Home ಸುದ್ದಿ ವಿದೇಶ ಭಾರತ-ರಷ್ಯಾ ಸ್ನೇಹ ಸರ್ವಕಾಲಕ್ಕೂ ಭದ್ರ

ಭಾರತ-ರಷ್ಯಾ ಸ್ನೇಹ ಸರ್ವಕಾಲಕ್ಕೂ ಭದ್ರ

0

ಮಾಸ್ಕೋ: ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಟ್ರಂಪ್ ಕೆಂಡಕಾರುತ್ತಿರುವ ಮಧ್ಯೆಯೇ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉಭಯ ದೇಶಗಳ (ಭಾರತ-ರಷ್ಯಾ) ಸಂಬಂಧ ವೃದ್ಧಿಗೆ ರಷ್ಯಾಗೆ ಭೇಟಿ ನೀಡಿದ್ದಾರೆ. ಆ ಮೂಲಕ ಟ್ರಂಪ್ ಆಕ್ರೋಶಕ್ಕೆ ಭಾರತ ಡೋಂಟ್ ಕೇರ್ ಎಂದಿದೆ.

ಅಮೆರಿಕ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ರಷ್ಯಾಕ್ಕೆ ಭೇಟಿ ನೀಡದ ದೋವಲ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಕೈ ಕುಲುಕಿ ನಗುಮೊಗದಿಂದ ಮಾತ ನಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಎಲ್ಲೆಡೆ ವೈರಲ್ ಆಗಿವೆ. ಅವರೊಂದಿಗೆ ರಷ್ಯಾದಲ್ಲಿನ ಭಾರತೀಯ ರಾಯಭಾರಿ ವಿನಯ್ ಕುಮಾರ್ ಇದ್ದರು.

ರಷ್ಯಾ ಮತ್ತು ಭಾರತದ ಸ್ನೇಹ ಸರ್ವಕಾಲಕ್ಕೂ ಭದ್ರವಾಗಿರುತ್ತದೆ. ಬರಲಿರುವ ಆಧುನಿಕ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಉಭಯ ದೇಶಗಳು ಬದ್ಧವಾಗಿವೆ. ನಮ್ಮ ದೇಶಗಳ ನಡುವಿನ ಸಂಬಂಧ ಬಹಳ ವಿಶೇಷವಾದ್ದು ಹಾಗೂ ನಮ್ಮ ನಡುವಿನ ರಾಜತಾಂತ್ರಿಕ ಮೌಲ್ಯಗಳನ್ನು ನಾವು ಗೌರವಿಸುತ್ತೇವೆ ಎಂದು ದೋವಲ್ ಹೇಳಿದರು.

ರಷ್ಯಾದ ಹಿರಿಯ ಅಧಿಕಾರಿಗಳ ಜತೆ ದೋವಲ್ ಪ್ರಾದೇಶಿಕ ಸ್ಥಿರತೆ, ಭಯೋತ್ಪಾದನಾ ನಿಗ್ರಹ ಹಾಗೂ ಇಂಧನ ಭದ್ರತೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಆಪರೇಷನ್ ಸಿಂದೂರದಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್-400 ಏರ್‌ಡಿಫೆನ್ಸ್ ಅನ್ನು ಖರೀದಿಸುವ ಬಗ್ಗೆ ಹಾಗೂ ಎಸ್‌ಯು-57 ಯುದ್ಧ ವಿಮಾನಗಳ ಬಗ್ಗೆಯೂ ಚರ್ಚೆ ಆಗಿದೆ ಎಂದು ಹೇಳಲಾಗಿದೆ. ಬಹುನಿರೀಕ್ಷಿತ ರಷ್ಯಾ ತೈಲ ಆಮದಿನ ಬಗ್ಗೆಯೂ ದೋವಲ್ ಈಗಾಗಲೇ ಮಾತುಕತೆ ನಡೆಸಿದ್ದಾರೆ.

ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ವಿರುದ್ಧ ಟ್ರಂಪ್ ನಿಗಿನಿಗಿ ಕೆಂಡವಾಗಿರುವ ಬೆನ್ನಲ್ಲೇ, ಅಧ್ಯಕ್ಷ ಪುಟಿನ್ ವರ್ಷಾಂತ್ಯಕ್ಕೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಜಿತ್ ದೋವಲ್ ಹೇಳಿದ್ದಾರೆ. ಅಲ್ಲಿನ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿ, ರಷ್ಯಾ ಅಧ್ಯಕ್ಷ ಪುಟಿನ್ ವರ್ಷಾಂತ್ಯಕ್ಕೆ ಭಾರತಕ್ಕೆ ಬರುತ್ತಿರುವ ಬಗ್ಗೆ ಖುಷಿಯಿದೆ. ದಿನಾಂಕ ಬಹುತೇಕ ಅಂತಿಮವಾಗಿದೆ ಎಂದು ತಿಳಿಸಿದರು.

ಸುಂಕ ದ್ವಿಗುಣ: ಭಾರತವು ರಷ್ಯಾದಿಂದ ನಿರಂತರವಾಗಿ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು 50% ದ್ವಿಗುಣಗೊಳಿಸಿದ್ದಾರೆ. ಪರಿಣಾಮವಾಗಿ ಅಮೆರಿಕಕ್ಕೆ ರಫ್ತಾಗುವ ಭಾರತದ ಸರಕಿನಲ್ಲಿ 60% ರಷ್ಟು ಕಡಿತವಾಗಬಹುದು. ಜವಳಿ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಪ್ರಮುಖ ಕ್ಷೇತ್ರಗಳ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.

ಶೀಘ್ರ ಎಸ್. ಜೈಶಂಕರ್ ರಷ್ಯಾ ಭೇಟಿ?: ಅಜಿತ್ ದೋವಲ್ ಹಿಂದಿರುಗಿದ ಬೆನ್ನಲ್ಲೇ ಇದೇ ತಿಂಗಳಾಂತ್ಯಕ್ಕೆ ವಿದೇಶಾಂಗ ಖಾತೆ ಸಚಿವ ಎಸ್.ಜೈಶಂಕರ್ ಕೂಡ ರಷ್ಯಾಕ್ಕೆ ತೆರಳುವ ಸಾಧ್ಯತೆಗಳಿವೆ. ರಷ್ಯಾ ಜತೆ ಭಾರತ ಉತ್ತಮ ಸಂಬಂಧ ಹೊಂದಿದೆ ಹಾಗೂ ತೈಲ ಖರೀದಿಯನ್ನು ನಿಲ್ಲಿಸಿಲ್ಲ ಮತ್ತು ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಈ ಭೇಟಿ ನೀಡಲಿದೆ ಎನ್ನಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version