Home ಕ್ರೀಡೆ 2027ರ ವಿಶ್ವಕಪ್‌ಗೂ ಮೊದಲೇ ವಿರಾಟ್‌, ರೋಹಿತ್‌ ನಿವೃತ್ತಿ!

2027ರ ವಿಶ್ವಕಪ್‌ಗೂ ಮೊದಲೇ ವಿರಾಟ್‌, ರೋಹಿತ್‌ ನಿವೃತ್ತಿ!

0

ಮುಂಬೈ: ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್‌ಗೆ ಹಾಗೂ ಐಪಿಎಲ್ ನಡುವೆಯೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್‌ಗೂ ಮುನ್ನವೇ ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ.

ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಹುಶಃ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದು, ಅದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಬ್ಲ್ಯೂ ಜರ್ಸಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಮುಂದಿನ ವರ್ಷ ಜನವರಿಯಿಂದ ಜುಲೈ ಮಧ್ಯೆ ಈ ಇಬ್ಬರು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಆರು ಏಕದಿನ ಪಂದ್ಯಗಳಲ್ಲಿ ಅಷ್ಟೇ ಆಡುವ ಅವಕಾಶಗಳಿವೆ. ಹೀಗಾಗಿ ಈ ಇಬ್ಬರಿಗೆ ಏಕದಿನ ಪಂದ್ಯಗಳನ್ನು ಆಡುವ ಸಂಖ್ಯೆಯೂ ತೀರ ಕಡಿಮೆ.

ಇಷ್ಟು ಕಡಿಮೆ ಪಂದ್ಯಗಳಲ್ಲಿ 2027ರ ಏಕದಿನ ವಿಶ್ವಕಪ್‌ಗೆ ಈ ಇಬ್ಬರು ಸಿದ್ಧಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ, ಇಬ್ಬರ ವಯಸ್ಸು ಕೂಡ 38ಕ್ಕಿಂತ ಅಧಿಕಗೊಳ್ಳುವುದರಿಂದ, 2027ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್-ರೋಹಿತ್ ಆಡದಿರುವ ಸಾಧ್ಯತೆಗಳೇ ಹೆಚ್ಚಿವೆ.

ಅವಕಾಶಗಳ ಕೊರತೆಯಿಂದಾಗಿ ಈ ಇಬ್ಬರೂ ವಿಶ್ವಕಪ್‌ಗೂ ಮುನ್ನವೇ ಹೊರಗುಳಿಯಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ, ಈ ಬಗ್ಗೆ ಬಿಸಿಸಿಐ ಕೂಡ ಶೀಘ್ರದಲ್ಲೇ ಚರ್ಚಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಕೊಹ್ಲಿ ಹಾಗೂ ರೋಹಿತ್‌ ಇಬ್ಬರ ವಯಸ್ಸೂ ಕೂಡ 2027ರ ಹೊತ್ತಿಗೆ 38 ದಾಟಲಿದೆ. ಇದೇ ಕಾರಣದಿಂದಾಗಿ ಏಕದಿನ ಕ್ರಿಕೆಟ್ ಭವಿಷ್ಯ ನಿರ್ಧರಿಸುವಂತೆ ಇಬ್ಬರಿಗೂ ಸೂಚನೆ ನೀಡಲಾಗಿದೆ. ಇನ್ನು 2027 ರಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೆ ಯುವ ಪಡೆಯನ್ನು ಒಳಗೊಂಡಿರುವ ಬಲಿಷ್ಠ ತಂಡವೊಂದನ್ನು ರೂಪಿಸಲು ಬಿಸಿಸಿಐ ಯೋಜನೆಯನ್ನು ಹಾಕಿಕೊಂಡಿದೆ.

ಆಸ್ಟ್ರೇಲಿಯಾ ಸರಣಿ: ರೋಹಿತ್‌ ಮತ್ತು ಕೊಹ್ಲಿ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದ್ದು, ಬಹುತೇಕ ಇದು ಅವರ ಕೊನೆಯ ಏಕದಿನ ಸರಣಿ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 19 ರಿಂದ ಆರಂಭವಾಗಲಿರುವ ಈ ಸರಣಿಯಲ್ಲಿ ಮೊದಲ ಪಂದ್ಯ ಪರ್ತ್​ನಲ್ಲಿ ನಡೆಯಲಿದೆ. ಅಡಿಲೇಡ್‌ನಲ್ಲಿ ಅಕ್ಟೋಬರ್ 23 ರಂದು ಎರಡನೇ ಪಂದ್ಯ ಹಾಗೂ 25 ರಂದು ಸಿಡ್ನಿ ಮೈದಾನದಲ್ಲಿ ಅಂತಿಮ ಪಂದ್ಯ ನಡೆಯಲಿದೆ.

ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯದ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ವಿಶೇಷ ಗೌರವ ಸಲ್ಲಿಸಿ ಬೀಳ್ಕೊಡುಗೆ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತಿಸಿದೆ ಸಿಇಒ ಟಾಡ್ ಗ್ರೀನ್‌ಬರ್ಗ್ ಹೇಳಿದ್ದಾರೆ.

ಬಿಸಿಸಿಐ ಶೀಘ್ರ ಸಭೆ: ಇಂಗ್ಲೆಂಡ್​ ಪ್ರವಾಸ ಟೀಮ್​ ಮ್ಯಾನೇಜ್​​ಮೆಂಟ್​ ವಾಪಾಸ್ಸಾಗುತ್ತಿದ್ದಂತೆ ಬಿಸಿಸಿಐ ಸಭೆ ನಡೆಸಲಿದ್ದು, ಸಭೆಯಲ್ಲಿ ಇಂಗ್ಲೆಂಡ್​ ಪ್ರವಾಸ ಚರ್ಚೆ ಜತೆಗೆ ಏಕದಿನ ವಿಶ್ವಕಪ್‌ ಕುರಿತಂತೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ಈ ವೇಳೆ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರ ಭವಿಷ್ಯದ ಬಗ್ಗೆಯೂ ಚರ್ಚೆಯಾಗಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version