ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ, ಸಮಾಜಕ್ಕೆ ಸೇವೆ ಸಲ್ಲಿಸಬೇಕಿದ್ದ ಯುವ ವೈದ್ಯೆಯೊಬ್ಬರ ಬದುಕು ದುರಂತ ಅಂತ್ಯ ಕಂಡಿದೆ. ನಿರಂತರ ಅತ್ಯಾಚಾರ, ಕಿರುಕುಳ ಮತ್ತು ಅಧಿಕಾರ ದುರ್ಬಳಕೆಯ ಒತ್ತಡವನ್ನು ಸಹಿಸಲಾಗದೆ, 26 ವರ್ಷದ ವೈದ್ಯಾಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ಬರೆದಿಟ್ಟ ನಾಲ್ಕು ಪುಟಗಳ ಮರಣಪತ್ರ, ವ್ಯವಸ್ಥೆಯ ಕರಾಳ ಮುಖವನ್ನು ಅನಾವರಣಗೊಳಿಸಿದ್ದು, ಪೊಲೀಸ್ ಅಧಿಕಾರಿ, ಮನೆ ಮಾಲೀಕ ಮತ್ತು ಸ್ಥಳೀಯ ಸಂಸದರೊಬ್ಬರ ಹೆಸರನ್ನು ಉಲ್ಲೇಖಿಸಿರುವುದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ಡೆತ್ ನೋಟ್‌ನಲ್ಲಿತ್ತು ನೋವಿನ ಕಥನ: ಸತಾರಾದ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಸಂತ್ರಸ್ತೆ, ತನ್ನ ಸಾವಿಗೆ ಕಾರಣವಾದ ಘಟನೆಗಳನ್ನು ಪತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಳೆದ ಐದು ತಿಂಗಳುಗಳಿಂದ ಸಬ್-ಇನ್ಸ್‌ಪೆಕ್ಟರ್ ಗೋಪಾಲ್ ಬದ್ನೆ ಎಂಬಾತ ತನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ಎಸಗಿ, ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ, ಅಪರಾಧಿಗಳಿಗೆ ನಕಲಿ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ನೀಡುವಂತೆ ಪೊಲೀಸರು ಒತ್ತಡ ಹೇರುತ್ತಿದ್ದರು. ವೈದ್ಯಕೀಯ ಪರೀಕ್ಷೆಗೆ ಹಾಜರಾಗದ ಆರೋಪಿಗಳಿಗೂ ಪ್ರಮಾಣಪತ್ರ ನೀಡುವಂತೆ ಪೀಡಿಸುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.
ಒಂದು ಪ್ರಕರಣದಲ್ಲಿ, ಪ್ರಮಾಣಪತ್ರ ನೀಡಲು ನಿರಾಕರಿಸಿದಾಗ ಸ್ಥಳೀಯ ಸಂಸದರು ಮತ್ತು ಅವರ ಇಬ್ಬರು ಸಹಾಯಕರು ಆಸ್ಪತ್ರೆಗೆ ಬಂದು, ಫೋನ್ ಮೂಲಕ ಬೆದರಿಕೆ ಹಾಕಿದ್ದರು ಎಂಬ ಆಘಾತಕಾರಿ ವಿಷಯವನ್ನೂ ಬಹಿರಂಗಪಡಿಸಿದ್ದಾರೆ. ಇವೆಲ್ಲದರ ಜೊತೆಗೆ, ಆಕೆ ವಾಸವಿದ್ದ ಮನೆಯ ಮಾಲೀಕ ಪ್ರಶಾಂತ್ ಬಂಕರ್ ಕೂಡ ಕಿರುಕುಳ ನೀಡುತ್ತಿದ್ದನೆಂದು ಪತ್ರದಲ್ಲಿ ತಿಳಿಸಲಾಗಿದೆ.
ಕಮರಿ ಹೋದ ವೈದ್ಯೆಯ ಕನಸು: ಕೇವಲ 26 ವರ್ಷದ ಈ ವೈದ್ಯೆ, ತನ್ನ ಕಡ್ಡಾಯ ಗ್ರಾಮೀಣ ಸೇವೆಯ 23 ತಿಂಗಳುಗಳನ್ನು ಪೂರೈಸಿದ್ದರು. ಇನ್ನೇನು ಒಂದು ತಿಂಗಳಲ್ಲೇ ಸೇವಾ ಅವಧಿ ಪೂರ್ಣಗೊಂಡು, ಸ್ನಾತಕೋತ್ತರ ಪದವಿ ಪಡೆಯುವ ಮಹತ್ತರ ಕನಸು ಕಾಣುತ್ತಿದ್ದರು. ಆದರೆ, ವ್ಯವಸ್ಥೆಯ ಕ್ರೌರ್ಯಕ್ಕೆ ಅವರ ಕನಸು ನುಚ್ಚುನೂರಾಯಿತು.
ತನಗೆ ನ್ಯಾಯ ಸಿಗಬಹುದೆಂಬ ನಂಬಿಕೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮತ್ತು ಉಪ ವರಿಷ್ಠಾಧಿಕಾರಿಗಳಿಗೆ (DSP) ದೂರು ನೀಡಿದ್ದರು. ಆದರೆ, ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡು ಈ ಕಠೋರ ನಿರ್ಧಾರಕ್ಕೆ ಬಂದಿದ್ದಾರೆ.
ರಾಜಕೀಯ ತಿರುವು: ಈ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. “ರಕ್ಷಕರೇ ಭಕ್ಷಕರಾದರೆ ನ್ಯಾಯ ಸಿಗುವುದಾದರೂ ಹೇಗೆ?” ಎಂದು ಪ್ರಶ್ನಿಸಿರುವ ಕಾಂಗ್ರೆಸ್, ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಸದ್ಯ, ಆರೋಪಿ ಪೊಲೀಸ್ ಅಧಿಕಾರಿ ಗೋಪಾಲ್ ಬದ್ನೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಆತನ ಮತ್ತು ಮನೆ ಮಾಲೀಕನ ವಿರುದ್ಧ ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಸಂಸದರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದ್ದು, ಈ ಪ್ರಕರಣವು ಮಹಾರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದೆ.
