ಅಕ್ರಮ ಸಂಬಂಧ: ಕೊಚ್ಚಿ ವ್ಯಕ್ತಿಯ ಕೊಲೆ

ಗಂಗಾವತಿ: ಅಕ್ರಮ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ತಾಲೂಕಿನ ವೆಂಕಟಗಿರಿ ಗ್ರಾಮದ ಶ್ರೀನಿವಾಸ ಮಿಲ್ ಹತ್ತಿರ ಜರುಗಿದೆ.
ವಿಠಲಾಪೂರ ಗ್ರಾಮದ ಕುರಿಗಾಯಿ ನಾಗರಾಜ ಕುರುಬರ (31) ಕೊಲೆಯಾದ ವ್ಯಕ್ತಿ. ಕೊಲೆ ಮಾಡಿದವರು ವಿಠಲಾಪೂರ ಗ್ರಾಮದ ಕರಡಿ ಹನುಮಂತ ಹಾಗೂ ಸಿದ್ದರಾಮೇಶ ಎಂದು ತಿಳಿದು ಬಂದಿದೆ.
ಕೊಲೆ ಪ್ರಕರಣಕ್ಕೆ ಅಕ್ರಮ ಸಂಬಂಧ ಕಾರಣ ಎನ್ನಲಾಗಿದೆ. ವಿಠಲಾಪೂರ ಗ್ರಾಮದಿಂದ ನಾಗರಾಜ ಕುರುಬರ ಗಂಗಾವತಿಗೆ ಬೈಕ್‌ನಲ್ಲಿ ಆಗಮಿಸುವ ವೇಳೆ ವಿಠಲಾಪೂರ ಗ್ರಾಮದ ಕರಡಿ ಹನುಮಂತ ಹಾಗೂ ಸಿದ್ದರಾಮೇಶ ವೆಂಕಟಗಿರಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀನಿವಾಸ ರೈಸ್ ಮಿಲ್ ಹತ್ತಿರ ಅಟ್ಟಾಡಿಸಿ ನಾಗರಾಜನನ್ನು ಕೊಡಲಿಯಿಂದ ಕುತ್ತಿಗೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ರಂಗಪ್ಪ ಮಾತನಾಡಿ ಕೊಲೆಗೈದವರನ್ನು ಬಂಧಿಸಲಾಗಿದ್ದು ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.