Home ನಮ್ಮ ಜಿಲ್ಲೆ ಧಾರವಾಡ ಉತ್ತರ ಕರ್ನಾಟಕ ಪ್ರವಾಸಿಗರಿಗೆ ಸಿಗಂದೂರು ಈಗ ಹಾಟ್ ಸ್ಪಾಟ್

ಉತ್ತರ ಕರ್ನಾಟಕ ಪ್ರವಾಸಿಗರಿಗೆ ಸಿಗಂದೂರು ಈಗ ಹಾಟ್ ಸ್ಪಾಟ್

0

ಹುಬ್ಬಳ್ಳಿ: ಕರ್ನಾಟಕದ ಅತೀ ಉದ್ದದ ಕೇಬಲ್ ಸೇತುವೆಯಾದ ಸಿಗಂದೂರು ಸೇತುವೆ ಲೋಕಾರ್ಪಣೆಯಾಗಿದೆ. ಆ ಬಳಿಕ ಶ್ರೀ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭಕ್ತರು ಹಾಗೂ ಸೇತುವೆ ನೋಡಲು ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.

ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಸಿಗಂದೂರು ಕಡೆ ಬರುತ್ತಿದ್ದಾರೆ. ಈ ಹಿಂದೆ ಲಾಂಚ್ ಮೂಲಕ ದೇವಾಲಯಕ್ಕೆ ಹೋಗಬೇಕಿತ್ತು. ಆದರೆ ಈಗ ಸೇತುವೆ ಲೋಕಾರ್ಪಣೆಯಾಗಿದ್ದು, ವಾಹನದ ಮೂಲಕ ಸುಲಭವಾಗಿ ಸಾಗಿ ದೇವರ ದರ್ಶನ ಪಡೆಯಬಹುದು.

ಉತ್ತರ ಕರ್ನಾಟಕದ ಹಾಟ್ ಸ್ಟಾಟ್: ಅಚ್ಚರಿಯ ಸಂಗತಿ ಎಂದರೆ ಉತ್ತರ ಕರ್ನಾಟಕ ಭಾಗದ ಜನರು ಸಿಗಂದೂರು ಕಡೆ ಹೆಚ್ಚಾಗಿ ಬರುತ್ತಿದ್ದಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಟ್ರಾವೆಲ್ಸ್‌ಗಳು ಸಿಗಂದೂರಿಗೆ ಭೇಟಿ ನೀಡುವವರಿಗೆ ವಿಶೇಷ ಟೂರ್ ಪ್ಯಾಕೇಜ್‌ ಆರಂಭಿಸಿವೆ.

ಸಿಗಂದೂರು, ಜೋಗ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಿವಿಧ ಪ್ರವಾಸಿ ತಾಣಗಳಿವೆ. ಮಳೆಗಾಲದಲ್ಲಿ ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಆದ್ದರಿಂದ ಒಂದು ದಿನದ ಪ್ರವಾಸ ಕೈಗೊಳ್ಳಲು ನೂರಾರು ಜನರು ಸಿಗಂದೂರು ಕಡೆಗೆ ಸಂಚಾರವನ್ನು ನಡೆಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆ, ಗದಗ, ಹುಬ್ಬಳ್ಳಿ- ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜೋಗ ಜಲಪಾತದ ಹಾಗೂ ಸಿಗಂದೂರು, ಗೋಕಾಕ್, ಅಂಬೋಲಿ, ಬನವಾಸಿ, ದಾಂಡೇಲಿಗೆ ಹೆಚ್ಚಿನ ಪ್ರವಾಸಿ ಪ್ಯಾಕೇಜ್‌ಗಳನ್ನು ಆರಂಭಿಸಿದೆ.

ಶ್ರಾವಣ ಮಾಸದ ನಿಮಿತ್ತ ದೇವರ ದರ್ಶನಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಆದ್ದರಿಂದಲೇ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಅನುಕೂಲ ಮಾಡಿಕೊಡಲು ಹುಬ್ಬಳ್ಳಿ, ಧಾರವಾಡ, ಹಾವೇರಿ, ರಾಣೆಬೆನ್ನೂರು, ಬಾಗಲಕೋಟೆ, ಗದಗ ಮತ್ತು ಶಿರಸಿಯಿಂದ ಸಿಗಂದೂರಿಗೆ ಪ್ರವಾಸಿ ಪ್ಯಾಕೇಜ್ ಪರಿಚಯಿಸಲಾಗಿದೆ.

