Home ವಿಶೇಷ ಸುದ್ದಿ ಹನ್ನೊಂದು ದೇಶಕ್ಕೆ ಚಕ್ಕುಲಿ ಕಳಿಸುವ `ಚಕ್ಕುಲಿ ಅನ್ನಪೂರ್ಣ’

ಹನ್ನೊಂದು ದೇಶಕ್ಕೆ ಚಕ್ಕುಲಿ ಕಳಿಸುವ `ಚಕ್ಕುಲಿ ಅನ್ನಪೂರ್ಣ’

0
ನವೆಂಬರ್ 07ರಂದು ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕನ್ನಡ ನಾಡಿನ ಚಿನ್ನದ ಸಾಧಕರು ಅಡಿ ಪ್ರಕಟವಾದ ಲೇಖನ

ಓದಿದ್ದು ಪಿಯುಸಿ, ಮಾಡ್ತಿರೋದು ಚಕ್ಕುಲಿ ಉದ್ದಿಮೆ, 13ಕ್ಕೂ ಹೆಚ್ಚು ಜನರಿಗೆ ಕೆಲಸ | ಇದು ಕುರುಕುರು ಉತ್ಪನ್ನ ಗೆದ್ದ ಕತೆ

ಗಂಡ ಫೈನಾನ್ಸ್ ಸಂಸ್ಥೆಯಲ್ಲಿ ಮ್ಯಾನೇಜರ್, ಜೀವನ ಸಾಗಿಸೋದಕ್ಕೆ ಯಾವುದೇ ಹಣದ ಕೊರತೆಯಾಗಲೀ, ಆರ್ಥಿಕ ಜಂಜಾಟಗಳಾಗಲೀ ಇರಲಿಲ್ಲ. ಇದೆಲ್ಲ ನಿನಗ್ಯಾಕೆ, ಇಷ್ಟು ಕಷ್ಟ ಪಡೋದ್ಯಾಕೆ, ಆರಾಮಾಗಿರು ಎಂದು ಮನೆಮಂದಿಯೆಲ್ಲ ಹೇಳಿದಾಗಲೂ ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಚಕ್ಕುಲಿ ಸಾಮ್ರಾಜ್ಯ ಕಟ್ಟಿ ನಿಲ್ಲಿಸಿ, ಈಗ 11 ದೇಶಗಳಿಗೆ ತಮ್ಮ ಕುರುಕುರು ಉತ್ಪನ್ನಗಳನ್ನು ಕಳಿಸಿಕೊಡುತ್ತಿರುವ ಚಕ್ಕುಲಿ ಅನ್ನಪೂರ್ಣ ಅವರ ಛಲ ಬಿಡದ ಸ್ಫೂರ್ತಿದಾಯಕ ಕತೆ ಇದು.

`ಯಾವುದೇ ಉತ್ಪನ್ನದ ಗುಣಮಟ್ಟ (ಕ್ವಾಲಿಟಿ) ಚೆನ್ನಾಗಿದ್ದರೆ, ಅದನ್ನು ಸಾಮಾನ್ಯ ಜನರು ಕೂಡ ಕೊಂಡುಕೊಳ್ಳುವಂಥ ಬೆಲೆಗೆ ಮಾರಾಟ ಮಾಡಿದರೆ ಯಾವುದೇ ಉದ್ಯಮವಾದರೂ ಅದು ಯಶಸ್ಸು ಕಾಣುತ್ತದೆ’ ಎನ್ನುತ್ತಾರೆ ಚಕ್ಕುಲಿ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಅನ್ನಪೂರ್ಣ ಅವರು. ಇಲ್ಲಿಯತನಕ ಇವರಿಗೆ ಯಾವುದೇ ದೊಡ್ಡ ಅಂಗಡಿ ಇಲ್ಲ. ಗುಲ್ಬರ್ಗಾದ ಬಾಲಾಜಿನಗರದಲ್ಲಿರುವ ಯಾರಿಗೂ ಕಾಣದಂಥ ಮನೆಯೊಂದರಲ್ಲಿ ಅನ್ನಪೂರ್ಣ ಅವರ ಕೆಲಸ.

ಚಕ್ಕುಲಿ ಸೇರಿದಂತೆ ಹತ್ತಕ್ಕೂ ಹೆಚ್ಚು ಥರದ ಕುರುಕುರು ರುಚಿಕರ ತಿನಿಸುಗಳು ಇಲ್ಲಿ ತಯಾರಾಗುತ್ತವೆ. ಯಾರಿಗೂ ಕಾಣದ ಕಡೆ ಇವರು ತಮ್ಮ ಕಾರ್ಖಾನೆ ಮಾಡಿಕೊಂಡಿದ್ದಾರಾದರೂ ಅನ್ನಪೂರ್ಣ ಅವರ ಉತ್ಪನ್ನಗಳ ರುಚಿ ಆ ಕಾಣದ ಜಾಗವನ್ನೂ ಜನರು ಹುಡುಕಿಕೊಂಡು ಬರುವಂತೆ ಮಾಡುತ್ತದೆ.

ಹೇಗೆ ಶುರುವಾಯ್ತು?: ಸರಿಯಾಗಿ 16 ವರ್ಷಗಳ ಹಿಂದೆ ಶುರು ಮಾಡಿದ ಈ ಚಕ್ಕುಲಿ ಉದ್ಯಮವನ್ನು ಕಟ್ಟಿ ನಿಲ್ಲಿಸಲು ಅನ್ನಪೂರ್ಣ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪ್ರಾರಂಭದ ಎರಡು ವರ್ಷ ಒಬ್ಬರೇ ಎಲ್ಲವನ್ನೂ ಮಾಡುತ್ತಿದ್ದರು. ಮಾಡಿದ ಉತ್ಪನ್ನಗಳನ್ನು ಅಂಗಡಿಗಳಿಗೆ ಮಾರಾಟಕ್ಕೆಂದು ಒಯ್ದರೆ `ಬೇಡ’ ಅನ್ನೋ ತಿರಸ್ಕಾರ.

ಅಷ್ಟಾಗ್ಯೂ ಆರಂಭದ ಕೆಲ ವರ್ಷಗಳಲ್ಲಿ ಮಾರಾಟಕ್ಕೆಂದು ಒಬ್ಬ ಮಾರ್ಕೆಟಿಂಗ್ ಅವರನ್ನು ಇಟ್ಟುಕೊಂಡು ಅಂಗಡಿಗಳಿಗೆಲ್ಲ ಓಡಾಡಿ ಮಾರಾಟ ಮಾಡಲು ಅನ್ನಪೂರ್ಣ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಆದರೆ ಇಂದು 350ಕ್ಕೂ ಹೆಚ್ಚು ಜನರಿಂದ ಇವರ ಚಕ್ಕುಲಿಯ ಮಾರ್ಕೆಟಿಂಗ್ ನಡೆಯುತ್ತದೆ, ಅಂದರೆ 350ಕ್ಕೂ ಹೆಚ್ಚು ಮಂದಿ ತಾವಾಗೇ ಬಂದು ಅನ್ನಪೂರ್ಣ ಅವರ ಉತ್ಪನ್ನಗಳನ್ನು ಒಯ್ದು ಮಾರಾಟ ಮಾಡುತ್ತಾರೆ.

