ದೇಶದ ಅತಿದೊಡ್ಡ ಐಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಧಿಕಾರಿಗಳು ತಮ್ಮ ಆಡಳಿತ ಮಂಡಳಿ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಕರ್ನಾಟಕ ಕಾರ್ಮಿಕ ಪ್ರಾಧಿಕಾರಕ್ಕೆ ತಿಳಿಸಿದ್ದಾರೆ.
ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಕುರಿತು ಕೆಐಟಿಯು ಕಾರ್ಮಿಕ ಇಲಾಖೆಗೆ ದೂರು ನೀಡಿತ್ತು. ಈ ಕುರಿತು ಟಿಸಿಎಸ್‌ಗೆ ಕಾರ್ಮಿಕ ಅಧಿಕಾರಿಗಳು ನೋಟಿಸ್ ನೀಡಿದ್ದು, ಈ ಕುರಿತು ಚರ್ಚಿಸಲು ಟಿಸಿಎಸ್‌ನ ಮಾನವ ಸಂಪನ್ಮೂಲ ಜನರಲ್ ಮ್ಯಾನೇಜರ್ ಬೋಬನ್ ವರ್ಗೀಸ್ ಥಾಮಸ್, ಸಹಾಯಕ ವ್ಯವಸ್ಥಾಪಕ ಮಹೇಶ್ ಜಿಕೆ ಅವರು ಕರ್ನಾಟಕ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಈ ವೇಳೆ ಕೆಐಟಿಯು ಅಧ್ಯಕ್ಷ ವಿಜೆಕೆ ನಾಯರ್, ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಮತ್ತು ಕಾರ್ಯದರ್ಶಿ ಸೂರಜ್ ನಿಡಿಯಾಂಗ ಅವರು ಒಕ್ಕೂಟಗಳ ಪರವಾಗಿ ಹಾಜರಾಗಿದ್ದರು.
ಕರ್ನಾಟಕ ಕಾರ್ಮಿಕ ಇಲಾಖೆಯು ಕಂಪನಿಗೆ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಟಿಸಿಎಸ್ ಅಧಿಕಾರಿಗಳು ಕಾರ್ಮಿಕ ಇಲಾಖೆಗೆ ಉತ್ತರನ್ನು ಸಲ್ಲಿಸಲಿದ್ದು, ಈ ಕುರಿತಂತೆ ಸೆಪ್ಟೆಂಬರ್ 8ರಂದು ಮತ್ತೊಮ್ಮೆ ಎಲ್ಲ ಅಧಿಕಾರಿಗಳು ಮತ್ತೆ ಸಭೆ ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು ಉದ್ಯೋಗಿಗಳ ಶೇಕಡಾ 2 ರಷ್ಟು ವಜಾ ಮಾಡುವುದಾಗಿ ಟಿಸಿಎಸ್ ಆಡಳಿತ ಮಂಡಳಿ ಘೋಷಿಸಿತ್ತು. ಅಂದರೆ ವಿಶ್ವದ ಸುಮಾರು 12 ಸಾವಿರ ಉದ್ಯೋಗಿಗಳು ತಮ್ಮ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನುವುದಕ್ಕೆ ಟಿಸಿಎಸ್ ಆಡಳಿತ ಮಂಡಳಿಯ ಪರವಾಗಿ ಹಾಜರಿದ್ದ ಪ್ರತಿನಿಧಿಗಳು ಕಂಪನಿ ಇನ್ನೂ ಯಾವುದೇ ವಜಾಗಳನ್ನು ಪ್ರಾರಂಭಿಸಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ಟಿಸಿಎಸ್ ಅಧಿಕಾರಿಗಳು, ವಜಾಗೊಳಿಸಲಾದ ಯಾವುದೇ ಉದ್ಯೋಗಿಗಳಿಂದ ಕೆಐಟಿಯು ಬಳಿ ಯಾವುದೇ ದೂರುಗಳಿದ್ದರೆ ತಿಳಿಸಲಿ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಯಾಗಿ ಯೂನಿಯನ್ ಸದಸ್ಯರು ಯಾವುದೇ ದೂರುಗಳು ದಾಖಲಾದ ಬಗ್ಗೆ ನಿರ್ದಿಷ್ಟ ಪ್ರತಿಗಳನ್ನು ಸಲ್ಲಿಸಿಲ್ಲ, ಬದಲಾಗಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ.
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಈ ಕುರಿತು “ವಜಾಗೊಳಿಸುವಂತಹ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಕಂಪನಿಯು ಉದ್ಯೋಗಿಗಳ ಮೂಲಭೂತ ಕಾರ್ಮಿಕ ಹಕ್ಕುಗಳನ್ನು ನೋಡಿಕೊಳ್ಳಬೇಕು ಮತ್ತು ಅಲ್ಲದೇ ಅಲ್ಲಿ ಸೂಕ್ತ ಪ್ರಕ್ರಿಯೆ ಅನುಸರಿಸಬೇಕು ಹಾಗೂ ಉದ್ಯೋಗಿಗಳಿಗೆ ಸರಿಯಾದ ಪರಿಹಾರ ನೀಡಬೇಕು. ಜತೆಗೆ ಬಾಧಿತ ಉದ್ಯೋಗಿಗಳ ಮೂಲಭೂತ ಕಾಳಜಿಗಳನ್ನು ಪರಿಹರಿಸಬೇಕು” ಎಂದು ತಿಳಿಸಿದ್ದಾರೆ.
ಟಿಸಿಎಸ್ ಪ್ರತಿನಿಧಿಗಳು ಮಾತ್ರ ಕಂಪನಿ ಇನ್ನೂ ಯಾವುದೇ ವಜಾಗಳನ್ನು ಪ್ರಾರಂಭಿಸಿಲ್ಲ. ಅಲ್ಲದೆ, ಎಷ್ಟು ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರಬಹುದು, ನಗರವಾರು, ದೇಶವಾರು ವಜಾ ವಿವರಗಳು ಯಾವುದೇ ಮಾಹಿತಿ ನಮಗೆ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.