Home ನಮ್ಮ ಜಿಲ್ಲೆ ಬೆಂಗಳೂರಿನಲ್ಲಿ‌ ದೇಶದ ಫಸ್ಟ್ ಕ್ವಾಂಟಮ್ ಸಿಟಿ

ಬೆಂಗಳೂರಿನಲ್ಲಿ‌ ದೇಶದ ಫಸ್ಟ್ ಕ್ವಾಂಟಮ್ ಸಿಟಿ

0

ಬೆಂಗಳೂರು: ಕ್ವಾಂಟಮ್ ಕಂಪ್ಯೂಟರ್ ಕ್ಷೇತ್ರದಲ್ಲಿ 2035ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ಕಾಂಗ್ರೆಸ್‌ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಸರ್ಕಾರ Q-ಸಿಟಿ (ಕ್ವಾಂಟಮ್) ನಗರಿಯನ್ನು ಸ್ಥಾಪಿಸಲು ಮುಂದಾಗಿದೆ.

ಕ್ವಾಂಟಮ್ ಇಂಡಿಯಾ ಶೃಂಗಸಭೆ 2025ರ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತು ಮಾಹಿತಿ ನೀಡಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಭೋಸರಾಜು, ಕ್ವಾಂಟಮ್ ಕಂಪ್ಯೂಟರ್ ವಲಯದಲ್ಲಿ 2 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ 2035ರ ವೇಳೆಗೆ ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಶೇ. 20ರಷ್ಟು ಪಾಲನ್ನು ಕರ್ನಾಟಕದ್ದಾಗಿಸಲು ಗುರಿ ಇಟ್ಟುಕೊಂಡು ಅದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕ್ವಾಂಟಮ್ ಸಿಟಿ ಸ್ಥಾಪನೆಯ ಮುಂದಿನ ಪ್ರಮುಖ ಅಂಶಗಳು

  • 2035ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿಸುವುದು ನಮ್ಮ ಗುರಿ
  • ಬೆಂಗಳೂರಿನ ಬಳಿ ಎಲ್ಲಾ ಮೂಲ ಸೌಕರ್ಯಗಳಿರುವ ಕ್ವಾಂಟಮ್ ನಗರಿ ಸ್ಥಾಪನೆ
  • ಈಗಾಗಲೇ ಐಐಎಸ್‌ಸಿ ಬೆಂಗಳೂರಿನಲ್ಲಿ ಕ್ವಾಂಟಮ್ ಸಂಶೋಧನಾ ಪಾರ್ಕ್ ರಚನೆ
  • ವರ್ಷಾಂತ್ಯಕ್ಕೆ ಕ್ವಾಂಟಮ್ ಚಿಪ್ ಫ್ಯಾಬ್ರಿಕೇಶನ್ ಸಾಮರ್ಥ್ಯಗಳ ಸ್ಥಾಪನೆ ನಿರೀಕ್ಷೆ

“ಇದಕ್ಕೆ ಪೂರಕವಾಗಿ ಸರ್ಕಾರ Q-ಸಿಟಿ (ಕ್ವಾಂಟಮ್) ನಗರಿಯನ್ನು ಬೆಂಗಳೂರಿನ ಬಳಿ ಸ್ಥಾಪಿಸಲಿದ್ದು, ಇಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ಇದು ಶೈಕ್ಷಣಿಕ ಸಂಸ್ಥೆಗಳು, ನಾವೀನ್ಯತಾ ಕೇಂದ್ರಗಳು, ಕ್ವಾಂಟಮ್ ಹಾರ್ಡ್‌ವೇರ್‌ಗಳಿಗಾಗಿ ಉತ್ಪಾದನಾ ಕ್ಲಸ್ಟರ್‌ಗಳು, ಪ್ರೊಸೆಸರ್‌ಗಳು ಮತ್ತು ಸಹಾಯಕಗಳು ಹಾಗೂ ಕ್ವಾಂಟಮ್ ಎಚ್.ಪಿ.ಸಿ. ಡೇಟಾ ಕೇಂದ್ರಗಳ ಸಹಯೋಗದೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಕ್ಲಸ್ಟರ್‌ಗಳನ್ನು ಸಂಯೋಜಿಸಲಿದೆ” ಎಂದರು.

“ನಾವೀನ್ಯತೆಗೆ ಹೆಸರಾದ ಬೆಂಗಳೂರಿನಲ್ಲಿ ಪ್ರಮುಖ ವಿಜ್ಞಾನ ಸಂಸ್ಥೆಗಳು, ಹಲವಾರು ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳಿದ್ದು, ಭಾರತದ ಕ್ವಾಂಟಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೆಂಗಳೂರಿನಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ದೇಶದ ಮೊದಲ ವಾಣಿಜ್ಯ ದರ್ಜೆಯ ಕ್ವಾಂಟಮ್ ಕಂಪ್ಯೂಟರ್‌ ಈಗಾಗಲೇ ತನ್ನ ವಾಣಿಜ್ಯ ಸೇವೆಗಳನ್ನು ಒದಗಿಸುತ್ತಿದೆ. ನಮ್ಮ ಕನ್ನಡಿಗ ಮತ್ತು ನಮ್ಮ ಸ್ವದೇಶಿ ಉದ್ಯಮವು ಅಭಿವೃದ್ಧಿಪಡಿಸಿದ ಈ ಕ್ವಾಂಟಮ್ ಕಂಪ್ಯೂಟರ್ ಕೇವಲ ಪರಿಕಲ್ಪನೆಯ ಪುರಾವೆಯಲ್ಲ, ಇದು ದೃಢನಿಶ್ಚಯಕ್ಕೆ ಸಾಕ್ಷಿಯಾಗಿದೆ” ಎಂದರು.

