ಹೆಜ್ಜೆಹೆಜ್ಜೆಯಲ್ಲೂ ಭಾರತದ ಗೆಲುವನ್ನೇ ಬಯಸಿ ಭಾರತೀಯರ ಕ್ಷೇಮದ ತಳಹದಿಯ ಮೇಲೆ ವಸುಧಾ ಕುಟುಂಬ ರಚಿಸುವ ಕನಸು ಬಿತ್ತುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಷ್ಟ್ರಹಿತ ಮತ್ತು ಸಾಮಾಜಿಕ ಉನ್ನಯನದ ಉನ್ನತ ಯೋಚನೆಗಳಲ್ಲೇ ಸದಾ ಮುಳುಗಿರುವ ಜಗತ್ತಿನ ಅತಿದೊಡ್ಡ ಮಾನವ ಸಂಘಟನೆ. ನೆರೆ, ಬರ, ಯುದ್ಧ, ವಿಪತ್ತು, ಅನಿರೀಕ್ಷಿತ ಅವಘಡಗಳೇ ಮೊದಲಾದ ಯಾವ ಸಮಸ್ಯೆಗಳು ಎದುರಾದರೂ ತಕ್ಷಣವೇ ಪ್ರತ್ಯಕ್ಷವಾಗುವ ಸಂಘ, ಕಾರ್ಯಸಮಾಪ್ತಿಯ ಬಳಿಕ ‘ನಾಹಂ ಕರ್ತಾ’ ಭಾವ ತಳೆದು ಸಮಾಜಮುಖಿ ಕಾರ್ಯದಲ್ಲಿ ಮತ್ತೆ ತೊಡಗಿಕೊಳ್ಳುತ್ತದೆ. ‘ದೇಶದ ಹಿತ ಹಾಗೂ ಧರ್ಮರಕ್ಷಣೆಯ ಅವಕಾಶ ನಮ್ಮೆದುರು ತೆರೆದಾಗ ವೈಯಕ್ತಿಕ ಸುಖಾಪೇಕ್ಷೆಗಳನ್ನು ಬದಿಗಿರಿಸಿ ಆರ್ತರ ಅಳುವನ್ನು ದೂರೀಕರಿಸುವ ದಾರಿಯನ್ನೇ ಆಯ್ಕೆಮಾಡಬೇಕು. ಅದುವೇ ಭಗವಂತನ ನಿಜಪೂಜೆ’ ಎಂಬ ಕೇಶವ ಬಲಿರಾಮ ಹೆಡಗೆವಾರರ ವಿನೀತವಾಣಿ, ‘ನಮ್ಮ ಯೌವನದ ಪುಷ್ಪವು ಮೈತುಂಬಿ ಅರಳಿನಿಂತಾಗ ಅದನ್ನು ತಾಯಿ ಭಾರತಿಯ ಅಡಿದಾವರೆಗಳಲ್ಲಿ ಅರ್ಪಿಸುವುದರಲ್ಲೇ ಜೀವನದ ಸಾರ್ಥಕ್ಯ ಅಡಗಿದೆ’ ಎಂದ ಮಾಧವ ಸದಾಶಿವ ಗೋಳ್ವಲ್ಕರರ ರಾಷ್ಟ್ರಸೂಕ್ತ, ‘ಅಸ್ಪೃಶ್ಯತೆ ಪಾಪವಲ್ಲದಿದ್ದರೆ ಈ ಜಗತ್ತಿನಲ್ಲಿ ಬೇರಾವುದೂ ಪಾಪವಲ್ಲ. ತನ್ನಂತೆಯೇ ಇರುವ ಇನ್ನೊಂದು ಜೀವವನ್ನು ದೂರೀಕರಿಸುವುದು ಮಾನವಜನಾಂಗದ ಘೋರ ಅನ್ಯಾಯ’ ಎಂದ ಮಧುಕರ ದತ್ತಾತ್ರೇಯ ದೇವರಸ್, ‘ಶಿಕ್ಷಿತರು, ವಿಚಾರವಾದಿಗಳು, ದೇಶದ ಶ್ರೀಮಂತ ಇತಿಹಾಸದ ಅಭಿಮಾನಿಗಳು ದು:ಖಿತರ ಕಣ್ಣೀರೊರಸಲು ಕೊಂಚ ಸಮಯ ಮೀಸಲಿಟ್ಟರೆ ಪ್ರಚಂಡ ಭಾರತ ನಿರ್ಮಾಣಗೊಳ್ಳುವುದು ನಿಶ್ಚಿತ’ ಎಂಬ ರಾಜೇಂದ್ರ ಸಿಂಗ್ ಭರವಸೆಯ ಮಾತುಗಳೇ ಶತಮಾನ ಸಂಭ್ರಮದಲ್ಲಿರುವ ಸಂಘದ ಅಂತರಂಗದ ಸಾಮರ್ಥ್ಯಕ್ಕೆ ಸಾಕ್ಷಿ.
‘ಎಲ್ಲವನ್ನೂ ಒದಗಿಸಿರುವ ಭಾರತಕ್ಕೆ ನಿಷ್ಠರಾಗಿ, ಸಹೋದರ ಭಾರತೀಯರ ಕಷ್ಟವನ್ನು ಸ್ವಂತ ದು:ಖವೆಂದು ಭಾವಿಸಿ ಸ್ಪಂದಿಸುವ ಗುಣ ಬೆಳೆಸಿದರೆ ಪ್ರಜ್ವಾಲ್ಯಮಾನ ಭಾರತದ ರಚನೆಗೆ ಹೊತ್ತೆಷ್ಟು ಬೇಕು’ ಎಂಬ ಪ್ರಶ್ನೆಯೊಂದಿಗೆ ದೇಸೀ ಚಿಂತನೆಯನ್ನು ಜಾಗೃತಗೊಳಿಸಿದ ಪಂಚಮ ಸರಸಂಘಚಾಲಕ ಕು.ಸಿ. ಸುದರ್ಶನರು ಕನ್ನಡ ಮೂಲದವರೆಂಬುದು ಹೆಮ್ಮೆ. ಮಂಡ್ಯದ ಕೆ.ಆರ್.ಪೇಟೆಯ ಕುಪ್ಪಳ್ಳಿ ಮೂಲದ ಚಿನ್ನಯ್ಯ ಸೀತಾರಾಮಯ್ಯ ದಂಪತಿಗಳಿಗೆ ೧೯೩೧ರ ಜೂನ್ ಹದಿನೆಂಟರಂದು ಜನಿಸಿದ ಕು.ಸೀ. ಸುದರ್ಶನರು ತಮ್ಮ ಒಂಬತ್ತನೆಯ ವಯಸ್ಸಿನಲ್ಲೇ ಸಂಘದಂಗಳ ಪ್ರವೇಶಿಸಿದರು. ಜಬಲ್ಪುರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವರ್ಣಪದಕ ಸಹಿತ ಪದವಿ ಪೂರೈಸಿದ ಬಳಿಕ ಉದ್ಯೋಗಾವಕಾಶಗಳನ್ನು ದೂರೀಕರಿಸಿ ಸಂಘ ಪ್ರಚಾರಕ ಜೀವನ ಆರಂಭಿಸಿ ಸ್ಥಾನೀಯ ಸ್ತರದಿಂದ ರಾಷ್ಟ್ರಮಟ್ಟದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಕುಶಲಭಾಷಿ ಸುದರ್ಶನರು, ಈಶಾನ್ಯ ಭಾರತದಲ್ಲಿ ನಡೆಯುತ್ತಿದ್ದ ಬಾಂಗ್ಲಾ ನುಸುಳುಕೋರರ ಸಮಸ್ಯೆಯನ್ನು ಮೊಟ್ಟಮೊದಲು ಬೆಳಕಿಗೆ ತಂದ ಪುಣ್ಯಾತ್ಮ. ಮಧ್ಯಭಾರತದ ತುಂಬಾ ಓಡಾಡಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿ, ಮಿಶನರಿಗಳ ಮೋಸದ ಮತಾಂತರದ ವಿರುದ್ಧವೂ ಸಂಘಟನಾತ್ಮಕ ಕಾರ್ಯ ಕೈಗೊಂಡ ಪರಿಣಾಮ ಇಂದು ಈಶಾನ್ಯ ರಾಜ್ಯಗಳಲ್ಲಿ ಭಾರತೀಯತೆ ಉಳಿದಿದೆ. ಹಿಂದುಗಳನ್ನು ಜಾಗೃತಗೊಳಿಸಿ, ತಲೆತಲಾಂತರದ ನಂಬಿಕೆಗಳನ್ನು ನೆನಪಿಸಿ ಪರಂಪರೆಯ ಉಳಿವಿನ ಅನಿವಾರ್ಯತೆಯನ್ನು ನೆನಪಿಸಿದ ಕು.ಸೀ., ಹಿಂದು ಜೀವನ ಪದ್ಧತಿಗೆ ಹೊಸ ರೂಪಿತ್ತ ಹರಿಕಾರ.
‘ಭಾರತೀಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪೂರ್ವಿಕರು ಹಿಂದುಗಳು. ಬಣ್ಣ, ಮಾತು, ಆಹಾರ ಪದ್ಧತಿ, ಜೀವನಶೈಲಿ ಅರಬ್ಬರಂತೆಯೂ ಇಲ್ಲ, ಇಂಗ್ಲೆಂಡಿನವರದೂ ಅಲ್ಲ. ಒಂದೆರಡು ತಲೆಮಾರುಗಳ ಹಿಂದೆ ಮೋಸ, ವಂಚನೆ, ಭಯ, ಆಮಿಷಗಳಿಗೊಳಗಾಗಿ ಮತಾಂತರವಾದ ಮಾತ್ರಕ್ಕೆ ಜನ್ಮಜಾತ ರಾಷ್ಟ್ರಪ್ರೇಮವನ್ನು ಮರೆತು ಜೀವಿಸುವುದು ಸರ್ವಥಾ ಸಾಧ್ಯವಿಲ್ಲ. ಆಚರಣೆಯ ಪದ್ಧತಿ ಬದಲಾಗಿದ್ದರೂ ದೇಶದ ಕುರಿತ ನಿಷ್ಠೆ, ಹಿಂದು ಸಂಸ್ಕೃತಿಯೆಡೆಗಿನ ಗೌರವ ಕ್ಷೀಣವಾಗದಿರಲಿ. ಮತಾಚಾರಕ್ಕಿಂತಲೂ ದೇಶಹಿತವೇ ಮೊದಲೆಂಬ ಭಾವ ಸದಾ ಸ್ಫುರಿಸಲಿ’ ಎಂಬ ಉದ್ಬೋಧಕ ಮಾತುಗಳಿಂದ ಇಸ್ಲಾಂ, ಕ್ರೈಸ್ತ ಮತಾನುಯಾಯಿಗಳಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ ಸುದರ್ಶನರು, ಅಲ್ಪಸಂಖ್ಯಾತ ಪದಕ್ಕಿತ್ತ ವ್ಯಾಖ್ಯಾನ ಅತ್ಯದ್ಭುತ. ಹೊರದೇಶದಿಂದ ಬಂದು ಆಶ್ರಯ ಪಡೆದ ಪಾರ್ಸಿ ಮತ್ತು ಯಹೂದಿಗಳಷ್ಟೇ ಅಲ್ಪಸಂಖ್ಯಾತ ಸ್ಥಾನಕ್ಕೆ ಅರ್ಹರೇ ಹೊರತು, ಇಲ್ಲಿಯವರೇ ಆದ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಲ್ಲವೆಂಬ ಅಭಿಮತಕ್ಕೆ ಉಭಯಮತೀಯ ಪಂಡಿತರೂ ತಲೆದೂಗಿದ್ದರು.
