Home ಸುದ್ದಿ ದೇಶ ಏರ್‌ ಇಂಡಿಯಾ ವಿಮಾನ ದುರಂತ: ಪೈಲಟ್​ಗಳ ಕೊನೆ ಸಂಭಾಷಣೆ ಬಹಿರಂಗ

ಏರ್‌ ಇಂಡಿಯಾ ವಿಮಾನ ದುರಂತ: ಪೈಲಟ್​ಗಳ ಕೊನೆ ಸಂಭಾಷಣೆ ಬಹಿರಂಗ

0

ನವದೆಹಲಿ: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳ ನಂತರ ಅಪಘಾತಕ್ಕೀಡಾಗಿ 241 ಪ್ರಯಾಣಿಕರು ಸೇರಿದಂತೆ 270 ಸಾವನ್ನಪ್ಪಿದರು. ಈ ಪತನ ಸಂಬಂಧಿಸಿದಂತೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ನಡೆಸಿ 15 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ.

ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿರುವ ಆರಂಭಿಕ ತನಿಖಾ ವರದಿಯ ಪ್ರಕಾರ, ಪೈಲಟ್‌ಗಳಲ್ಲಿ ಒಬ್ಬರು ಕಾಕ್‌ಪಿಟ್ ಧ್ವನಿ ರೆಕಾರ್ಡರ್‌ನಲ್ಲಿ ಇನ್ನೊಬ್ಬರನ್ನು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ ಎಂದು ಕೇಳಿದ್ದಾರೆ, ಅದಕ್ಕೆ ಇನ್ನೊಬ್ಬ ಪೈಲಟ್ ತಾನು ಹಾಗೆ ಮಾಡಲಿಲ್ಲ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿದ್ದು, ಎಂಜಿನ್‌ಗಳಿಗೆ ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್ ಆಗಿದ್ದವು. ಇದಾದ ನಂತರ ಪೈಲಟ್‌ಗಳ ನಡುವೆ ಗೊಂದಲ ಉಂಟಾಯಿತು ಎಂದು ವರದಿ ಹೇಳಿದೆ.

15 ಪುಟಗಳ ವರದಿಯ ಪ್ರಕಾರ, ಹಾರಾಟವು ಲಿಫ್ಟ್-ಆಫ್ ಮತ್ತು ಕ್ರ್ಯಾಶ್ ನಡುವೆ ಸುಮಾರು 30 ಸೆಕೆಂಡುಗಳ ಕಾಲ ನಡೆಯಿತು. ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಸಹ ಪೈಲಟ್ ವಿಮಾನ ಚಲಾಯಿಸುತ್ತಿದ್ದು, ಕ್ಯಾಪ್ಟನ್ ಮೇಲ್ವಿಚಾರಣೆ ಮಾಡುತ್ತಿದ್ದರು. ಟೇಕಾಫ್ ಆದ ಕೆಲವೇ ಕ್ಷಣಗಳಿಗೆ ವಿಮಾನದ ಎರಡು ಎಂಜಿನ್‌ಗಳಿಗೆ ಇಂಧನ ಪೂರೈಕೆಯಾಗುವುದು ನಿಂತಿದೆ. ಪತನವಾಗುವ ಕೆಲವೇ ಸೆಕೆಂಡುಗಳ ಮೊದಲು ‘ಮೇ ಡೇ’ ಕೂಗಿದ್ದಾರೆ.

ಜೂನ್ 12ರಂದು ನಡೆದ  ಏರ್ ಇಂಡಿಯಾ ವಿಮಾನ ಬೋಯಿಂಗ್ 787 ವಿಮಾನವು ಟೆಕ್‌ ಆಫ್‌ ಆದ ಕೆಲ ಸಮಯದಲ್ಲೇ ಅಹಮದಾಬಾದ್‌ನ ವೈದ್ಯಕೀಯ ಕಾಲೇಜು ಹಾಸ್ಟೆಲ್‌ಗೆ ಅಪ್ಪಳಿಸಿತ್ತು. 270 ಮಂದಿ ಸಾವನ್ನಪ್ಪಿದ್ದರು. ಈ ವೇಳೆ ಪೈಲಟ್‌ಗಳ ನಡುವಿನ ಸಂಭಾಷಣೆ ರೆಕಾರ್ಡ್ ಆಗಿದ್ದು, ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್‌ಗೆ ‘ಏಕೆ ಕಟ್ ಆಫ್ ಮಾಡಿದ್ದೀರಿ ಎಂದು ಕೇಳಿದ್ದಾರೆ.

ಆಗ ಇನ್ನೊಬ್ಬ ಪೈಲಟ್, ‘ನಾನು ಹಾಗೆ ಮಾಡಿಲ್ಲ’ ಎಂದು ಉತ್ತರಿಸಿದ್ದಾರೆ. ಈ ಸಂಭಾಷಣೆಯು ಪೈಲಟ್‌ಗಳ ಅರಿವಿಲ್ಲದೆ ಸ್ವಿಚ್ ಆಫ್ ಆಗಿರುವುದು ಎಂಬುದನ್ನು ಸೂಚಿಸುತ್ತೆ,  ಇದು ಮಾನವ ದೋಷದ ಸಾಧ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವರಲ್ಲಿ ಕ್ಯಾಪ್ಟನ್ ಯಾರು ಮತ್ತು ಮೊದಲ ಅಧಿಕಾರಿ ಯಾರು ಎಂಬುದು ವರದಿಯಲ್ಲಿ ಸ್ಪಷ್ಟವಾಗಿಲ್ಲ.

ಈ ವರದಿ ಕುರಿತು ಕೇಂದ್ರ ವಿಮಾನಯಾನ ಖಾತೆ ಸಚಿವ ರಾಮ್ ಮೋಹನ್ ನಾಯ್ಡು ಪ್ರತಿಕ್ರಿಯೆ ನೀಡಿದ್ದು, “ತಕ್ಷಣ ಯಾವುದೇ ತೀರ್ಮಾನಕ್ಕೂ ಬರಬೇಡಿ. ಅಂತಿಮ ವರದಿ ಬರುವ ತನಕ ಕಾಯಿರಿ” ಎಂದು ಹೇಳಿದ್ದಾರೆ.

Exit mobile version