“ಕರ್ನಾಟಕ ಸರ್ಕಾರ ಐಐಎಸ್‌ಸಿ ಬೆಂಗಳೂರಿನಲ್ಲಿ ಕ್ವಾಂಟಮ್ ಸಂಶೋಧನಾ ಉದ್ಯಾನವನವನ್ನು ಸ್ಥಾಪಿಸುವ ಮೂಲಕ ಈ ತಂತ್ರಜ್ಞಾನಕ್ಕೆ ಈಗಾಗಲೇ ಮಹತ್ವದ ಬದ್ಧತೆಯನ್ನು ತೋರಿದೆ. ಈ ಸೌಲಭ್ಯವು 55ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಮತ್ತು 13 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಿದೆ. ವಾರ್ಷಿಕ 1,000ಕ್ಕೂ ಹೆಚ್ಚು ಕ್ವಾಂಟಮ್ ತಜ್ಞರಿಗೆ ತರಬೇತಿ ನೀಡುತ್ತಿದೆ. ದೀರ್ಘಾವಧಿಯಲ್ಲಿ ಇದನ್ನು ಮುಂದುವರಿಸಲು ಸರ್ಕಾರ 48 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿದೆ” ಎಂದು ತಿಳಿಸಿದರು.

“ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಲು ಈಗಾಗಲೇ ಕ್ವಾಂಟಮ್ ಮಾರ್ಗಸೂಚಿಯನ್ನು ಹೊರತರಲಾಗಿದೆ. ಆ ಮೂಲಕ ಈ ತಂತ್ರಜ್ಞಾನದ ಪ್ರಗತಿಗೆ ಸೂಕ್ತ ಅಡಿಪಾಯ ಹಾಕಿ, ಮೂಲ ಸೌಕರ್ಯ ಒದಗಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಿ ಕರ್ನಾಟಕವನ್ನು ಕ್ವಾಂಟಮ್ ಪವರ್‌ಹೌಸ್ ಮತ್ತು ರಫ್ತು ತಾಣವಾಗಿ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಳ್ಳಲಾಗಿದೆ” ಎಂದು ಹೇಳಿದರು.

ಈ ವರ್ಷದ ಅಂತ್ಯದ ವೇಳೆಗೆ ಕ್ವಾಂಟಮ್ ಚಿಪ್ ಫ್ಯಾಬ್ರಿಕೇಶನ್ ಸಾಮರ್ಥ್ಯಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಹೇಳಿದ ಸಚಿವರು, “ಜಾಗತಿಕ ಕ್ವಾಂಟಮ್ ಪವರ್‌ಹೌಸ್‌ ಆಗಿ ಕರ್ನಾಟಕವನ್ನು ಕೊಂಡೊಯ್ಯಲು ಉನ್ನತ ಮಾಧ್ಯಮಿಕ ಮಟ್ಟದಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ಟ್ರೀಮ್ ಲ್ಯಾಬ್ಸ್ ಉಪಕ್ರಮದ ಮೂಲಕ ಕ್ವಾಂಟಮ್ ಪಠ್ಯಕ್ರಮ ಪರಿಚಯಿಸಲಾಗುವುದು. ವಿದ್ಯಾರ್ಥಿಗಳಿಗೆ ಮೀಸಲಾದ ಡಿಎಸ್‌ಟಿ ಪಿಎಚ್‌ಡಿ ಫೆಲೋಶಿಪ್‌ಗಳನ್ನು ವಿಸ್ತರಿಸಲಾಗುವುದು. ಈ ಫೆಲೋಶಿಪ್‌ಗಳು ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಸಂವಹನ ಮತ್ತು ಕ್ವಾಂಟಮ್ ಸೆನ್ಸಿಂಗ್, ಕ್ವಾಂಟಮ್ ಸಾಧನಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ” ಎಂದು ತಿಳಿಸಿದರು.

“ಕೇಂದ್ರ ಸರ್ಕಾರವು ಸುಮಾರು 6,000 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ಆರಂಭಿಸಿದ್ದು, ಇದರ ಯಶಸ್ವಿ ಅನುಷ್ಠಾನಕ್ಕಾಗಿ ಮತ್ತು ರಾಜ್ಯಗಳನ್ನು ಬೆಂಬಲಿಸಲು ಕರ್ನಾಟಕದ ನೇತೃತ್ವದಲ್ಲಿ ನಾವೀನ್ಯತೆ ಮತ್ತ ವಿಕೇಂದ್ರೀಕೃತ ವಿಧಾನಗಳನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಬೇಕು” ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version