ಸಿಗಂದೂರು ಸೇತುವೆ ಶರಾವತಿ ಹಿನ್ನೀರಿನ ಜನತೆಯ ದಶಕಗಳ ಕನಸಾಗಿತ್ತು. ಸುಮಾರು 6 ದಶಕಗಳ ಹೋರಾಟದ ನಂತರ, 1,400 ಕೋಟಿ ವೆಚ್ಚದಲ್ಲಿ ಸೇತುವೆ ಹಾಗೂ ಸಂಪರ್ಕ ರಸ್ತೆಗಳು ನಿರ್ಮಾಣಗೊಂಡಿವೆ. ಈ ಸೇತುವೆಯ ಉದ್ದ 1.2 ಕಿಮೀ ಆಗಿದ್ದು, ಇದು ರಾಜ್ಯದ ಅತೀ ಉದ್ದದ ಕೇಬಲ್ ಸೇತುವೆಯಾಗಿದೆ.

ಶರಾವತಿ ಹಿನ್ನೀರು ಮತ್ತು ಅಭಯಾರಣ್ಯದ ನಡುವೆ ಈ ಯೋಜನೆ ಕೈಗೊಳ್ಳುವುದು ಸವಾಲಿನ ಕೆಲಸವಾಗಿತ್ತು. ಗ್ರಾಮೀಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಿ, ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ.

ಈ ರಸ್ತೆಯ ಮೂಲಕ ಸಿಗಂದೂರು ಹಾಗೂ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಗ್ರಾಮೀಣ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ನಂತರ ಕೇಂದ್ರದ ವನ್ಯಜೀವಿ ವಿಭಾಗದಿಂದ ರಸ್ತೆ ನಿರ್ಮಾಣಕ್ಕೆ ಅನುಮತಿ ಪಡೆದು ಸೇತುವೆ‌ ನಿರ್ಮಾಣ ಮಾಡಲಾಯಿತು. ಹೀಗಾಗಿ ಈ ಸೇತುವೆ ಉತ್ತರ‌ ಕರ್ನಾಟಕ,‌‌ ಮಲೆನಾಡು ಹಾಗೂ‌ ಕರಾವಳಿಗೆ ಸಂಪರ್ಕ‌ ಕೊಂಡಿಯಾಗಿದೆ.

ಕರ್ನಾಟಕದ ಅತೀ ಉದ್ದದ ಬ್ರಿಡ್ಜ್ ಪ್ರವಾಸಿಗರ ಹೊಸ ಸೆಲ್ಫಿ, ರೀಲ್ಸ್ ಪಾಯಿಂಟ್ ಆಗಿದೆ. ಸೇತುವೆ ಈಗಾಗಲೇ ಕರ್ನಾಟಕದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳ ಪಟ್ಟಿಯನ್ನು ಸೇರಿದೆ. ಸಿಗಂದೂರು ಸೇತುವೆ ಈಗ ಮಲೆನಾಡು, ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜನರಿಗೆ ಪ್ರವಾಸ, ಭಕ್ತಿಗೆ ಪ್ರಮುಖ ಕೊಂಡಿಯಾಗಿದೆ.

ಈ ಸೇತುವೆಯ ನೈಸರ್ಗಿಕ ಶೋಭೆ, ಶ್ರದ್ಧೆ ಹಾಗೂ ಅಭಿವೃದ್ಧಿಯ ಸಂಕೇತವಾಗಿ ಬೆಳೆಯುತ್ತಿದೆ. ಸಿಗಂದೂರು ಸೇತುವೆ ಕೇವಲ ಸಂಪರ್ಕವೇ ಅಲ್ಲ, ಅದು ಒಂದು ಸಂಸ್ಕೃತಿಯ ಸೇತುವೆಯಾಗಿದೆ. ಸಿಗಂದೂರು ಸೇತುವೆ ಕೇವಲ ಸಂಪರ್ಕ ಸೌಲಭ್ಯವಷ್ಟೇ ಅಲ್ಲ, ಅದು ನಂಬಿಕೆ, ಶ್ರದ್ಧೆ ಹಾಗೂ ನೈಸರ್ಗಿಕ ಶೋಭೆಯ ಸೇತುವೆಯಾಗಿಯೂ ಬೆಳೆಯುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version