AIIMS: ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಯಲ್ಲಿ ಸೇವೆ ಸಲ್ಲಿಸಲು ಬಯಸುವ ವೈದ್ಯಕೀಯ ವೃತ್ತಿಪರರಿಗೆ ಇದೊಂದು ಉತ್ತಮ ಅವಕಾಶ.
ಏಮ್ಸ್, 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಕರ್ಷಕ ವೇತನ ಮತ್ತು ಉತ್ತಮ ವೃತ್ತಿ ಭವಿಷ್ಯವನ್ನು ನೀಡುವ ಈ ಹುದ್ದೆಗಳಿಗೆ ಆಸಕ್ತರು ನವೆಂಬರ್ 14 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ: ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 63 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪ್ರಮುಖವಾಗಿ ನರ್ಸಿಂಗ್ ಕಾಲೇಜು ಸೇರಿದಂತೆ ಅರಿವಳಿಕೆಶಾಸ್ತ್ರ, ಆಸ್ಪತ್ರೆ ಆಡಳಿತ, ನರಶಸ್ತ್ರಚಿಕಿತ್ಸೆ, ಪರಮಾಣು ಔಷಧ, ರೋಗಶಾಸ್ತ್ರ ಮತ್ತು ರೇಡಿಯಾಲಜಿಯಂತಹ ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ.
ಯಾರು ಅರ್ಜಿ ಸಲ್ಲಿಸಬಹುದು?: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಂಬಿಬಿಎಸ್ (MBBS) ಪದವಿಯ ಜೊತೆಗೆ ಸಂಬಂಧಿತ ವಿಷಯದಲ್ಲಿ ಎಂ.ಡಿ (MD), ಎಂ.ಎಸ್ (MS) ಅಥವಾ ಡಿ.ಎಂ (DM) ನಂತಹ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
ಜೊತೆಗೆ, ಬೋಧನಾ ಕ್ಷೇತ್ರದಲ್ಲಿ ಅನುಭವ ಹೊಂದಿರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 50 ವರ್ಷಗಳನ್ನು ಮೀರಿರಬಾರದು. ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ, ಸಲ್ಲಿಕೆ ವಿಧಾನ: ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.3 ಸಾವಿರ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (EWS), ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ರೂ.2,400 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ವಿಶೇಷವೆಂದರೆ, ಸಂದರ್ಶನಕ್ಕೆ ಹಾಜರಾಗುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುವುದು.
ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಏಮ್ಸ್‌ನ ಅಧಿಕೃತ ವೆಬ್‌ಸೈಟ್ aiims.edu ಗೆ ಭೇಟಿ ನೀಡಿ, ‘ವೃತ್ತಿ’ ವಿಭಾಗದಲ್ಲಿ ‘ಫ್ಯಾಕಲ್ಟಿ ನೇಮಕಾತಿ 2025’ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಲಭ್ಯವಿರುವ ಆನ್‌ಲೈನ್ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ, ಸಂಬಳದ ವಿವರ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯಲಾಗುವುದು. ಒಂದು ವೇಳೆ, ಒಂದು ಹುದ್ದೆಗೆ 10ಕ್ಕಿಂತ ಹೆಚ್ಚು ಅರ್ಜಿಗಳು ಬಂದರೆ, ಲಿಖಿತ ಸ್ಕ್ರೀನಿಂಗ್ ಪರೀಕ್ಷೆಯನ್ನು ನಡೆಸುವ ಸಾಧ್ಯತೆ ಇದೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದವರಿಗೆ ತಿಂಗಳಿಗೆ ರೂ.1,01,500 ರಿಂದ ರೂ.1,67,400 ರವರೆಗೆ ವೇತನ ಸಿಗಲಿದೆ. ಹಾಗೆಯೇ, ನರ್ಸಿಂಗ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ರೂ. 67,700 ರಿಂದ ರೂ.2,08,700 ರವರೆಗೆ ವೇತನ ಶ್ರೇಣಿ ನಿಗದಿಯಾಗಿದೆ.
