ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇಕಡ 25ರಷ್ಟು ಸುಂಕವನ್ನು ಘೋಷಿಸಿದ್ದು, ರಷ್ಯಾ ಜತೆಗೆ ಉತ್ತಮ ಸಂಬಂಧ ಇರಿಸಿಕೊಂಡಿದ್ದಕ್ಕೆ ಪೆನಾಲ್ಟಿ ಹಾಕುವುದಾಗಿ ಘೋಷಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಟ್ರುತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಈ ಮುಂಚೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್‌ನಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. 26 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದ್ದರು. ಆದರೆ ಅದನ್ನು ಜುಲೈ 9ರವರೆಗೆ ಅಮಾನತುಗೊಳಿಸಿತ್ತು. ನಂತರ ಈ ಅಮಾನತನ್ನು ಆಗಸ್ಟ್ 1 ರವರೆಗೆ ವಿಸ್ತರಿಸಲಾಗಿತ್ತು. ಇನ್ನು ಆ ಸಮಯದಲ್ಲಿ ಶೇ. 10ರ ಮೂಲ ಸುಂಕ ಅನ್ವಯಿಸುತ್ತಿತ್ತು. ಆಗಸ್ಟ್ 1 ಕ್ಕೆ ಅನ್ವಯ ಆಗುವಂತೆ ಈಗ ಟ್ರಂಪ್ ಭಾರತದ ಮೇಲೆ ಶೇ. 25 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತು ಶೇ.22.8ರಷ್ಟು ಹೆಚ್ಚಾಗಿ $25.51 ಬಿಲಿಯನ್‌ಗೆ ತಲುಪಿದೆ. ಇದೇ ಅವಧಿಯಲ್ಲಿ ಆಮದು ಶೇ.11.68ರಷ್ಟು ಏರಿಕೆಯಾಗಿ $12.86 ಬಿಲಿಯನ್ ಆಗಿದೆ. ಈ ಅಂಕಿಅಂಶಗಳು ಎರಡು ದೇಶಗಳ ನಡುವಿನ ವ್ಯಾಪಾರ ಸಂಬಂಧದ ಬೆಳವಣಿಗೆಯನ್ನು ತೋರಿಸುತ್ತವೆ. ಆದರೆ ಆಗಸ್ಟ್ 1ರಿಂದ ಅನ್ವಯ ಆಗುವ ಹೊಸ ಸುಂಕವು ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ
ಟ್ರಂಪ್ ಅವರ ಪೋಸ್ಟ್‌ನಲ್ಲೇನಿದೆ..? : “ನೆನಪಿಡಿ, ಭಾರತ ನಮ್ಮ ಸ್ನೇಹಿತ, ಆದರೆ ಕಳೆದ ಹಲವಾರು ವರ್ಷಗಳಿಂದ ನಾವು ಅವರೊಂದಿಗೆ ತುಲನಾತ್ಮಕವಾಗಿ ಕಡಿಮೆ ವ್ಯಾಪಾರ ಮಾಡಿದ್ದೇವೆ. ಏಕೆಂದರೆ ಭಾರತದ ಸುಂಕಗಳು ತುಂಬಾ ಹೆಚ್ಚಿವೆ. ಅದು ವಿಶ್ವದಲ್ಲೇ ಅತ್ಯಧಿಕವಾಗಿವೆ. ಅವು ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಹಿತಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಹೊಂದಿವೆ” ಎಂದು ಬರೆದಿದ್ದಾರೆ.
ಭಾರತವು ‘ತಮ್ಮಬಹುಪಾಲು ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದಲೇ ಖರೀದಿಸುತ್ತದೆ. ಹೀಗೆ ಮಾಡಿದರೆ ಮುಂದೊಂದು ದಿನ ಅವರು ದಂಡವನ್ನು ಎದುರಿಸಬೇಕಾಗುತ್ತದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಹತ್ಯೆಯನ್ನು ರಷ್ಯಾ ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಅವರು ಚೀನಾ ಜೊತೆಗೆ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ. ಎಲ್ಲವೂ ಒಳ್ಳೆಯದಲ್ಲ! ಆದ್ದರಿಂದ ಭಾರತವು ಆಗಸ್ಟ್ 1ರಿಂದ ಅನ್ವಯ ಆಗುವಂತೆ 25% ಸುಂಕ ಮತ್ತು ಜೊತೆಗೆ ದಂಡವನ್ನು ಹೊಂದಿರಲಿದೆ, ಈ ಮೇಲೆ ನೀಡಲಾದ ಕಾರಣಗಳಿಗಾಗಿ ದಂಡವನ್ನು ಸಹ ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದರ ಜೊತೆಗೆ ನಾನು ಹೇಳುತ್ತಿರುವ ಈ ವಿಷಯದ ಬಗ್ಗೆ ಗಮನ ಹರಿಸಿದ್ದಕ್ಕೆ ತಮಗೆ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ಅಧ್ಯಯನವು ಶೇ.20ರಷ್ಟು ಸ್ಥಿರ ಸುಂಕವು ಭಾರತದ ಜಿಡಿಪಿಯ ಮೇಲೆ 0.5% ನಷ್ಟವನ್ನು ಉಂಟುಮಾಡಬಹುದು ಸುಂಕದಲ್ಲಿ ಪ್ರತಿ 1% ಹೆಚ್ಚಳವು ರಫ್ತು ಪ್ರಮಾಣದಲ್ಲಿ 0.5% ಕುಸಿತಕ್ಕೆ ಕಾರಣವಾಗಬಹುದು ಎಂದು ಅಧ್ಯಯನವೊಂದು ಎಚ್ಚರಿಕೆ ನೀಡಿತ್ತು. ಬ್ರಿಕ್ಸ್ ನೀತಿಗಳು ಅಮೆರಿಕ ವಿರೋಧಿಯಾಗಿವೆ. ಡಾಲರ್ ಮೌಲ್ಯವನ್ನು ಕುಗ್ಗಿಸಲು ಬ್ರಿಕ್ಸ್ ಉದ್ದೇಶವಾಗಿದೆ ಎಂದಿದ್ದ ಟ್ರಂಪ್ ಬ್ರಿಕ್ಸ್ ಬೆಂಬಲಿಸೋ ರಾಷ್ಟ್ರಗಳು ಭವಿಷ್ಯದಲ್ಲಿ ಹೆಚ್ಚಿನ ತೆರಿಗೆ ಕಟ್ಟೋಕೆ ಸಿದ್ಧರಾಗಿ ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದಿದ್ದ ಟ್ರಂಪ್ ಭಾರತದ ಮೇಲೆ ತೆರಿಗೆಯ ಹೊರೆ ಹೊರಿಸಿದ್ದಾರೆ.