ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಸಿ ಉತ್ಪನ್ನಗಳ ಸಾಲಿಗೆ ಸೇರಿಸಿದ ನಿವೇದನ್
: ಕವಿತಾ ಪ್ರಶಾಂತ್
ಈತ ಅರೇಕಾ ಚಾಯ್‌ವಾಲ. ಮಲೆನಾಡಿನ ಕುಗ್ರಾಮವೊಂದರ ಯುವಕ ಅಡಿಕೆಯಿಂದ ಚಹಾ ತಯಾರಿಸಿ ಉತ್ಕೃಷ್ಟ ದೇಸಿ ಉತ್ಪನ್ನಗಳ ಸಾಲಿಗೆ ಸೇರಿಸಿದ ಯುವಕನ ಯಶೋಗಾಥೆ ಇದು.
ಪ್ರಧಾನಿ ನರೇಂದ್ರ ಮೋದಿ ಚಾಯ್ ಮಾರುತ್ತಿದ್ದರು ಎನ್ನುವ ಕಾರಣಕ್ಕೆ ಅವರನ್ನು ಚಾಯ್‌ವಾಲ ಎಂದು ಕರೆದು ವಿಪಕ್ಷದವರು ಛೇಡಿಸಿದ್ದುಂಟು. ಅಡಿಕೆಯಿಂದ ಚಹಾ ಸಿದ್ಧಪಡಿಸಿ ಮಲೆನಾಡ ಪುಟ್ಟ ಗ್ರಾಮದ ಯುವಕ ನಿವೇದನ್ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶವ್ಯಾಪಿ ಸುದ್ದಿ ಮಾಡಿದ್ದು ಇತಿಹಾಸ.
ಕಳೆದ 10 ವರ್ಷಗಳ ಹಿಂದೆ ಇನ್ನೇನೂ ಅಡಿಕೆ ನಿಷೇಧ ಆಗಿಯೇ ಹೋಯ್ತು ಎನ್ನುವ ಸಂದರ್ಭದಲ್ಲೆ ಅಡಿಕೆಗೆ ಚಿನ್ನದ ಬೆಲೆ ಸಿಗುವ ಮೂಲಕ ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿತ್ತು. ಅದೇ ವೇಳೆ ಅಡಿಕೆಯಿಂದ ಚಹಾ ಸಿದ್ಧಪಡಿಸುವ ಮೂಲಕ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನ ಮಾರುಕಟ್ಟೆಗೆ ಲಗ್ಗೆ ಇಡುವಂತೆ ಮಾಡಿದ್ದು ನಿವೇದನ್.
ಅಡಿಕೆ ಧಾರಣೆ ಕುಸಿದಾಗಲೆಲ್ಲಾ ಅಡಿಕೆಯ ಮೌಲ್ಯವರ್ಧನೆ ಬಗ್ಗೆಯೇ ಚರ್ಚೆ ಆಗುತ್ತಿತ್ತು. ಕೇವಲ ತಾಂಬೂಲ ಹಾಗೂ ಗುಟ್ಕಾ ತಯಾರಿಕೆಗೆ ಸೀಮಿತವಾಗಿದ್ದ ಅಡಿಕೆಯಿಂದ ಚಹಾ ತಯಾರಿಸಬಹುದು ಎಂಬುದನ್ನು ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದ ನಿವೇದನ್ ಸಾಧಿಸಿ ತೋರಿಸಿದ್ದರು.
ಸಂಶೋಧನೆಯ ಫಲ: ತೀರ್ಥಹಳ್ಳಿ ಸಮೀಪದ ಮಂಡಗದ್ದೆಯ ಕೃಷಿ ಕುಟುಂಬದ ನಿವೇದನ್ ಫಾರ್ಮಸಿ ಪದವಿ ಪಡೆದು, ಆಸ್ಟ್ರೇಲಿಯಾಕ್ಕೆ ತೆರಳಿ ಮೆಲ್ಬೋನ್ ವಿವಿಯಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ಖಾಸಗಿ ಕಂಪನಿಯಲ್ಲಿ 2 ವಷಗಳ ಕಾಲ ಕೆಲಸ ಮಾಡಿ, ತಾಯ್ನಾಡಿಗೆ ಮರಳಿ ಇಲ್ಲಿಯೇ ಏನಾದರೂ ಸಾಧಿಸಬೇಕು ಎಂಬ ಛಲದ ಫಲವೇ ಅಡಿಕೆ ಟೀ.
