Home ನಮ್ಮ ಜಿಲ್ಲೆ ಕಲಬುರಗಿ ಕೆಟ್ಟ ಪದ ಬಳಸುವಾಗ‌ ಮನೆಯ ಹೆಣ್ಣುಮಕ್ಕಳು ನೆನಪಾಗುವುದಿಲ್ಲವೇ?

ಕೆಟ್ಟ ಪದ ಬಳಸುವಾಗ‌ ಮನೆಯ ಹೆಣ್ಣುಮಕ್ಕಳು ನೆನಪಾಗುವುದಿಲ್ಲವೇ?

0

ಕಲಬುರಗಿ: ನಟಿ ರಮ್ಯಾ ಅವರಿಗೆ ನಿಂದಿಸಿರುವ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಒಬ್ಬ ಮಹಿಳೆ ವಿರುದ್ಧ ಕೆಟ್ಟ ಪದ ಬಳಸುವಾಗ ಅವರ ಮನೆಯ ಹೆಣ್ಣು ಮಕ್ಕಳು ನೆನಪಿಗೆ ಬರುವುದಿಲ್ಲವೇ? ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ನೆಟ್ಟಿಗರಿಗೆ ಪ್ರಶ್ನಿಸಿದರು.

ರಮ್ಯಾ ಅವರಿಗೆ ನಿಂದಿಸಿರುವ ಪ್ರಕರಣದ ಕುರಿತು ಮಾತನಾಡಿರುವ ಅವರು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಮ್ಯಾಗೆ ಬೇಕಾಬಿಟ್ಟಿಯಾಗಿ ನಿಂದಿಸಿದ್ದಾರೆ. ರಮ್ಯಾ ಅವರ ವಿಡಿಯೋ ತೆಗೆದುಕೊಂಡು ಅವಮಾನಿಸಲಾಗಿದೆ. ಹೀಗಾಗಿ, ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೆಲ ಫೇಸ್‌ಬುಕ್ ಖಾತೆಗಳು ರದ್ದಾಗಿವೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಸಂದೇಶ ಹಾಕಬೇಕು ಎಂದು ಸಲಹೆ ನೀಡಿದ ಡಾ. ಚೌಧರಿ, ಆರೋಪ ಸಾಬೀತಾದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ ಎಂದರು.

ಎಸ್‌ಐಟಿ ತನಿಖೆಗಾಗಿ ಪತ್ರ: ಶ್ರೀಕ್ಷೇತ್ರ ಧರ್ಮಸ್ಥಳ ಪರಿಸರದಲ್ಲಿ ಶವಗಳ ಶೋಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯ ಮಹಿಳಾ ಆಯೋಗದಿಂದ ಪತ್ರ ಬರೆದು ತನಿಖೆಗೆ ಒತ್ತಾಯಿಸಿದೆ. ಒಂದು ತಂಡದವರು ನೀಡಿದ ಮಾಹಿತಿ ಆಧರಿಸಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದಾರೆ. ಈಗ ವರದಿ ಬರುವವರೆಗೂ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಡಾ. ಚೌಧರಿ ಹೇಳಿದರು.

ಘಟನೆಯ ಹಿನ್ನೆಲೆ?: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅಂದು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿಬಿದ್ದಿದ್ದರು. ಆದರೆ ಕಳೆದ ಕೆಲ ದಿನದಿಂದ ನಟಿ ರಮ್ಯಾ ಹಾಗೂ ದರ್ಶನ್‌ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಕುರಿತಂತೆ ಜಟಾಪಟಿ ನಡೆಯುತ್ತಿದೆ.

ಪೊಲೀಸ್ ಆಯುಕ್ತರಿಗೆ ಪತ್ರ: ನಟಿ ರಮ್ಯಾಗೆ ಅವಹೇಳನಕಾರಿ ಸಂದೇಶ ಕಳಿಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗದಿಂದ ಪೊಲೀಸ್ ಆಯುಕ್ತರಿಗೆ ಜುಲೈ 28ರಂದು ಪತ್ರ ಬರೆಯಲಾಗಿತ್ತು. ಪತ್ರದಲ್ಲಿ ಮಹಿಳಾ ಆಯೋಗ, ಮಾಜಿ ಸಂಸದೆ ಹಾಗೂ ನಟಿ ರಮ್ಯಾರವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿಯಾಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆಯಾಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿತ್ತು. ಈ ಪತ್ರವನ್ನು ರಮ್ಯಾ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version