ಬ್ರ್ಯಾಂಡ್ ನೇಮ್ ಇಲ್ಲ: ಇಂದು ಅನ್ನಪೂರ್ಣ ಅವರ ಚಕ್ಕುಲಿಗೆ ರಾಜ್ಯದ ಮೂಲೆಮೂಲೆಯಿಂದ ಬೇಡಿಕೆಯಿದೆ. ಸರಿಸುಮಾರು 11 ದೇಶಗಳಿಗೂ ಇವರ ಕುರುಕುರು ಉತ್ಪನ್ನಗಳು ಹೋಗುತ್ತವೆ. ಒಬ್ಬರೇ ನಿಂತು ಕಟ್ಟಿದ ಉದ್ದಿಮೆಯಲ್ಲಿ ಇವತ್ತು 13ಕ್ಕೂ ಹೆಚ್ಚು ಮಂದಿಗೆ ಅನ್ನಪೂರ್ಣ ಅವರು ಕೆಲಸ ಕೊಟ್ಟಿದ್ದಾರೆ. ದೀಪಾವಳಿ, ಪಂಚಮಿಯ ಟೈಮಲ್ಲಂತೂ ಇನ್ನೂ ಹೆಚ್ಚಿನ ಜನ ಬಂದು ಕೆಲಸ ಮಾಡ್ತಾರೆ. ಆದರೆ ವಿಶೇಷವೇನು ಗೊತ್ತೆ? ಅನ್ನಪೂರ್ಣ ಅವರ ದಿ ಫೇಮಸ್ ರುಚಿಕರ ಚಕ್ಕುಲಿಗೆ ಹಾಗೂ ಉತ್ಪನ್ನಗಳಿಗೆ ಯಾವುದೇ ಬ್ರ್ಯಾಂಡ್ ಹೆಸರು ಇಲ್ಲ. ಮಾರಾಟಗಾರರಿಗೆ ಯಾವುದೇ ಹೆಸರು ಇತ್ಯಾದಿಗಳನ್ನು ಬಯಸದೆ ತಮ್ಮ ಉತ್ಪನ್ನಗಳನ್ನು ಇವರು ತಯಾರಿ ಮಾಡಿಕೊಡುತ್ತಾರೆ. ಅದನ್ನು ಆಯಾಯಾ ಮಾರಾಟಗಾರರು ಅವರವರ ಬ್ರಾö್ಯಂಡ್ ನೇಮ್‌ಗಳಲ್ಲಿ ಮಾರಾಟ ಮಾಡಿಕೊಳ್ಳುತ್ತಾರೆ.

ಏನೆಲ್ಲಾ ಸಿಗುತ್ತವೆ?: ಅನ್ನಪೂರ್ಣ ಅವರು ಚಕ್ಕುಲಿಗೆಂದೇ ಫೇಮಸ್ ಆಗಿದ್ದಾರೆ ಹೌದು. ಆದರೆ ಅವರ ಹತ್ತಿರ ಚಕ್ಕುಲಿ ಒಂದೇ ತಯಾರಾಗುವುದಿಲ್ಲ. ಅದರ ಜತೆಗೆ ವಿವಿಧ ಥರದ ಚಟ್ನಿ ಪುಡಿಗಳು, ಮೆಂತೆ ಹಿಟ್ಟು, ಗಾಠೆ, ಖಾರಾಬುಂದೆ, ಶಂಕರಪೊಳೆ, ಮಿಕ್ಸ್ಚರ್, ಮಂಡಕ್ಕಿ, ಶೇವ್, ಅವಲಕ್ಕಿ ಸೇರಿದಂತೆ ಇನ್ನೂ ಹಲವಾರು ಉತ್ಪನ್ನಗಳನ್ನು ಅವರು ತಯಾರಿಸುತ್ತಾರೆ. ಚಕ್ಕುಲಿಯಷ್ಟೇ ಇವುಗಳಿಗೂ ಬೇಡಿಕೆ ಇದೆ ಎಂದರೆ ನೀವು ನಂಬಲೇ ಬೇಕು.