ಬಳಿಕ ಇದೀಗ ಕಾರ್‌ಗಳಲ್ಲಿ ಬಳಸುವ ಸುಗಂಧದ್ರವ್ಯ ಉತ್ಪಾದನೆ ಮಾಡುತ್ತಿದ್ದು, ದೇಶದಲ್ಲೆ ಗಮನಸೆಳೆದಿದ್ದಾರೆ. ಚಹಾ ಪೌಡರ್ ತಯಾರಿಗೆ ಬೆಟ್ಟೆ ಅಡಿಕೆಯನ್ನು ಬಳಸಿ ಕೊಂಡಿದ್ದರು. ಗ್ರೀನ್ ಟೀ ಮಾದರಿಯಲ್ಲೆ ಈ ಚಹಾ ಪಡಿಯನ್ನು ಸಿದ್ಧಪಡಿಸಿದ್ದರು. ಶೇ. 80ರಷ್ಟು ಅಡಿಕೆ ಮತ್ತು ಸುವಾಸನೆಗೆ ಶೇ. 20ರಷ್ಟು ಶುದ್ಧ ಆಯುರ್ವೇದಿಕ್ ಗಿಡಮೂಲಿಕೆ ಬಳಕೆ ಮಾಡಲಾಗಿದೆ.
ಬೆಲೆಯೂ ಅಗ್ಗ: ಅಡಿಕೆಗೆ ಚಿನ್ನದ ಬೆಲೆ ಇದ್ದರೆ, ಅಡಿಕೆಯ ಉಪಉತ್ಪನ್ನಗಳಿಗೆ ಇನ್ನೆಷ್ಟು ಬೆಲೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಅರೆಕಾ ಟೀ ಪುಡಿ ಮಾತ್ರ ಅಗ್ಗದ ಬೆಲೆ ಯಲ್ಲೆ ತಯಾರಿಸಲಾಗಿದೆ. ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಹೊಸ ಉತ್ಪನ್ನ ದೊರೆಯಲಿದೆ. 10 ಟೀ ಬ್ಯಾಗ್‌ಗಳಿಗೆ 75 ರೂ., 30 ಟೀ ಬ್ಯಾಗ್‌ಗಳಿಗೆ 210 ರೂ. ಚಹಾ ಸೊಪ್ಪಿನಲ್ಲಿ ಇರುವ ಹಾಗೆಯೇ ಟ್ಯಾನಿನ್ ಎನ್ನುವ ಅಂಶ ಅಡಕೆಯಲ್ಲಿದೆ.
ಟ್ಯಾನಿನ್ ಅಂಶವನ್ನು ಉಳಿಸಿಕೊಂಡು ಚಹಾ ಪೌಡರ್ ಸಿದ್ಧಪಡಿಸಲಾಗಿದೆ. ಇದು ಜೀರ್ಣಶಕ್ತಿಗೂ ಒಳ್ಳೆ ಯದು. ಮಧುಮೇಹ ಉಳ್ಳವರು ಕೂಡ ಬಳಸು ವಂತೆ ಪ್ರತ್ಯೇಕ ಪ್ಯಾಕ್‌ಗಳಲ್ಲಿ ಅರೇಕಾ ಟೀ ಸಿದ್ಧಪಡಿಸಲಾಗಿದೆ.
