ವಿಶ್ವಕಪ್: ಭಾರತದ ಅಂಗಳದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಕಳಂಕ ತರುವಂತಹ ಘಟನೆಯೊಂದು ನಡೆದಿದೆ.
ಪಂದ್ಯಾವಳಿಯಲ್ಲಿ ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿರುವ ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಇಂದೋರ್‌ನಲ್ಲಿ ವರದಿಯಾಗಿದ್ದು, ಇದು ದೇಶಕ್ಕೆ ತೀವ್ರ ಮುಖಭಂಗವನ್ನುಂಟುಮಾಡಿದೆ. ಈ ಹೇಯ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.
ನಡುರಸ್ತೆಯಲ್ಲಿ ನಡೆದಿದ್ದೇನು?: ದಕ್ಷಿಣ ಆಫ್ರಿಕಾ ವಿರುದ್ಧದ ತಮ್ಮ ಅಂತಿಮ ಲೀಗ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡ ಇಂದೋರ್‌ನ ಪ್ರತಿಷ್ಠಿತ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ತಂಗಿತ್ತು.
ಗುರುವಾರ ಬೆಳಿಗ್ಗೆ ಸುಮಾರು 11 ಗಂಟೆಯ ಸಮಯದಲ್ಲಿ, ತಂಡದ ಇಬ್ಬರು ಆಟಗಾರ್ತಿಯರು ಸ್ವಲ್ಪ ನಿರಾಳವಾಗಿ ಕಾಫಿ ಕುಡಿಯಲು ಹೋಟೆಲ್‌ನಿಂದ ಸಮೀಪದ ಕೆಫೆಯೊಂದಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ, ಖಜ್ರಾನಾ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಅವರನ್ನು ಹಿಂಬಾಲಿಸಲು ಆರಂಭಿಸಿದ್ದಾನೆ.
ಬಿಳಿ ಶರ್ಟ್ ಮತ್ತು ಕಪ್ಪು ಟೋಪಿ ಧರಿಸಿದ್ದ ಆತ, ಆಟಗಾರ್ತಿಯರ ಬಳಿ ಬಂದು ಕೀಟಲೆ ಮಾಡಿದ್ದಲ್ಲದೆ, ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಅನಿರೀಕ್ಷಿತ ಘಟನೆಯಿಂದ ತೀವ್ರ ಆಘಾತ ಮತ್ತು ಭಯಕ್ಕೆ ಒಳಗಾದ ಆಟಗಾರ್ತಿಯರು ತಕ್ಷಣವೇ ತಮ್ಮ ತಂಡದ ಭದ್ರತಾ ಅಧಿಕಾರಿಯಾದ ಡ್ಯಾನಿ ಸಿಮ್ಮನ್ಸ್ ಅವರಿಗೆ ಮಾಹಿತಿ ನೀಡಲು ಪ್ರಯತ್ನಿಸಿದ್ದಾರೆ.
ಸಹಾಯಕ್ಕೆ ಬಂದ ಸಹೃದಯ, ಆರೋಪಿ ಸೆರೆ: ಆಟಗಾರ್ತಿಯರು ಗಾಬರಿಯಿಂದ ಇರುವುದನ್ನು ಗಮನಿಸಿದ ಕಾರಿನಲ್ಲಿದ್ದ ಸಹೃದಯರೊಬ್ಬರು ತಮ್ಮ ವಾಹನವನ್ನು ನಿಲ್ಲಿಸಿ ಸಹಾಯಕ್ಕೆ ಧಾವಿಸಿದ್ದಾರೆ.
ಅವರಿಂದ ವಿಷಯ ತಿಳಿದುಕೊಂಡು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ವಿದೇಶಿ ಆಟಗಾರ್ತಿಯರ ಮೇಲಿನ ದೌರ್ಜನ್ಯದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಇಂದೋರ್‌ನ ಎಂಐಜಿ ಪೊಲೀಸರು, ಭದ್ರತಾ ಅಧಿಕಾರಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದರು.
ಘಟನೆಯನ್ನು ನೋಡಿದ ದಾರಿಹೋಕರೊಬ್ಬರು ಆರೋಪಿಯ ಬೈಕ್‌ನ ನೋಂದಣಿ ಸಂಖ್ಯೆಯನ್ನು ಗುರುತಿಸಿದ್ದು, ಪೊಲೀಸರ ಕೆಲಸವನ್ನು ಸುಲಭಗೊಳಿಸಿತು. ಈ ಸುಳಿವಿನ ಆಧಾರದ ಮೇಲೆ, ಕೆಲವೇ ಗಂಟೆಗಳಲ್ಲಿ ಆರೋಪಿ ಅಕೀಲ್ ಖಾನ್‌ನನ್ನು ಬಂಧಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತೆ ಹಿಮಾನಿ ಮಿಶ್ರಾ ಖಚಿತಪಡಿಸಿದ್ದಾರೆ.
ಘಟನೆಯ ನಂತರ, ಆಸ್ಟ್ರೇಲಿಯಾ ತಂಡದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ಇಂತಹ ಘಟನೆಗಳು ವಿಶ್ವಕಪ್‌ನಂತಹ ಅಂತರರಾಷ್ಟ್ರೀಯ ಕ್ರೀಡಾಕೂಟದ ಆಯೋಜನೆಗೆ ಕೆಟ್ಟ ಹೆಸರು ತರುತ್ತವೆ ಎಂಬ ಆತಂಕ ವ್ಯಕ್ತವಾಗಿದೆ.
