Home ಸುದ್ದಿ ದೇಶ ಬೆಂಗಳೂರಿಗೆ ಹೊರಟ ಬಸ್ ಮೃತ್ಯುಕೂಪ: 25 ಮಂದಿ ಸಜೀವ ದಹನ, ಆಂಧ್ರದಲ್ಲಿ ಭೀಕರ ದುರಂತ!

ಬೆಂಗಳೂರಿಗೆ ಹೊರಟ ಬಸ್ ಮೃತ್ಯುಕೂಪ: 25 ಮಂದಿ ಸಜೀವ ದಹನ, ಆಂಧ್ರದಲ್ಲಿ ಭೀಕರ ದುರಂತ!

0

ಕರ್ನೂಲ್ (ಆಂಧ್ರಪ್ರದೇಶ): ಹೈದರಾಬಾದ್‌ನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ನೂರಾರು ಕನಸುಗಳು ಮತ್ತು ಜೀವಗಳು, ಆಂಧ್ರಪ್ರದೇಶದ ಕರ್ನೂಲ್ ಬಳಿ ನರಕಸದೃಶ ಬೆಂಕಿಯ ಗೋಳದಲ್ಲಿ ಬೆಂದುಹೋದವು.

ಶುಕ್ರವಾರ ಮುಂಜಾನೆ ಸಂಭವಿಸಿದ ಈ ಭೀಕರ ಅಗ್ನಿ ದುರಂತದಲ್ಲಿ, ಖಾಸಗಿ ವೋಲ್ವೋ ಬಸ್‌ನಲ್ಲಿದ್ದ ಕನಿಷ್ಠ 25 ಪ್ರಯಾಣಿಕರು ಸಜೀವ ದಹನವಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದುರಂತ ಸಂಭವಿಸಿದ್ದು ಹೇಗೆ?: ಶುಕ್ರವಾರ ಮುಂಜಾನೆ ಸುಮಾರು 3 ಗಂಟೆಯ ಸಮಯ. ‘ಕಾವೇರಿ ಟ್ರಾವೆಲ್ಸ್’ಗೆ ಸೇರಿದ ಹವಾನಿಯಂತ್ರಿತ (AC) ವೋಲ್ವೋ ಬಸ್, 40 ಪ್ರಯಾಣಿಕರನ್ನು ಹೊತ್ತು ಹೈದರಾಬಾದ್‌ನಿಂದ ಬೆಂಗಳೂರಿನತ್ತ ವೇಗವಾಗಿ ಸಾಗುತ್ತಿತ್ತು.

ಕರ್ನೂಲ್ ಸಮೀಪದ ಚಿನ್ನ ಟೆಕೂರು ಬಳಿ, ಹೆದ್ದಾರಿಯಲ್ಲಿ ಅಡ್ಡಬಂದ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಬಸ್‌ನ ಅಡಿಯಲ್ಲಿ ಸಿಲುಕಿಕೊಂಡಿದ್ದು, ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದೆ.

ಈ ವೇಳೆ, ರಸ್ತೆಗೆ ಬೈಕ್ ಉಜ್ಜಿದ ಪರಿಣಾಮ ಸೃಷ್ಟಿಯಾದ ಕಿಡಿಯು ಬಸ್‌ನ ಡೀಸೆಲ್ ಟ್ಯಾಂಕ್‌ಗೆ ತಗುಲಿ, ಕಣ್ಣುಮುಚ್ಚಿ ತೆರೆಯುವುದರೊಳಗೆ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.

ಬಾಗಿಲು ತೆರೆಯದ ನರಕ: ಬಸ್ ಹವಾನಿಯಂತ್ರಿತವಾಗಿದ್ದರಿಂದ ಕಿಟಕಿಗಳ ಗಾಜುಗಳನ್ನು ತೆರೆಯಲು ಸಾಧ್ಯವಾಗದೆ, ನಿದ್ರೆಯಲ್ಲಿದ್ದ ಪ್ರಯಾಣಿಕರು ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆಯ ನಡುವೆ ಸಿಲುಕಿ ನರಳಾಡಿದ್ದಾರೆ.

ಎಚ್ಚರಗೊಂಡ ಕೆಲವರು ಪ್ರಾಣಭಯದಿಂದ ಕಿಟಕಿಗಳ ಗಾಜುಗಳನ್ನು ಒಡೆದು ಹೊರಗೆ ಹಾರಿದ್ದಾರೆ. ಆದರೆ, ಹೆಚ್ಚಿನವರು ಬಸ್‌ನಿಂದ ಹೊರಬರಲಾಗದೆ, ಅದರಲ್ಲೇ ಸಜೀವ ದಹನವಾಗಿದ್ದಾರೆ ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲೇ ಆಗಬಾರದ್ದು ಆಗಿಹೋಗಿತ್ತು. ಗಾಯಗೊಂಡ 15 ಜನರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜಕೀಯ ನಾಯಕರ ಸಂತಾಪ: ಈ ಹೃದಯ ವಿದ್ರಾವಕ ಘಟನೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಾ.ಕೆ. ಸುಧಾಕರ್ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

“ಈ ಅಸಹನೀಯ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ. ಗಾಯಾಳುಗಳಿಗೆ ತಕ್ಷಣವೇ ಉತ್ತಮ ವೈದ್ಯಕೀಯ ನೆರವು ನೀಡಬೇಕು ಮತ್ತು ಮೃತರನ್ನು ಗುರುತಿಸಲು ಸ್ಥಳೀಯ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು,” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version