೆ ಬಡತನ ಅನುಭವಿಸಿದವರಿಗೆ ಅದರ ಅನುಭವವೇ ಬೇರೆ. ಈಗಲೂ ಜನಸಾಮಾನ್ಯರು ಸಾಲ ಮಾಡಲು ಹಿಂಜರಿಯುತ್ತಾರೆ. ಮರ್ಯಾದೆಗೆ ಹೆದರಿ ಸಾಲ ತೀರಿಸಲು ಸಾಧ್ಯವಾಗದೇ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಜನಪ್ರತಿನಿಧಿಗಳ ಮನಸ್ಸು ಮಾತ್ರ ಕಲ್ಲಾಗುತ್ತಿದೆ. ಹಿಂದೆ ಬರಗಾಲ ಕಲ್ಯಾಣ ಕರ್ನಾಟಕದಲ್ಲಿ ಸಾಮಾನ್ಯ ಸಂಗತಿಯಾಗಿತ್ತು. ಜನ ಗುಳೆ ಹೋಗುವುದನ್ನು ತಪ್ಪಿಸುವುದಕ್ಕೆ ಆಗಿನ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು ನೀರಾವರಿ ಯೋಜನೆಗಳನ್ನು ಆರಂಭಿಸಿ ಜನರಿಗೆ ಉದ್ಯೋಗ ನೀಡಿದರು. ಅದರಿಂದ ಸಾವಿರಾರು ಕುಟುಂಬಗಳು ಬಡತನದಿಂದ ಸಾವನ್ನಪ್ಪಿಕೊಳ್ಳುವುದು ತಪ್ಪಿತು. ಆಹಾರ ವಿಲ್ಲದೆ ಯಾರೂ ಸಾಯಬಾರದು ಎಂದು ನಿಯಮ ಮಾಡಿದ್ದೇವೆ. ಆದರೆ ಮರ್ಯಾದೆಯಿಂದ ಬದುಕುವುದಕ್ಕೆ ಬೇಕಾದ ಉದ್ಯೋಗ ನೀಡಲು ಸಾಧ್ಯವಾಗಿಲ್ಲ. ಅದರಲ್ಲೂ ಬೀದರ್‌ನಿಂದ ಕೊಪ್ಪಳದವರೆಗೆ ಹಳ್ಳಿಗಳನ್ನು ನೋಡಿದರೆ ಸಾಕು ಬಡತನ ಎದ್ದು ಕಾಣುತ್ತವೆ. ಬಹುತೇಕ ತಾಯಂದಿರು, ನವಜಾತ ಶಿಶುಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ಹೆಚ್ಚಿನ ವರಮಾನ ನೀಡಲು ಹಾಲಿನ ಬೆಲೆ ಹೆಚ್ಚಿಸಿದೆ. ಇದು ನಗರ ಪ್ರದೇಶದ ಜನರಿಗೆ ಹೆಚ್ಚಿನ ಹೊರೆ ಅನಿಸಬಹುದು. ಆದರೆ ಗ್ರಾಮೀಣ ಜನ ನಮ್ಮ ಮಕ್ಕಳಿಗೆ ಹಾಲನ್ನು ಕೊಡದೆ ಡೇರಿಗೆ ಹಾಕುತ್ತಾರೆ ಎಂಬುದನ್ನು ಮರೆಯಬಾರದು. ಈಗಲೂ ಯಾದಗಿರಿ, ರಾಯಚೂರು ಜಿಲ್ಲೆಗಲ್ಲಿ ಅತಿ ಕಡಿಮೆ ತೂಕದ ಮಕ್ಕಳು ಜನಿಸುತ್ತಿವೆ. ಇದಕ್ಕೆ ಪ್ರಮುಖ ಕಾರಣ ತಾಯಿ ಮತ್ತು ಮಗುವಿಗೆ ಕುಡಿಯಲು ಹಾಲು ಸಿಗುವುದಿಲ್ಲ. ಮಕ್ಕಳಲ್ಲಿ ಕ್ಷಯರೋಗ ಕಾಣಿಸಲು ಇದೇ ಕಾರಣ ಎಂಬುದು ಸಮೀಕ್ಷೆಯಿಂದ ಪತ್ತೆಯಾಗಿದೆ. ರಕ್ತ ಹೀನತೆ ಅಧಿಕಗೊಳ್ಳಲು ಹಾಲಿನ ಕೊರತೆ ಕಾರಣ ಎಂಬುದನ್ನು ಮರೆಯಬಾರದು. ಗ್ರಾಮೀಣ ಜನರಿಗೆ ಬೇಕಿರುವುದು ಹಣವಲ್ಲ. ಮೂಲಭೂತ ವಸ್ತುಗಳು. ಅಡುಗೆ ಅನಿಲ ದರ ಅಧಿಕಗೊಂಡಂತೆ ಗ್ರಾಮೀಣ ಜನ ಮತ್ತೆ ಸೌದೆಗೆ ಮೊರೆ ಹೋಗಬೇಕಾಗುತ್ತದೆ. ಇದರಿಂದ ಅರಣ್ಯ ನಾಶವಲ್ಲದೆ ಗ್ರಾಮೀಣ ಮಹಿಳೆಯರ ಆರೋಗ್ಯ ಕೆಡುತ್ತದೆ. ವಿದ್ಯುತ್, ನೀರು, ಬಸ್ ದರ ಅಧಿಕಗೊಂಡಿದೆ. ಮಹಿಳೆಯರಿಗೆ ಉಚಿತ ಬಸ್ ಇದ್ದರೂ ಗಂಡಸರ ಮೂಲಕ ಅವರ ದರವನ್ನೂ ಪಡೆದುಕೊಳ್ಳುವ ಹುನ್ನಾರ ನಡೆದಿದೆ. ಹಿಂದೆ ಬೆಲೆಏರಿಕೆ ನಿಯಂತ್ರಿಸಲು ಅಗತ್ಯ ಸೇವಾ ಕಾಯ್ದೆಯನ್ನು ಜಿಲ್ಲಾಧಿಕಾರಿಗಳು ಬಳಸುತ್ತಿದ್ದರು. ಅಲ್ಲದೆ ಅಕ್ರಮ ದಾಸ್ತಾನಿಗೆ ಅವಕಾಶ ನೀಡುತ್ತಿರಲಿಲ್ಲ. ಅಲ್ಲದೆ ಪಡಿತರ ವಿತರಣೆ ಪದ್ಧತಿಯನ್ನು ಪ್ರಬಲಗೊಳಿಸುತ್ತಿದ್ದರು. ಈಗ ಒಟ್ಟು ೪.೪ ಕೋಟಿ ಜನ ಪಡಿತರ ಪದ್ಧತಿಯ ಮೂಲಕ ಆಹಾರಧಾನ್ಯ ಪಡೆಯುತ್ತಿದ್ದಾರೆ. ಜನರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡಿದರೆ ಬೆಲೆಏರಿಕೆಯನ್ನು ಪರೋಕ್ಷವಾಗಿ ನಿಯಂತ್ರಿಸಬಹುದು. ಶೇ.೨.೭ ರಷ್ಟು ನಿರುದ್ಯೋಗ ಕಾಡುತ್ತಿದೆ. ಒಟ್ಟು ಜಿಡಿಪಿಯಲ್ಲಿ ಶೇ.೧೯ ರಷ್ಟು ಪಾಲು ಉತ್ಪಾದನಾ ವಲಯದ್ದು ಎಂಬುದನ್ನು ಮರೆಯುವ ಹಾಗಿಲ್ಲ. ಅದಕ್ಕೆ ಉತ್ತೇಜನ ನೀಡಿದರೆ ಹೆಚ್ಚು ಜನರಿಗೆ ಉದ್ಯೋಗ ನೀಡಬಹುದು. ಕೃಷಿ ಆಧರಿತ ಕೈಗಾರಿಕೆಗಳಿಗೆ ಉತ್ತಮ ಅವಕಾಶಗಳಿವೆ. ನಿರುದ್ಯೋಗಿಗಳಿಗೆ ನೀಡುವ ನೆರವನ್ನು ಕೂಡಲೇ ಜಾರಿಗೆ ತಂದರೆ ಬೆಲೆಏರಿಕೆ ಎದುರಿಸಲು ಸಾಧ್ಯವಾಗುತ್ತದೆ. ಒಂದೇ ಒಂದು ಸಂತೋಷದ ಸಂಗತಿ ಎಂದರೆ ಕೇಂದ್ರ ಸರ್ಕಾರ ನರೇಗಾ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ದಿನಗೂಲಿಯನ್ನು ೩೪೯ ರೂ. ನಿಂದ ೩೭೦ ರೂ.