ಉತ್ಕೃಷ್ಟ ದೇಶೀಯ ಉತ್ಪಾದನೆ ಪುರಸ್ಕಾರ: ಕಳೆದ 10 ವರ್ಷಗಳ ಹಿಂದೆ ದೆಹಲಿಯ ಫೆಡರೇಷನ್ ಹೌಸ್‌ನಲ್ಲಿ ಆಲ್ ಇಂಡಿಯಾ ಟೆಕ್ನಿಕಲ್ ಮ್ಯಾನೇಜ್ ಮೆಂಟ್ ಕೌನ್ಸಿಲ್ ವತಿಯಿಂದ ಆಯೋಜಿಸಿದ್ದ ಮೇಕ್ ಇನ್ ಇಂಡಿಯಾ ಕಾರ್ಪೊರೇಟ್ ಮೀಟ್‌ನಲ್ಲಿ ಪ್ರಧಾನಿ ಮೋದಿ ಅವರ ಪರಿ ಕಲ್ಪನೆಯ ಮೇಕ್ ಇನ್ ಇಂಡಿಯಾಕ್ಕೆ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ವ್ಯಕ್ತಿ ನಿವೇದನ್ ನೆಂಪೆಯಾಗಿದ್ದರು.
ನವದೆಹಲಿಗೆ ತೆರಳಿದ್ದ ಅವರು, ಅಲ್ಲಿ ಅಡಿಕೆ ಚಹಾ ಪ್ರಾತ್ಯ ಕ್ಷತೆ ನಡೆಸಿಕೊಟ್ಟರಲ್ಲದೇ, ರಾಷ್ಟçದ ವಿವಿಧ ಕಡೆಗಳಿಂದ ಆಗಮಿಸಿದ್ದವರು ಅಡಿಕೆ ಚಹಾ ಕುಡಿದು ಆಸ್ವಾದಿಸಿದರು. ಅಡಿಕೆ ಚಹಾವನ್ನು 2015ರ ಅತ್ಯಂತ ಉತ್ಕೃಷ್ಟ ದೇಶೀಯ ಉತ್ಪಾದನೆ ಎಂದು ಗುರುತಿಸಿ ಪುರಸ್ಕಾರ ಘೋಷಿಸಲಾಯಿತು. ಉತ್ತಮ ತೋಟಗಾರಿಕಾ ಉತ್ಪನ್ನ ಪ್ರಶಸ್ತಿ ಸೇರಿದಂತೆ 6 ರಾಷ್ಟ್ರೀಯ ಪುರಸ್ಕಾರಗಳು ಅವರಿಗೆ ಸಂದಿವೆ.
ವಿದೇಶಕ್ಕೆ ಅತಿ ಹೆಚ್ಚು ರಫ್ತು : ಅಡಿಕೆ ಚಹಾ ಪೌಡರ್ ವಿದೇಶಕ್ಕೆ ಅತಿ ಹೆಚ್ಚು ರಫ್ತು ಆಗುತ್ತಿದೆ. ಕಡಿಮೆ ದರದಲ್ಲಿ ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಬೇಕು. ಆಗ ಮಾತ್ರ ಬೇರೆ ಉತ್ಪನ್ನಗಳ ಜೊತೆಗೆ ಸ್ಪರ್ಧಿ ಸಲು ಸಾಧ್ಯ ಎಂದು ನಿವೇದನ್ ಹೇಳುತ್ತಾರೆ. ಅಲ್ಲದೇ, ತೀರ್ಥಹಳ್ಳಿ, ಬೆಂಗಳೂರು, ಉಡುಪಿಯಲ್ಲಿ ಕಾರ್‌ಗಳಲ್ಲಿ ಬಳಸುವ ಸುಗಂಧದ್ರವ್ಯ ಉತ್ಪಾದನಾ ಘಟಕಗಳನ್ನು ಹೊಂದಿರುವ ನಿವೇದನ್, 200ಕ್ಕೂ ಜನರಿಗೆ ಉದ್ಯೋಗ ನೀಡಿದ್ದಾರೆ.
ಎಂಟೆಕ್ ಪದವೀಧರರು ಇವರ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅರೇಕಾ ಟೀ ಜೊತೆಗೆ ಭಾರತದಲ್ಲೆ ಅತಿ ಹೆಚ್ಚು ಕಾರ್ ಪರ್ಫ್ಯೂಮ್ ಉತ್ಪಾದನಾ ಉದ್ಯಮಿಯಾಗಿ ನಿವೇದನ್ ಹೊರಹೊಮ್ಮಿದ್ದಾರೆ.
