Home ಸುದ್ದಿ ರಾಜ್ಯ ಇ-ಪೌತಿ ಆಂದೋಲನ: ಭೂ ಒಡೆತನ ಬದಲಾವಣೆ ಸುಲಭ, ಬೇಕಾಗುವ ದಾಖಲೆಗಳು

ಇ-ಪೌತಿ ಆಂದೋಲನ: ಭೂ ಒಡೆತನ ಬದಲಾವಣೆ ಸುಲಭ, ಬೇಕಾಗುವ ದಾಖಲೆಗಳು

0

ಬೆಂಗಳೂರು: ಮುತ್ತಾತ, ತಾತ, ತಂದೆಯ ಹೆಸರಿನಲ್ಲಿರುವ ಭೂಮಿ ಇನ್ನೂ ಸಹ ವರ್ಗಾವಣೆಗೊಂಡಿಲ್ಲ. ಇದನ್ನು ಮಾಡಿಸಲು ಹೋದರೆ ಮಧ್ಯವರ್ತಿಗಳು ಸಾವಿರಾರು ರೂಪಾಯಿ ಹಣ ಕೇಳುತ್ತಾರೆ. ಭೂ ಹಕ್ಕು ವರ್ಗಾವಣೆಯಾಗದ ಕಾರಣ ಸರಿಯಾಗಿ ಸರ್ಕಾರಿ ಸವಲತ್ತುಗಳನ್ನು ಸಹ ಪಡೆಯುಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಹಲವು ಜನರು ಇಂತಹ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ.

ಆದರೆ ಈಗ ಕರ್ನಾಟಕ ಸರ್ಕಾರ ಸುಲಭವಾಗಿ, ಉಚಿತವಾಗಿ ಭೂ ಒಡೆತನ ಬದಲಾವಣೆ ಮಾಡಿಕೊಳ್ಳಲು ಇ-ಪೌತಿ ಆಂದೋಲನವನ್ನು ಆರಂಭಿಸಿದೆ. ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಉಚಿತವಾಗಿ ಪಹಣಿ ಪತ್ರವನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಕೃಷಿ ಜಮೀನುಗಳ ಮಾಲೀಕರು ಮೃತಪಟ್ಟಿದ್ದಲ್ಲಿ ಸದರಿ ಜಮೀನನ್ನು ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ಪ್ರಸ್ತುತ ಸರ್ಕಾರದಿಂದ ಇ-ಪೌತಿ ಆಂದೋಲನದ ಮೂಲಕ ಜಮೀನುಗಳನ್ನು ಉಚಿತವಾಗಿ ವಾರಸತ್ವದ ವಂಶಾವಳಿ ಪ್ರಕಾರ ಪಹಣಿ ಪತ್ರಿಕೆ ಮಾಡಿಕೊಡಲಾಗುತ್ತಿದೆ.

ಬೇಕಾಗುವ ದಾಖಲೆಗಳು: ಈ ರೀತಿಯ ಜಮೀನುಗಳನ್ನು ವಾರಸುದಾರರು ಕೂಡಲೇ ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ವಾರಸುದಾರರ ಆಧಾರ್ ಕಾರ್ಡ್ ಇತ್ಯಾದಿ ಪೂರಕ ಎಲ್ಲಾ ದಾಖಲೆಗಳನ್ನು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿಗಳ ಹತ್ತಿರ ಸಲ್ಲಿಸಬೇಕು.

ಆಗ ಭೂ ಮಾಲೀಕರು ಮೃತರಾಗಿರುವ ಜಮೀನುಗಳನ್ನು ವಾರಸುದಾರರಿಗೆ ಖಾತೆಯನ್ನು ಉಚಿತವಾಗಿ ಇ-ಪೌತಿ ಆಂದೋಲನದ ಮೂಲಕ ಪಹಣಿ ಮಾಡಿಸಿಕೊಳ್ಳಬಹುದಾಗಿರುತ್ತದೆ. ಜನರು ಈ ಬಗ್ಗೆ ಮಧ್ಯವರ್ತಿಗಳಿಗೆ ಅವಕಾಶ ಕೊಡದೇ ನೇರವಾಗಿ ಆಯಾ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳನ್ನು ಹಾಗೂ ರಾಜಸ್ವ ನಿರೀಕ್ಷಕರನ್ನು ಭೇಟಿ ಮಾಡಿ ಉಚಿತವಾಗಿ ನಿಮ್ಮ ಜಮೀನಿನ ಖಾತೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಇ-ಪೌತಿ ಆಂದೋಲನ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜಮೀನು ಮಾಲೀಕರಿಗೆ ಸುಲಭವಾಗಿ ದಾಖಲೆಗಳನ್ನು ಮಾಡಿಕೊಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಇ-ಪೌತಿ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಲಾಗಿದೆ.

