ಬೆಂಗಳೂರು : ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೊಸ ಸಿನಿಮಾ ‘ಕ್ರಿಮಿನಲ್’ ಮಂಗಳವಾರ ಬೆಂಗಳೂರಿನ ಬಸವನಗುಡಿ ಅನ್ನಪೂರ್ಣ ನವ ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಮುಹೂರ್ತ ಶುರುಗೊಂಡಿದೆ. ಉತ್ತರ ಕರ್ನಾಟಕದ ನೈಜ ಘಟನೆಯಾಧಾರಿತವಾಗಿರುವ ಈ ಚಿತ್ರದಲ್ಲಿ ನಟಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಗೋಲ್ಡ್ ಮೈನ್ ಟೆಲಿಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಧ್ರುವ ಅವರ ಏಳನೇ ಚಿತ್ರ ಎಂಬ ವಿಶೇಷತೆಯನ್ನೂ ಹೊಂದಿದೆ.
ಮುಹೂರ್ತದ ಬಳಿಕ ನಿರ್ದೇಶಕ ರಾಜ್ ಗುರು ಮಾತನಾಡಿ,“ಕಥೆ ಕೇಳುತ್ತಿದ್ದಂತೆಯೇ ಧ್ರುವ ಸರ್ ಕೂಡಲೇ ಒಕೆ ಮಾಡಿದರು. ನಂತರ ಸೆಲ್ಫಿ ತೆಗೆದುಕೊಂಡಾಗ ನನಗೆ ಜವಾಬ್ದಾರಿ ಎಂಬ ಭಯ ಬಂತು. ಉತ್ತರ ಕರ್ನಾಟಕದ ಸಂಸ್ಕೃತಿ, ಭಾಷೆಯೊಳಗೆ ಇರುವ ಕಥೆ. ಇದು ನನ್ನ ಎರಡನೇ ಸಿನಿಮಾ. ಜನರು ನಮ್ಮ ಜೊತೆ ಇರಲಿ” ಎಂದು ಹೇಳಿದರು.
ನಿರ್ಮಾಪಕ ಮನೀಶ್ ತಮ್ಮ ಸಂತೋಷ ಹಂಚಿಕೊಂಡು, “ಧ್ರುವ ಸರ್ ಸಿನಿಮಾ ಮಾಡೋಣ ಎಂದಾಗ ನನಗೆ ಶಾಕ್ ಆಯ್ತು. ಕನ್ನಡ ಸಿನಿ ಜಗತ್ತಿನಲ್ಲಿ ನಿರ್ಮಾಪಕನಾಗಿರುವುದು ನನ್ನ ಕನಸು ಬೇಗನೆ ನನಸಾಗುತ್ತಿದೆ” ಎಂದರು.
ನಟಿ ರಚಿತಾ ರಾಮ್ ಮಾತನಾಡಿ, “ಎಂಟು ವರ್ಷಗಳ ನಂತರ ನನ್ನ ಒಳ್ಳೆಯ ಸ್ನೇಹಿತ ಧ್ರುವ ಅವರ ಜೊತೆ ಚಿತ್ರ ಮಾಡ್ತಿರುವುದು ತುಂಬಾ ಖುಷಿ. ದೃಶ್ಯ, ಪಾತ್ರ ಎಲ್ಲವೂ ಎಕ್ಸ್ ಪಿರಿಮೆಂಟ್. ಫಸ್ಟ್ ಧ್ರುವ ಸರ್ ಕರೆ ಮಾಡಿದ್ರು, ಕಥೆ ಕೇಳುವಷ್ಟಕ್ಕೆ ನಾನು ಒಪ್ಪಿಕೊಂಡೆ. ಇದು ಧ್ರುವ ಅವರ ಕರಿಯರ್‌ನ ಒಂದರ್ಶ್ರೇಷ್ಠ ಪಾತ್ರವಾಗಲಿದೆ” ಎಂದರು.
ಧ್ರುವ ಸರ್ಜಾ ತಮ್ಮ ಪಾತ್ರದ ಬಗ್ಗೆ ಮಾತನಾಡಿ, “ಉತ್ತರ ಕರ್ನಾಟಕದ ಹಾವೇರಿ–ಹಾನಗಲ್ ಪ್ರದೇಶದಲ್ಲಿ ನಡೆದ ನೈಜ ಪ್ರೇಮಕಥೆಯನ್ನು ಆಧರಿಸಿಕೊಂಡು ಸಿನಿಮಾ ಮಾಡ್ತಿದ್ದೀವಿ. 99% ನೈಜವಾಗಿ ಕಂಡದ್ದು ಹಾಗೆಯೇ ಚಿತ್ರದಲ್ಲಿರುತ್ತೆ. ನಾನು ಸಂಪೂರ್ಣ ಉತ್ತರ ಕರ್ನಾಟಕದ ಭಾಷೆಯಲ್ಲೇ ಪಾತ್ರ ನಿರ್ವಹಿಸುತ್ತಿದ್ದೇನೆ. ನನ್ನ ಪಾತ್ರ ‘ಶಿವ’ — ಒಬ್ಬ ಹಳ್ಳಿಹೈದನ ಪಾತ್ರ. ರಚಿತಾ ‘ಪಾರ್ವತಿ’ ಪಾತ್ರದಲ್ಲಿದ್ದಾರೆ” ಎಂದು ತಿಳಿಸಿದರು.
ಚಿತ್ರದ ಮೊದಲ ಸನ್ನಿವೇಶದಲ್ಲಿ ನಾಯಕ ತನ್ನ ಭಾವಭರಿತ ಸಂಭಾಷಣೆಯೊಂದರಲ್ಲಿ ನಾಯಕಿಯ ಜುಟ್ಟು ಹಿಡಿದು ಮಾತನಾಡುವ ದೃಶ್ಯ ಚಿತ್ರೀಕರಿಸಲಾಗಿದೆ.
ಈ ಹಿಂದೆ ಧ್ರುವನಿಗೆ ‘ಕೆರೆಬೇಟೆ’ ನೀಡಿದ್ದ ನಿರ್ದೇಶಕ ರಾಜ್ ಗುರು ಈಗ ‘ಕ್ರಿಮಿನಲ್’ಗೂ ನಿರ್ದೇಶನ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತ, ವೈದಿ ಛಾಯಾಗ್ರಹಣ, ರವಿವರ್ಮಾ–ವಿಕ್ರಂ ಮೋರ್ ಸಾಹಸ ಸಂಯೋಜನೆ ನೀಡುತ್ತಿದ್ದಾರೆ.
ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
