ಕುಮಟಾ: ಕಾರೊಂದು ರಸ್ತೆ ಬದಿಯಲ್ಲಿದ್ದ ಅಂಗಡಿಗೆ ನುಗ್ಗಿದ ಪರಿಣಾಮ ಮಹಿಳೆಯೊಬ್ಬಳು ಗಾಯಗೊಂದ ಘಟನೆ ತಾಲೂಕಿನ ಕೋಡ್ಕಣಿ ಕ್ರಾಸ್ ಬಳಿ ರವಿವಾರ ನಡೆದಿದೆ.
ಮಂಗಳೂರು ಭಾಗದ ಜನ ಕಾರಿನ ಮೂಲಕ ಗೋಕರ್ಣಕ್ಕೆ ಬಂದು ಮಹಾಬಲೇಶ್ವರ, ಗಣಪತಿ ದೇವರಿಗೆ ಪೂಜೆ ಸಲ್ಲಿಸಿ ಊರಿಗೆ ಮರಳಲು ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಕೋಡ್ಕಣಿ ಕ್ರಾಸಿನ ಬಳಿಯಿದ್ದ ಮಾರುತಿ ನಾಯ್ಕ ಅವರ ಅಂಗಡಿಗೆ ಏಕಾಎಕಿ ನುಗ್ಗಿತು. ಇದರಿಂದ ಅಂಗಡಿಯಲ್ಲಿದ್ದ ನಿರ್ಮಲಾ ಅವರು ಗಾಯಗೊಂಡರು.
ಅಪಘಾತ ನೋಡಿದ ಜನರು ನಿರ್ಮಲಾ ಅವರನ್ನು ಉಪಚರಿಸಿ ೧೦೮ ವಾಹನದ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಕಾರು ಅಂಗಡಿಗೆ ನುಗ್ಗುವ ಮುನ್ನ ಒಮ್ಮೆ ಪಲ್ಟಿಯಾಗಿದ್ದು, ರಸ್ತೆ ಅಂಚಿನಲ್ಲಿದ್ದ ಬೈಕುಗಳನ್ನು ಜಖಂ ಮಾಡಿದೆ. ಬೈಕು ಕಾರಿನ ಅಡಿ ಸಿಲುಕಿದೆ. ಅಂಗಡಿಗೆ ಹೊದಿಸಲಾಗಿದ್ದ ಮೇಲ್ಚಾವಣಿಯೂ ಹಾರಿ ಹೋಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಪ್ರಕರಣ ಕುಮಟಾ ಪೋಲಿಸ ಠಾಣೆಯಲ್ಲಿ ದಾಖಲಾಗಿದೆ.