ಸ್ವಾವಲಂಬಿ ಭಾರತದ ಮಾರ್ಗಸೂಚಿ ರಚಿಸಿದ ಸರಳತೆಯ ಮಹಾಮೂರ್ತಿ ಕು.ಸೀ., ಸಾಮರಸ್ಯ ಸಂಗಮ – ಸೇವಾಭಾರತಿ ಚಟುವಟಿಕೆಗಳ ಮೂಲಕ ಸಂಘದ ಬೇರನ್ನು ಗ್ರಾಮಗಳಿಗೂ ಪಸರಿಸಿದರು. ಕಾರ್ಗಿಲ್ ಯುದ್ಧದ ಮಹಾಗೆಲುವಿನ ಮರುವರ್ಷವೇ ಸರಸಂಘಚಾಲಕ ದಾಯಿತ್ವವನ್ನು ವಹಿಸಿದ ಕು.ಸೀ., ಸಂಘದ ಅಮೃತಮಹೋತ್ಸವ ಮತ್ತು ಗುರೂಜಿ ಜನ್ಮಶತಾಬ್ದ ಕಾರ್ಯವನ್ನು ದೇಶದಾದ್ಯಂತ ವಿಸ್ತರಿಸಿದರು. ಹೊಸ ಶಾಖೆಗಳನ್ನು ಆರಂಭಿಸುವ ಜೊತೆಜೊತೆಗೆ ಇರುವ ಚಟುವಟಿಕೆಗಳಿಗೆ ವೇಗ ನೀಡುವ ದೂರದೃಷ್ಟಿಯ ಪರಿಣಾಮವನ್ನು ಇಂದು ನೋಡುತ್ತಿದ್ದೇವೆ. ನಿತ್ಯವೂ ಶಾಖೆಗೆ ಹಾಜರಾಗಿ, ಕಿರಿಯರೊಡನೆ ಕಿರಿಯರಾಗಿ ಬೆರೆವ ಅವರ ಸರಳತೆಗೆ ಎಣೆಯಿಲ್ಲ. ಉಪನ್ಯಾಸ ಪೂರ್ವದಲ್ಲಿ ನಡೆಸುತ್ತಿದ್ದ ಮಾಹಿತಿ ಸಂಗ್ರಹ, ಸೋದಾಹರಣ ವಿವರಣೆ, ತರ್ಕಬದ್ಧ ನಿರೂಪಣೆಯಿಂದ ಸಂಘಕಾರ್ಯಕ್ಕೆ ಹೊಸ ರೂಪಿತ್ತ ಅವರ ಗ್ರಾಮಾಧಾರಿತ ರಾಷ್ಟ್ರವಿಕಾಸ ಪಥ ಸರ್ವಕಾಲಕ್ಕೂ ಅನುಕರಣೀಯ. ಸಾವಯವ ಕೃಷಿ – ಗೋ ಸಂರಕ್ಷಣೆ – ಜಲಸಂರಕ್ಷಣೆ – ಪ್ರಾಕೃತಿಕ ಸಂಪನ್ಮೂಲಗಳ ಸದ್ವಿನಿಯೋಗಕ್ಕೆ ಪ್ರಥಮ ಆದ್ಯತೆಯಿತ್ತು, ದೇಸೀ ಆಟಗಳಿಗೆ ಪ್ರೋತ್ಸಾಹ ನೀಡುವಂತೆ ಹುರಿದುಂಬಿಸಿದರು. ದೇಸೀ ಚಿಂತನೆಯನ್ನು ವೈಚಾರಿಕ ದೃಷ್ಟಿಕೋನದಿಂದ ಮಾತ್ರ ನೋಡದೆ ಸಮಗ್ರತೆಯ ಕಲ್ಪನೆಯಿತ್ತು, ರಾಷ್ಟ್ರವೊಂದು ಶಸ್ತ್ರದಿಂದ ಮಾತ್ರವೇ ರಕ್ಷಿತವಾಗುವುದರಿಂದ ಭಾರತವು ಶಸ್ತ್ರಾಸ್ತ್ರ ಸಂಗ್ರಹದಲ್ಲಿ ಮತ್ತು ಉತ್ಪಾದನೆಯಲ್ಲಿ ಪಾರಮ್ಯ ಸಾಧಿಸಬೇಕೆಂಬ ಸಲಹೆಯಿತ್ತರು. ಪೆಟ್ರೋಲ್ – ಡೀಸೆಲ್‌ಗೆ ಪರ್ಯಾಯವಾಗಿ ಪ್ಲಾಸ್ಟಿಕ್ ತ್ಯಾಜ್ಯ ಅಥವಾ ಇತರ ಮೂಲಗಳಿಂದ ಇಂಧನ ತಯಾರಿಸಲು ವಿಜ್ಞಾನಿಗಳಿಗೆ ಪ್ರೇರಣೆಯಿತ್ತು ಬಯೋಡೀಸೆಲ್ ಸಂಶೋಧನೆ ನಡೆಸಿ ಸ್ವಾವಲಂಬಿ ರಾಷ್ಟ್ರನಿರ್ಮಿಸುವ ಸಲಹೆಯಿತ್ತರು. ಕಾರ್ಯಕರ್ತರ ಆತ್ಮರಕ್ಷೆಯ ಹಿನ್ನೆಲೆಯಲ್ಲಿ ನಿಯುದ್ಧವನ್ನು ರೂಪಿಸಿದ ಸುದರ್ಶನರು, ಭಾರತೀಯ ಇತಿಹಾಸದ ಪ್ರಕಾಶಕ್ಕಾಗಿ ಪ್ರಜ್ಞಾ ಪ್ರವಾಹ ಹಾಗೂ ಸ್ವದೇಶೀ ಜ್ಞಾನ – ವಿಜ್ಞಾನ – ತಂತ್ರಜ್ಞಾನದ ಮುನ್ನೆಲೆಗೆ ವಿಜ್ಞಾನ ಭಾರತಿಯ ಕಾರ್ಯವಿಸ್ತಾರಕ್ಕೆ ದಿಶೆತೋರಿದರು. ಆಳವಾದ ಅಧ್ಯಯನ, ಅಗಾಧ ಪಾಂಡಿತ್ಯ, ಚುರುಕುಬುದ್ಧಿ, ಹಾಸ್ಯಪ್ರಜ್ಞೆ, ಸರಳರಲ್ಲಿ ಸರಳ ತಾನೆಂಬ ವಿನಯ, ಸಂಖ್ಯೆ ಐವತ್ತಾದರೂ ಐವತ್ತು ಸಾವಿರವಾದರೂ ಭಾಷಣದ ಮುಖ್ಯಾಂಶದಲ್ಲಿ ಕಿಂಚಿತ್ತೂ ವ್ಯತ್ಯಾಸವಾಗದ ತನ್ಮಯತೆಯಿಂದ ಸರ್ವರ ಪ್ರೀತಿಗೆ ಪಾತ್ರರಾದ ಹಲವು ಭಾಷೆಗಳ ಸರದಾರ, ವಿಶೇಷಾಸನ – ಪ್ರತ್ಯೇಕ ಧ್ವನಿವರ್ಧಕ – ಉಪಚಾರಗಳನ್ನು ಎಂದಿಗೂ ಮಾನ್ಯ ಮಾಡಲಿಲ್ಲ. ಸ್ವಯಂಸೇವಕನಿಗೆ ಸರಳತೆಯೇ ಭೂಷಣವೆಂದರುಹಿ ಸಾಮಾಜಿಕ ಸಾಮರಸ್ಯದ ಸಂದೇಶವಿತ್ತು ೨೦೧೨ರ ಸೆಪ್ಟೆಂಬರ್ ಹದಿನೈದರಂದು ಅಸ್ತಂಗತರಾದ ಕು.ಸೀ. ಸುದರ್ಶನ್, ತಪ್ಪನ್ನು ತಪ್ಪೆಂದು ಘೋಷಿಸಿ ಒಳಿತನ್ನು ಹೃತ್ಪೂರ್ವಕ ಸ್ವಾಗತಿಸುವ ವಿಶಾಲ ಮನೋಭಾವದ ಭಾರತಭಕ್ತ. ಆ ಮಹಾತ್ಮನ ಜನ್ಮೋತ್ಸವ ನಾಡಿಗೆ ಬೆಳಕಾಗಲಿ.