Home ಸುದ್ದಿ ದೇಶ ಟ್ರಂಪ್ ಸುಂಕ: ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ

ಟ್ರಂಪ್ ಸುಂಕ: ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ

0

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ರಷ್ಯಾದಿಂದ ತೈಲ ಖರೀದಿಸದಂತೆ ಬೆದರಿಕೆ ಒಡ್ಡಿ ಭಾರತದ ಮೇಲೆ ಶೇ 50ರಷ್ಟು ಸುಂಕವನ್ನು ಹೇರಲಾಗಿತ್ತು. ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿ ದೇಶದ ರೈತರ ಹಿತಾಸಕ್ತಿಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ತಿರುಗೇಟು ನೀಡಿದ್ದರು, ಈ ಸುಂಕದ ಯುದ್ಧದ ನಡುವೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾಸ್ಕೋ ಭೇಟಿಯ ಸಂದರ್ಭದಲ್ಲಿ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವರ್ಷದ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ದಿನಾಂಕಗಳು ಬಹುತೇಕ ಅಂತಿಮಗೊಂಡಿವೆ. ರಕ್ಷಣಾ ಮತ್ತು ಇಂಧನ ಸಹಕಾರದ ಮೇಲೆ ಕೇಂದ್ರೀಕರಿಸಿ, ಕಾರ್ಯತಂತ್ರದ ಸಂಬಂಧಗಳನ್ನು ಗಟ್ಟಿಗೊಳಿಸುವ ಗುರಿಯನ್ನು ಈ ಭೇಟಿ ಹೊಂದಿದೆ. ಎರಡೂ ರಾಷ್ಟ್ರಗಳ ನಡುವಿನ ಇತ್ತೀಚಿನ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆಗಳ ನಂತರ ಇದು ನಡೆದಿದೆ.

ಭಾರಕ್ಕೆ ಅಮೆರಿಕದಿಂದ 50% ಸುಂಕ: ಅಮೆರಿಕ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವ ಆದೇಶ ಹೊರಡಿಸಿದ್ದ ಡೊನಾಲ್ಡ್ ಟ್ರಂಪ್ ನಿನ್ನೆ ಬುಧವಾರ ಮತ್ತೊಂದು ಆದೇಶಕ್ಕೆ ಸಹಿ ಮಾಡಿದ್ದು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಮತ್ತೆ ಶೇ 25ರಷ್ಟು ಸುಂಕವನ್ನು ವಿಧಿಸಿ ಭಾರತದ ಮೇಲಿನ ಸುಂಕವನ್ನು ಶೇ 50ಕ್ಕೆ ಏರಿಸಲಾಗಿದೆ.

ಟ್ರಂಪ್‌ ಮಾತಿಗೆ ಒಪ್ಪದ ರಷ್ಯಾ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು 2022 ರಿಂದ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದು, ಟ್ರಂಪ್‌ ಎರಡನೇ ಭಾರಿ ಅಧಿಕಾರ ವಹಿಸಿಕೊಂಡಾಗಿನಿಂದ ಉಕ್ರೇನ್‌ ಮೇಲಿನ ಸಂಘರ್ಷ ನಿಲ್ಲಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಟ್ರಂಪ್ ಈ ಯುದ್ದವನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ.

ರಷ್ಯಾದ ಅಧ್ಯಕ್ಷ ಪುಟಿನ್ ಟ್ರಂಪ್ ಅವರ​ ಯಾವುದೇ ಮನವಿಗೆ ​ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ರಷ್ಯಾದ ಅತಿದೊಡ್ಡ ವ್ಯಾಪಾರ ಪಾಲುದಾರ ಭಾರತದ ಮೇಲೆ ಆಮದು ಸುಂಕ ಹೇರುವ ಮೂಲಕ ಒತ್ತಡ ಹೇರುವ ಪ್ರಯತ್ನದಲ್ಲಿದ್ದಾರೆ.

ಟ್ರಂಪ್-ಪುಟಿನ್ ಸಭೆ: ಗುರುವಾರ ಕ್ರೆಮ್ಲಿನ್, ಪುಟಿನ್ ಅವರು ಮುಂಬರುವ ದಿನಗಳಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡುವ ದಿನಾಂಕವನ್ನು ನಿಗದಿಪಡಿಸಿದೆ ಎಂದು ತಿಳಿಸಿದೆ. ರಷ್ಯಾ ಅಧ್ಯಕ್ಷರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಷಾಕೋವ್, ಎರಡೂ ಕಡೆಯವರು ಸಭೆ ನಡೆಸುವ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಸಭೆಯ ಸ್ಥಳವನ್ನು ಒಪ್ಪಿಕೊಂಡಿದ್ದು, ಸ್ಥಳ ಹಾಗೂ ಸಮಯದ ಮಾಹಿತಿಯನ್ನು ನಂತರದ ದಿನಗಳಲ್ಲಿ ಘೋಷಿಸಲಾಗುವುದು ಎಂದು ಹೇಳಿದ್ದಾರೆ.

ಮುಂದುವರೆದ ಭಾರತ-ರಷ್ಯಾ ವ್ಯಾಪಾರ: ಭಾರತ ಮತ್ತು ರಷ್ಯಾ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ಸೋವಿಯತ್ ಯುಗದಿಂದಲೂ ದೀರ್ಘಕಾಲದ ಸಂಬಂಧವನ್ನು ಹೊಂದಿವೆ. ಎರಡೂ ರಾಷ್ಟ್ರಗಳು ತಮ್ಮ ಆರ್ಥಿಕ ಸಹಕಾರವನ್ನು ಬಲಪಡಿಸಿಕೊಂಡಿವೆ. ಸುಮಾರು ಮೂರು ವರ್ಷಗಳ ಹಿಂದೆ ರಷ್ಯಾದ ಯುದ್ಧ ಪ್ರಾರಂಭ ಆದಾಗಿನಿಂದ, ಭಾರತವು ರಷ್ಯಾದ ತೈಲದ ಅತಿದೊಡ್ಡ ಆಮದುದಾರರಲ್ಲಿ ಒಂದಾಗಿದೆ. ಮೇ 2023 ರ ಹೊತ್ತಿಗೆ, ಭಾರತವು ದಿನಕ್ಕೆ ಎರಡು ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ಅಥವಾ ಆಮದಿನ ಸರಿಸುಮಾರು 45 ಪ್ರತಿಶತದಷ್ಟು ಕಚ್ಚಾ ತೈಲವನ್ನು ಖರೀದಿಸುತ್ತಿತ್ತು ಎನ್ನಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version