ಎರಡು ಮೂರು ತಲೆಮಾರುಗಳಿಂದ ತಾತ, ಮುತ್ತಾತ, ತಂದೆಯ ಹೆಸರಿನಲ್ಲಿರುವ ಭೂಮಿ ಮಕ್ಕಳಿಗೆ ಕಾನೂನಾತ್ಮಕವಾಗಿ ವರ್ಗಾವಣೆಗೊಂಡಿರುವುದಿಲ್ಲ. ಇದರಿಂದಾಗಿ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಕನಿಷ್ಠ ಜಮೀನಿನ ಅಭಿವೃದ್ಧಿಗೆ ಬ್ಯಾಂಕ್‌ಗಳಿಂದಲೂ ಸಾಲ ಸಿಗುತ್ತಿಲ್ಲ.

ಜಮೀನು ಮಾಡುವ ಅನುಭವ ಇದ್ದರೂ ಸಹ ಪಿತ್ರಾರ್ಜಿತ ಆಸ್ತಿಯ ಹಕ್ಕು ಇಲ್ಲದ ಕಾರಣ ಸವಲತ್ತು ಸಿಗುತ್ತಿಲ್ಲ. ಆದ್ದರಿಂದ ಪೂರ್ವಿಕರಿಂದ ಜಮೀನು ಮಾಲೀಕತ್ವ ಕಾನೂನಾತ್ಮಕವಾಗಿ ಉಚಿತವಾಗಿ ಪಡೆಯಲು ಈ ಆಂದೋಲನ ಜಾರಿಗೊಳಿಸಲಾಗಿದೆ. ಕಂದಾಯ ಇಲಾಖೆ ಮನೆ ಬಾಗಿಲಿಗೆ ಇ-ಪೌತಿ ಎಂಬ ಹೆಸರಿನಲ್ಲಿ ಇದನ್ನು ಪ್ರಾರಂಭಿಸಿದೆ.

ಇ-ಪೌತಿ ಆಂದೋಲನಕ್ಕಾಗಿ ಕಂದಾಯ ಇಲಾಖೆ ಪ್ರತ್ಯೇಕ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶ ವಂಶವೃಕ್ಷದ ಆಧಾರದ ಮೇಲೆ ವಾರಸುದಾರರ ಮಾಹಿತಿಯನ್ನು ಸಂಗ್ರಹಿಸುತ್ತದೆ. ಆಧಾರ್ ಸಂಖ್ಯೆಯ ಮೂಲಕ ಒಟಿಪಿ ಪರಿಶೀಲನೆ ನಡೆಸುತ್ತದೆ. ಆದ್ದರಿಂದ ಯಾವುದೇ ಅಕ್ರಮಗಳಿಗೆ ಅವಕಾಶವೂ ಇರುವುದಿಲ್ಲ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ನಿರ್ದೇಶನದ ಮೇರೆಗೆ ಇ-ಪೌತಿ ಆಂದೋಲನವನ್ನು ಎಲ್ಲಾ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. ಈ ಯೋಜನೆಯಡಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ತೆರಳಿ, ವಾರಸುದಾರರಿಗೆ ಮೊಬೈಲ್ ಮೂಲಕ ಪೌತಿ ಖಾತೆಯನ್ನು ನೋಂದಾಯಿಸಲಿದ್ದಾರೆ. ಈ ಪ್ರಕ್ರಿಯೆಯಲ್ಲಿ ಆಧಾರ್ ಸೀಡಿಂಗ್‌ ಮೂಲಕ ಭೂಮಿ ಹಿಡುವಳಿಯ ನಿಖರ ಮಾಹಿತಿ ಸಂಗ್ರಹವಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version