ಮುಂದಿನ ಗುರಿ ಜೋಳದ ಅವಲಕ್ಕಿ: ಜೋಳದಲ್ಲೂ ಅವಲಕ್ಕಿ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಅನ್ನಪೂರ್ಣ ಅವರ ಮುಂದಿನ ಗುರಿಯೇ ಈ ಉತ್ಪನ್ನವನ್ನು ಲಾಂಚ್ ಮಾಡುವುದು. ಜತೆಗೆ ಈ ಚಕ್ಕುಲಿ ಉದ್ದಿಮೆಯನ್ನು ಇನ್ನೂ ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವೂ ಅವರಲ್ಲಿದೆ.

ಶೂನ್ಯ ಬಂಡವಾಳ, ಆತ್ಮವಿಶ್ವಾಸವೇ ಇವರ ಇನ್ವೆಸ್ಟ್‌ಮೆಂಟ್‌: ಇದು ಸತ್ಯ. ಇಂದು ನಾನಾ ದೇಶಗಳಿಗೆ ಚಕ್ಕುಲಿ ಹಾಗೂ ಇನ್ನಿತರ ಉತ್ಪನ್ನಗಳನ್ನು ಕಳಿಸಿಕೊಡುವ ಅನ್ನಪೂರ್ಣ ಅವರು ತಮ್ಮ ಉದ್ದಿಮೆ ಶುರು ಮಾಡಿದ್ದು ಶೂನ್ಯ ಬಂಡವಾಳದಿಂದ. ಅಂದರೆ, ಝೀರೋ ಇನ್ವೆಸ್ಟ್ಮೆಂಟ್‌ನಿಂದ. ಅವರ ಹತ್ತಿರ ಇದ್ದದ್ದು ಆತ್ಮವಿಶ್ವಾಸ ಒಂದೇ. ಹಾಗಾದರೆ ಈ ದಾರಿಯಲ್ಲಿ ಅನ್ನಪೂರ್ಣ ಅವರಿಗೆ ಹೊಡೆತಗಳು ಬಿದ್ದೇ ಇಲ್ಲವೇ? ಖಂಡಿತ ಬಿದ್ದಿವೆ.

ಪ್ರಾರಂಭದಲ್ಲಿ ಶೇಂಗಾ ಹಿಂಡಿಯನ್ನು ನಾನೇ ಕುಟ್ಟಿ ಮಾಡಿಕೊಂಡು ಹೋದಾಗ, ಇಲ್ಲ ಇದನ್ನು ಮಿಕ್ಸಿಯಲ್ಲಿ ಪುಡಿ ಮಾಡಿದ್ದು, ನಾವು ತಗೊಳ್ಳಲ್ಲ ಎಂದು ಹೇಳುತ್ತಿದ್ದರು. ಇದೇ ರೀತಿ ಹಲವಾರು ಬಾರಿ ನನಗೆ ಆಗಿದೆ. ಆದರೆ ಎಷ್ಟೇ ಸಲ ಫೇಲ್ ಆದರೂ ಪ್ರಯತ್ನ ಬಿಡಬಾರದೆಂಬ ಜಿದ್ದು ನನ್ನಲ್ಲಿತ್ತು. ಮೆಹನತ್ (ಪ್ರಯತ್ನ) ಒಂದು ಇದ್ದುಬಿಟ್ಟರೆ ಯಾವ ಕೆಲಸದಲ್ಲಾದರೂ ಯಶಸ್ಸು ಸಾಧ್ಯ.’ ಈ ಪ್ರಯತ್ನವೇ ಅವರ ಆತ್ಮವಿಶ್ವಾಸಕ್ಕೆ ಬುನಾದಿಯಾಯಿತು, ಆ ಆತ್ಮವಿಶ್ವಾಸವೇ ಅವರ ಇನ್ವೆಸ್ಟ್ಮೆಂಟ್ ಕೂಡ ಆಯಿತು ಎನ್ನುವುದು ನಿಜಕ್ಕೂ ಅನೇಕರಿಗೆ ಮಾದರಿ ಅಲ್ಲವೇ?

NO COMMENTS

LEAVE A REPLY

Please enter your comment!
Please enter your name here

Exit mobile version