ಗಳಿಗೆ ಹೆಚ್ಚಿಸಿದೆ. ರಾಜ್ಯದಲ್ಲಿ ೮೯.೧೨ ಲಕ್ಷ ಜನ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇದು ಮರಳುಗಾಡಿನಲ್ಲಿ ನೀರಿನ ಸೆಲೆ ಕಂಡಂತೆ ಆಗಿದೆ. ಇತ್ತೀಚೆಗೆ ಮುಖ್ಯಮಂತ್ರಿಯಿಂದ ಹಿಡಿದು ಸಂಸದರು, ಶಾಸಕರು ತಮ್ಮ ಸಂಬಳ ಹೆಚ್ಚಿಸಿಕೊಂಡಿದ್ದಾರೆ. ಅದನ್ನು ಉದಾರವಾಗಿ ಮುಂದೂಡಿ ಬಡವರಿಗೆ ಉಚಿತ ಆಹಾರ ಪ್ರಮಾಣ ಹೆಚ್ಚಿಸಲು ಆ ಹಣವನ್ನು ಬಳಸಿದರೆ ಬಡವರ ಆತ್ಯಹತ್ಯೆಗೆ ಬ್ರೇಕ್ ಹಾಕಬಹುದು. ಪಾಕ್ ನಮ್ಮ ಮೇಲೆ ಯುದ್ಧ ಘೋಷಿಸಿದಾಗ ಆಗಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತಿç ವಾರಕ್ಕೊಮ್ಮೆ ಊಟವನ್ನು ಬಿಟ್ಟರು. ಈಗಿನ ಜನ ಪ್ರತಿನಿಧಿಗಳಿಗೆ ಅವರು ಆದರ್ಶರಾಗಬೇಕು. ಬಡತನ ನೋಡಿ ಮರುಗುವ ಮನಸ್ಸು ನಮ್ಮ ಜನಪ್ರತಿನಿಧಿಗಳಿಗೆ ಬರಬೇಕು. ಆಗ ಬೆಲೆಏರಿಕೆ ನಿಯಂತ್ರಣ ಕಷ್ಟದ ಕೆಲಸವೇನಲ್ಲ. ಉಳ್ಳವರು ಪ್ರತಿಯೊಬ್ಬರು ತಮ್ಮ ಆದಾಯದಲ್ಲಿ ಶೇ.೧ ರಷ್ಟು ನೀಡಿದರೆ ಸಾಕು ಯಾರೂ ಹಸಿವಿನಿಂದ ಸಾಯದಂತೆ ನೋಡಿಕೊಳ್ಳಬಹುದು ಎಂದು ದಾರ್ಶನಿಕರೊಬ್ಬರು ಹೇಳಿದ ಮಾತು ಈಗ ನೆನಪಿಗೆ ಬರುತ್ತಿದೆ. ತ್ಯಾಗ ಮನೋಭಾವ ನಮ್ಮ ಜನಪ್ರತಿನಿಧಿಗಳ ಮನೆಯಿಂದ ಆರಂಭಗೊಳ್ಳಬೇಕು. ಪ್ರತಿವರ್ಷ ಕೋಟ್ಯಧಿಪತಿಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ಬಡತನ ಇಳಿಮುಖಗೊಳ್ಳುತ್ತಿಲ್ಲ. ಸರ್ಕಾರದ ಎಲ್ಲ ಯೋಜನೆಗಳು ಶ್ರೀಮಂತರ ಪರ ಇದೆಯೇ ಹೊರತು ಬಡವರ ಪರ ಯಾವ ಘೋಷಿತ ಯೋಜನೆಗಳು ಕಾರ್ಯಗತವಾಗುವುದಿಲ್ಲ. ಅವುಗಳಿಗೆ ಮಾತ್ರ ಹಣದ ಕೊರತೆ ಬಂದುಬಿಡುತ್ತದೆ. ಬಡತನ ನಿವಾರಣೆಗೆ ಹಣ ಅಡ್ಡಿಯಲ್ಲ. ಮಾನವೀಯತೆ ಇಲ್ಲದಿರುವುದು. ಅದು ಮತದ ಬ್ಯಾಂಕ್‌ನಲ್ಲಿ ಸೇರಿಲ್ಲ.